Asianet Suvarna News Asianet Suvarna News

ಏಷ್ಯಾಡ್‌ಗೆ ಭಾರತದ 634 ಅಥ್ಲೀಟ್ಸ್‌ ಸ್ಪರ್ಧೆ: ಹೊಸ ದಾಖಲೆ!

ಈ ಬಾರಿ ಒಟ್ಟು 38 ಕ್ರೀಡೆಗಳಲ್ಲಿ ಭಾರತೀಯರು ಸ್ಪರ್ಧಿಸಲಿದ್ದಾರೆ. ಇತ್ತೀಚೆಗೆ ಚೆಸ್‌ ವಿಶ್ವಕಪ್‌ನಲ್ಲಿ ರನ್ನರ್‌-ಅಪ್‌ ಆದ ಆರ್‌.ಪ್ರಜ್ಞಾನಂದ ಸಹ ಏಷ್ಯಾಡ್‌ನಲ್ಲಿ ಸ್ಪರ್ಧಿಸಲಿದ್ದು, ಪದಕ ಗೆಲ್ಲುವ ನಿರೀಕ್ಷೆ ಇದೆ.

India clears 634 athletes for Asian Games 2023 participation kvn
Author
First Published Aug 26, 2023, 10:00 AM IST

ನವದೆಹಲಿ(ಆ.26): ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8ರ ವರೆಗೆ ಚೀನಾದ ಹ್ಯಾಂಗ್ಝುನಲ್ಲಿ ನಡೆಯಲಿರುವ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತದಿಂದ 646 ಅಥ್ಲೀಟ್‌ಗಳು ಸ್ಪರ್ಧಿಸಲಿದ್ದು, ಇದು ದಾಖಲೆ ಎನಿಸಿದೆ. 2018ರ ಗೇಮ್ಸ್‌ನಲ್ಲಿ ಭಾರತದ 572 ಅಥ್ಲೀಟ್‌ಗಳು ಕಣಕ್ಕಿಳಿದು, 16 ಚಿನ್ನ ಸೇರಿ ಒಟ್ಟು 70 ಪದಕ ಗೆದ್ದಿದ್ದರು.

ಈ ಬಾರಿ ಒಟ್ಟು 38 ಕ್ರೀಡೆಗಳಲ್ಲಿ ಭಾರತೀಯರು ಸ್ಪರ್ಧಿಸಲಿದ್ದಾರೆ. ಅಥ್ಲೆಟಿಕ್ಸ್‌ನಲ್ಲಿ ಪುರುಷ, ಮಹಿಳೆಯರು ಸೇರಿ 65, ಫುಟ್ಬಾಲ್‌ನಲ್ಲಿ 44, ಹಾಕಿಯಲ್ಲಿ 36 ಹಾಗೂ ಸೈಲಿಂಗ್‌ನಲ್ಲಿ 33, ಶೂಟಿಂಗ್‌ ಹಾಗೂ ಕ್ರಿಕೆಟ್‌ನಲ್ಲಿ ತಲಾ 30 ಮಂದಿ ಸ್ಪರ್ಧಿಸಲಿದ್ದಾರೆ. ಇತ್ತೀಚೆಗೆ ಚೆಸ್‌ ವಿಶ್ವಕಪ್‌ನಲ್ಲಿ ರನ್ನರ್‌-ಅಪ್‌ ಆದ ಆರ್‌.ಪ್ರಜ್ಞಾನಂದ ಸಹ ಏಷ್ಯಾಡ್‌ನಲ್ಲಿ ಸ್ಪರ್ಧಿಸಲಿದ್ದು, ಪದಕ ಗೆಲ್ಲುವ ನಿರೀಕ್ಷೆ ಇದೆ. ಇನ್ನು ಅಥ್ಲೆಟಿಕ್ಸ್‌, ಶೂಟಿಂಗ್‌, ಕುಸ್ತಿ, ಬಾಕ್ಸಿಂಗ್‌, ಆರ್ಚರಿ ಸ್ಪರ್ಧೆಗಳಲ್ಲಿ ಭಾರತ ಪದಕ ಭರವಸೆ ಇಟ್ಟುಕೊಂಡಿದೆ.

ಸೋತರೂ ಕಣ್ಣಿಗೆ ಗಾಯ ಆಗಿದ್ದಕ್ಕೆ ಫೈನಲ್‌ಗೆ ಚಾನ್ಸ್‌!

