ಬ್ರಿಸ್ಟಲ್‌(ಜು.08) : ಮೊದಲ ಪಂದ್ಯದಲ್ಲಿ ಅಬ್ಬರಿಸಿದ್ದ ಭಾರತ, ಇಂಗ್ಲೆಂಡ್‌ ವಿರುದ್ಧ 2ನೇ ಟಿ20ಯಲ್ಲಿ ಮಂಕಾಗಿತ್ತು. ಕಾರಣ, ಸ್ಪಿನ್ನರ್‌ಗಳಾದ ಕುಲ್ದೀಪ್‌ ಹಾಗೂ ಚಹಲ್‌ರನ್ನು ಇಂಗ್ಲೆಂಡ್‌ ಸಮರ್ಥವಾಗಿ ಎದುರಿಸಿತು. ಜತೆಗೆ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಕಂಡರು. ಸೋಲಿನಿಂದಾಗಿ ಒತ್ತಡಕ್ಕೆ ಸಿಲುಕಿರುವ ಭಾರತ, ಭಾನುವಾರ ಇಲ್ಲಿ ನಡೆಯಲಿರುವ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಕಣಕ್ಕಿಳಿಯಲಿದೆ.

3ನೇ ಹಾಗೂ ಅಂತಿಮ ಪಂದ್ಯ ಗೆಲ್ಲಲು ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಎಂ ಎಸ್ ಧೋನಿ ಮೊರೆ ಹೋಗಿದ್ದಾರೆ. ಧೋನಿ ಜೊತೆ ಕಳೆದ ಪಂದ್ಯದ ಸೋಲಿನ ಪರಾಮರ್ಶೆ ನಡೆಸಿರುವ ಕೊಹ್ಲಿ, ಅಂತಿಮ ಪಂದ್ಯಕ್ಕಾಗಿ ಧೋನಿ ತಂತ್ರಗಳನ್ನ ಜಾರಿಗೊಳಿಸೋ ಸಾಧ್ಯತೆ ಇದೆ.

ಶುಕ್ರವಾರದ ಸೋಲಿನ ಹೊರತಾಗಿಯೂ ಭಾರತಕ್ಕೆ ಸತತ 6ನೇ ಟಿ20 ಸರಣಿ ಗೆಲ್ಲುವ ಅವಕಾಶವಿದೆ. ಸೆಪ್ಟೆಂಬರ್‌ 2017ರಿಂದ ಅಜೇಯವಾಗಿ ಉಳಿದಿರುವ ಭಾರತ, ಕೊನೆ ಬಾರಿಗೆ ಟಿ20 ಸರಣಿ ಸೋತಿದ್ದು 2017ರ ಜುಲೈನಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ.

ಈ ಪಂದ್ಯದಲ್ಲೂ ಸ್ಪಿನ್ನರ್‌ಗಳು ಪ್ರಮುಖ ಪಾತ್ರ ವಹಿಸಲಿದ್ದಾರೆ. ಅದರಲ್ಲೂ ಕುಲ್ದೀಪ್‌ ಮೇಲೆ ಭಾರತ ತಂಡದ ನಾಯಕ ಕೊಹ್ಲಿ ಹೆಚ್ಚಿನ ನಿರೀಕ್ಷೆ ಇರಿಸಿದ್ದಾರೆ. ಆರಂಭಿಕರ ವೈಫಲ್ಯದ ಹೊರತಾಗಿಯೂ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಸಾಧ್ಯತೆ ಕಡಿಮೆ. 

ಮತ್ತೊಂದೆಡೆ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದ್ದು ಇಂಗ್ಲೆಂಡ್‌ ಕೈಹಿಡಿದಿದ್ದು, ಮತ್ತೊಮ್ಮೆ ಕುಲ್ದೀಪ್‌-ಚಹಲ್‌ ಜೋಡಿಯನ್ನು ದಂಡಿಸಿ ಸರಣಿಯನ್ನು ತನ್ನದಾಗಿಸಿಕೊಳ್ಳುವ ಲೆಕ್ಕಾಚಾರದಲ್ಲಿ ಆತಿಥೇಯ ತಂಡವಿದೆ. ಬೆನ್‌ ಸ್ಟೋಕ್ಸ್‌ ಈ ಪಂದ್ಯಕ್ಕೆ ಲಭ್ಯವಿದ್ದು, ಜೋ ರೂಟ್‌ ಬದಲಿಗೆ ಕಣಕ್ಕಿಳಿಯುವ ಸಂಭವವವಿದೆ.

ಪಂದ್ಯ ಆರಂಭ: ಸಂಜೆ 6.30ಕ್ಕೆ

ನೇರ ಪ್ರಸಾರ: ಸೋನಿ ಸಿಕ್ಸ್‌