ಮೆಲ್ಬರ್ನ್(ಜ.18): ಆಸ್ಟ್ರೇಲಿಯಾ ವಿರುದ್ದದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಗೆಲುವು ಸಾಧಿಸಿತು. ಈ ಮೂಲಕ ಏಕದಿನ ಸರಣಿಯನ್ನ 2-1 ಅಂತರದಲ್ಲಿ ವಶಪಡಿಸಿಕೊಂಡಿತು. ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಭಾರತ ದ್ವಿಪಕ್ಷೀಯ ಏಕದಿನ ಸರಣಿ ಗೆಲುವು ಸಾಧಿಸಿದೆ. ಟೆಸ್ಟ್ ಸರಣಿ ಬಳಿಕ ಏಕದಿನ ಸರಣಿ ಗೆದ್ದ ಭಾರತ ಐತಿಹಾಸಿಕ ಸಾಧನೆ ಮಾಡಿದೆ.

ಇದನ್ನೂ ಓದಿ: ಧೋನಿ ಅರ್ಧಶತಕ: ಸಚಿನ್ ಸಾಧನೆ ಸಾಲಿನಲ್ಲಿ ಮಾಜಿ ನಾಯಕ

ನಿರ್ಣಾಯಕ ಪಂದ್ಯದಲ್ಲಿ  231 ರನ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ನಿರೀಕ್ಷಿತ ಆರಂಭ ಪಡೆಯಲಿಲ್ಲ. ರೋಹಿತ್ ಶರ್ಮಾ 9 ಹಾಗೂ ಶಿಖರ್ ಧವನ್ 23 ರನ್ ಸಿಡಿಸಿ ಔಟಾದರು. ಆದರೆ ನಾಯಕ ವಿರಾಟ್ ಕೊಹ್ಲಿ ಹಾಗೂ ಎಂ.ಎಸ್.ಧೋನಿ ಜೊತೆಯಾಟ ತಂಡಕ್ಕೆ ನೆರವಾಯಿತು.

ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ ವಿರಾಟ್ ಕೊಹ್ಲಿ 3ನೇ ಪಂದ್ಯದಲ್ಲಿ 46 ರನ್ ಸಿಡಿಸಿದರು. ಈ ಮೂಲಕ ಕೇವಲ 4 ರನ್‌ಗಳಿಂದ ಅರ್ಧಶತಕ ವಂಚಿತರಾದರು. ಕೊಹ್ಲಿಗೆ ಉತ್ತಮ ಸಾಥ್ ನೀಡಿದ ಎಂ.ಎಸ್.ಧೋನಿ ತಂಡದ ಜವಾಬ್ದಾರಿ ಹೆಗಲ ಮೇಲೆ ಹೊತ್ತು ಬ್ಯಾಟಿಂಗ್ ನಡೆಸಿದರು.

ಆಸಿಸ್ ದಾಳಿಗೆ ದಿಟ್ಟ ಉತ್ತರ ನೀಡಿದ ಧೋನಿ ಅರ್ಧಶತಕ  ಸಿಡಿಸಿದರು. ಈ ಮೂಲಕ ಸರಣಿಯಲ್ಲಿ ಸತತ 3ನೇ ಅರ್ಧಶತಕ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾದರು. ಏಕದಿನ ಕ್ರಿಕೆಟ್‌ನಲ್ಲಿ 70ನೇ ಅರ್ಧಶತಕ ಸಿಡಿಸಿದರು. ಇತ್ತ ಧೋನಿಗೆ ಕೇದಾರ್ ಜಾದವ್ ಉತ್ತಮ ಸಾಥ್ ನೀಡಿದರು. 

ಇದನ್ನೂ ಓದಿ: ಭಾರತ ಎದುರಿನ ಸರಣಿಗೆ ನ್ಯೂಜಿಲೆಂಡ್ ತಂಡ ಪ್ರಕಟ

ಕೇದಾರ್ ಜಾಧವ್ ಅರ್ಧಶತಕ ಸಿಡಿಸಿ ಮಿಂಚಿದರು. ಭಾರತದ ಗೆಲುವಿಗೆ ಅಂತಿಮ 12 ಎಸೆತದಲ್ಲಿ 14 ರನ್‌ಗಳ ಅವಶ್ಯಕತೆ ಇತ್ತು. ಕೇದಾರ್ ಹಾಗೂ ಧೋನಿ ಸಿಡಿಸಿದ ಬೌಂಡರಿ ಭಾರತದ ಗೆಲುವನ್ನ ಖಚಿತಪಡಿಸಿತು. ಇನ್ನು 4 ಎಸೆತ ಬಾಕಿ ಇರುವಂತೆ ಟೀಂ ಇಂಡಿಯಾ 7 ವಿಕೆಟ್ ರೋಚಕ ಗೆಲುವು ಸಾಧಿಸಿತು. ಈ ಮೂಲಕ 2-1 ಅಂತರದಿಂದ ಸರಣಿ ವಶಪಡಿಸಿಕೊಂಡಿತು. ಧೋನಿ ಅಜೇಯ 87 ಹಾಗೂ ಕೇದಾರ್ ಅಜೇಯ 61 ರನ್ ಸಿಡಿಸಿದರು.

ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾದಲ್ಲಿ ಭಾರತ ದ್ವಿಪಕ್ಷೀಯ ಏಕದಿನ ಸರಣಿ ಗೆಲುವು ಸಾಧಿಸಿತು. ಇಷ್ಟೇ ಅಲ್ಲ ಆಸಿಸ್ ಪ್ರವಾಸದಲ್ಲಿ ಟೆಸ್ಟ್,ಏಕದಿನ ಹಾಗೂ ಟಿ20 ಸರಣಿ ಸೋಲದೇ ತವರಿಗೆ ಮರಳುತ್ತಿರುವ ತಂಡ ಅನ್ನೋ ಹೆಗ್ಗಳಿಗೆಕೂ ಕೊಹ್ಲಿ ಸೈನ್ಯ ಪಾತ್ರವಾಗಿದೆ.

ಇದನ್ನೂ ಓದಿ: ಚೆಹಲ್ ದಾಳಿಗೆ ಆಸಿಸ್ ತತ್ತರ; ಅಲ್ಪ ಮೊತ್ತಕ್ಕೆ ಆಲೌಟ್

3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 48.4 ಓವರ್‌ಗಳಲ್ಲಿ 230 ರನ್ ಸಿಡಿಸಿ ಆಲೌಟ್ ಆಯಿತು.  ಯಜುವೇಂದ್ರ ಚೆಹಾಲ್ 42 ರನ್ ನೀಡಿ 6 ವಿಕೆಟ್ ಕಬಳಿಸಿದರು.  ಈ ಮೂಲಕ ಆಸ್ಟ್ರೇಲಿಯಾದಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಏಕೈಕ ಸ್ಪಿನ್ನರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾದರು.