ಮಲೇಷ್ಯಾ(ಅ.22): ಪಂದ್ಯದ 33ನೇ ನಿಮಿಷದಲ್ಲಿ ಭಾರತ ತಂಡದ ಲಲಿತ್ ಉಪಾಧ್ಯಾಯ್ ದಾಖಲಿಸಿದ ಗೋಲ್‌ನಿಂದಾಗಿ ಭಾರತೀಯ ಹಾಕಿ ತಂಡ, ಇಂದು ನಡೆದ ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯಾವಳಿಯ ತನ್ನ ದ್ವಿತೀಯ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಯಿತು.

ಪಂದ್ಯದ 11ನೇ ನಿಮಿಷದಲ್ಲೇ ಜಿವೊನ್ ಜುಂಗ್ ವೊ ಮೂಲಕ ಗೋಲು ಗಳಿಸಿ ಭಾರತದ ವಿರುದ್ಧ 1-0 ಮುನ್ನಡೆ ಗಳಿಸಿದ್ದ ಕೊರಿಯಾ, ಗೆಲುವಿನ ಭೀತಿ ಹುಟ್ಟಿಸಿತ್ತು. ಪಂದ್ಯದ ದ್ವಿತೀಯಾರ್ಧ ಆರಂಭಗೊಂಡ ನಂತರ 33ನೇ ನಿಮಿಷದಲ್ಲಿ ಉಪಾಧ್ಯಾಯ್ ಗೋಲು ದಾಖಲಿಸಿಕೊಟ್ಟರು. ಆಗ ಇದು ಸಮಬಲ ತಂದಿತ್ತಾದರೂ ಪಂದ್ಯದ ಮುಗಿನ ನಂತರವಷ್ಟೇ ಈ ಗೋಲಿಗೆ ಮಹತ್ವ ಬಂದು ಭಾರತದ ಸೋಲು ತಪ್ಪಿಸಿದ ಗೋಲು ಎಂದು ಪರಿಗಣಿಸಲ್ಪಟ್ಟಿತು.

ಪಂದ್ಯದ ಆರಂಭದಿಂದಲೂ ಉತ್ತಮ ಪ್ರಾಬಲ್ಯ ತೋರಿದ ಕೊರಿಯಾ, ಭಾರತ ತಂಡದ ಹಲವಾರು ತಂತ್ರಗಾರಿಕೆಯನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿತ್ತು. ಇತ್ತ, ಭಾರತವೂ ಎದುರಾಳಿಗೆ ಯಾವುದೇ ರೀತಿಯಲ್ಲಿ ಸುಲಭ ತುತ್ತಾಗದೇ ಉತ್ತಮ ಪ್ರತಿರೋಧ ತೋರಿತು. ಆದರೂ, ಭಾರತದ ರಕ್ಷಣಾ ಕವಚವನ್ನು 11ನೇ ನಿಮಿಷದಲ್ಲಿ ಬೇಧಿಸುವಲ್ಲಿ ಯಶಸ್ವಿಯಾಗಿದ್ದ ಕೊರಿಯಾ ಗೋಲು ದಾಖಲಿಸುವಲ್ಲಿ ಯಶಸ್ವಿಯಾಗಿದ್ದರೆ, ಭಾರತವೂ ಆನಂತರ ಎದುರಾಳಿಗಳ ಕೋಟೆಗೆ ಲಗ್ಗೆ ಹಾಕಿ ಗೋಲು ದಾಖಲಿಸಿತ್ತು.

ನಾಳೆ ಭಾರತ- ಪಾಕ್ ಮುಖಾಮುಖಿ

ಏಷ್ಯಾ ಹಾಕಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿನ ತನ್ನ ಮುಂದಿನ ಪಂದ್ಯದಲ್ಲಿ ಭಾರತವು, ಪಾಕಿಸ್ತಾನ ವಿರುದ್ಧ ಸೆಣಸಲಿದೆ. ಭಾನುವಾರದ ಈ ಪಂದ್ಯ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಹಾಕಿ ತಂಡದ ತರಬೇತುದಾರ ಖವಾಜಾ ಜುನೈದ್, ‘‘ಭಾರತ-ಪಾಕಿಸ್ತಾನ ನಡುವಿನ ಹಾಕಿ ಪಂದ್ಯ ಯಾವತ್ತೂ ಭಾವನೆಗಳ ಸಮ್ಮಿಶ್ರಣ. ಭಾನುವಾರದ ಪಂದ್ಯದಲ್ಲಿ ನಾವು ಭಾರತದ ವಿರುದ್ಧ ಉತ್ತಮ ಹೋರಾಟ ನೀಡುತ್ತೇವೆ’’ ಎಂದು ತಿಳಿಸಿದರು.