ಬುಡಾಪೆಸ್ಟ್‌: 200 ಮೀ. ಓಟದ ಸೆಮಿಫೈನಲ್‌ನಲ್ಲಿ ಸೋತ ಹೊರತಾಗಿಯೂ ಜಮೈಕಾದ ಆ್ಯಂಡ್ರ್ಯೂ ಹಡ್ಸನ್‌ಗೆ ವಿಶ್ವ ಅಥ್ಲೆಟಿಕ್ಸ್‌ನ ಫೈನಲ್‌ನಲ್ಲಿ ಸ್ಪರ್ಧಿಸಲು ಅವಕಾಶ ಲಭಿಸಿತು. ಸ್ಪರ್ಧೆಗೂ ಮುನ್ನ ಹಡ್ಸನ್‌ ಸೇರಿ ಹಲವು ಅಥ್ಲೀಟ್‌ಗಳನ್ನು ಕರೆದೊಯ್ಯುವ ವಾಹನ ಮತ್ತೊಂದು ವಾಹನಕ್ಕೆ ಕ್ರೀಡಾಂಗಣದಲ್ಲೇ ಡಿಕ್ಕಿ ಹೊಡೆಯಿತು. ಇದರಿಂದ ಹಡ್ಸನ್‌ ಕಣ್ಣಿಗೆ ತರಚಿದ ಗಾಯವಾಗಿದೆ. ಇದರ ಹೊರತಾಗಿಯೂ ಸ್ಪರ್ಧಿಸಿದ ಅವರು ಒಟ್ಟಾರೆ 14ನೇ ಸ್ಥಾನಿಯಾದರು. ಆದರೆ 8 ಮಂದಿಗೆ ಮಾತ್ರ ಫೈನಲ್‌ಗೇರಬಹುದಿತ್ತು. ದೃಷ್ಠಿ ಸಮಸ್ಯೆಯಿಂದಲೇ ಓಡಿದ್ದರಿಂದ ತಮಗೆ ಫೈನಲ್‌ನಲ್ಲಿ ಸ್ಪರ್ಧಿಸುವ ಅವಕಾಶ ನೀಡಬೇಕೆಂದು ಹಡ್ಸನ್‌ ಮಾಡಿದ ಮನವಿಯನ್ನು ಆಯೋಜಕರು ಪುರಸ್ಕರಿಸಿದ್ದಾರೆ.

ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌: ವಿಶ್ವ ನಂ.1 ವಿಕ್ಟರ್‌ ಆಕ್ಸೆಲ್ಸನ್‌ ಮಣಿಸಿ ಪದಕ ಖಚಿತಪಡಿಸಿಕೊಂಡ ಪ್ರಣಯ್‌

ನೀರಜ್‌ ಚೋಪ್ರಾಗೆ ಒಲಿಂಪಿಕ್ಸ್‌ ಟಿಕೆಟ್‌!

ಬುಡಾಪೆಸ್ಟ್‌(ಹಂಗೇರಿ): ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಐತಿಹಾಸಿಕ ಚಿನ್ನ ತಂದುಕೊಟ್ಟ ಚಾಂಪಿಯನ್‌ ಅಥ್ಲೀಟ್‌, ಭಾರತದ ತಾರಾ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ಇಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ಅರ್ಹತಾ ಸುತ್ತಿನಲ್ಲಿ ಅವರು ಮೊದಲ ಪ್ರಯತ್ನದಲ್ಲೇ 88.77 ಮೀ. ದೂರಕ್ಕೆ ಜಾವೆಲಿನ್‌ ಎಸೆದು ಫೈನಲ್‌ಗೆ ಪ್ರವೇಶಿಸುವುದರ ಜೊತೆಗೆ, ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಸಹ ಅರ್ಹರಾದರು. ಇದೇ ವೇಳೆ, ಡಿ.ಪಿ.ಮನು ಹಾಗೂ ಕಿಶೋರ್‌ ಜೆನಾ ಸಹ ಫೈನಲ್‌ ಪ್ರವೇಶಿಸಿದ್ದು, ವಿಶ್ವ ಚಾಂಪಿಯನ್‌ಶಿಪ್‌ನ ಸ್ಪರ್ಧೆಯೊಂದರಲ್ಲಿ ಭಾರತದ ಮೂವರು ಫೈನಲ್‌ ಪ್ರವೇಶಿಸಿದ್ದು ಇದೇ ಮೊದಲು.

ನಾಳೆ ಫೈನಲ್‌

ಪುರುಷರ ಜಾವೆಲಿನ್‌ ಎಸೆತ ಸ್ಪರ್ಧೆಯ ಫೈನಲ್‌ ಭಾನುವಾರ ನಡೆಯಲಿದ್ದು, ಭಾರತ ಪದಕ ಗೆಲ್ಲುವ ನಿರೀಕ್ಷೆಯಲ್ಲಿದೆ. ಈಗಾಗಲೇ ಒಲಿಂಪಿಕ್ಸ್, ಕಾಮನ್‌ವೆಲ್ತ್‌, ಏಷ್ಯನ್‌ ಗೇಮ್ಸ್‌ ಹಾಗೂ ಡೈಮಂಡ್‌ ಲೀಗ್‌ ಕಿರೀಟ ಗೆದ್ದಿರುವ ನೀರಜ್‌, ವಿಶ್ವ ಕೂಟದಲ್ಲೂ ಚಿನ್ನ ಪಡೆಯುವ ಕಾತರದಲ್ಲಿದ್ದಾರೆ. ಅರ್ಹತಾ ಸುತ್ತಿನ ಪ್ರದರ್ಶನದ ಮೂಲಕ ಡಿ.ಪಿ.ಮನು, ಕಿಶೋರ್‌ ಕೂಡಾ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ. ಇವರಿಗೆ ಚೆಕ್‌ ಗಣರಾಜ್ಯದ ಜಾಕುಬ್‌, ಪಾಕಿಸ್ತಾನದ ನದೀಂ, ಜರ್ಮನಿಯ ಜೂಲಿಯನ್‌ ವೆಬೆರ್‌ರಿಂದ ಕಠಿಣ ಸ್ಪರ್ಧೆ ಎದುರಾಗುವ ನಿರೀಕ್ಷೆ ಇದೆ.

Chess World Cup 2023: ಫೈನಲ್‌ನಲ್ಲಿ ಮುಗ್ಗರಿಸಿದ ಪ್ರಜ್ಞಾನಂದ ಗೆದ್ದ ನಗದು ಬಹುಮಾನವೆಷ್ಟು ಗೊತ್ತಾ?

ಇಸ್ರೋ, ಪ್ರಜ್ಞಾನಂದಗೆ ನೀರಜ್‌ ಅಭಿನಂದನೆ

ಬುಡಾಪೆಸ್ಟ್‌: ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ ಪ್ರವೇಶಿಸಿದ ಬಳಿಕ ಸುದ್ದಿಗಾರರು ನೀರಜ್‌ರನ್ನು ಚಂದ್ರಯಾನ-3ನಿಂದ ನೀವು ಸ್ಫೂರ್ತಿ ಪಡೆದಿರಾ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ನೀರಜ್‌, ‘ಖಂಡಿತವಾಗಿಯೂ ಇಸ್ರೋದ ಯಶಸ್ಸು ನನ್ನಲ್ಲಿ ಸ್ಫೂರ್ತಿ ತುಂಬಿದೆ. ಚಂದ್ರಯಾನ-3 ಯಶಸ್ವಿಯಾಗಿಸಿದ ಎಲ್ಲರಿಗೂ ಅಭಿನಂದನೆಗಳು. ಚೆಸ್‌ ವಿಶ್ವಕಪ್‌ನ ಫೈನಲ್‌ನಲ್ಲಿ ಆಡಿದ ಪ್ರಜ್ಞಾನಂದ ಕೂಡ ನನಗೆ ಸ್ಫೂರ್ತಿ ನೀಡಿದ್ದಾರೆ. ಫೈನಲ್‌ನಲ್ಲಿ ಅವರು ಬಹಳ ಚೆನ್ನಾಗಿ ಆಡಿದರು. ಅವರನ್ನೂ ಅಭಿನಂದಿಸಲು ಇಚ್ಚಿಸುತ್ತೇನೆ’ ಎಂದರು. ಇನ್ನು ಅರ್ಹತಾ ಸುತ್ತಿನ ವೇಳೆ ತಮ್ಮ ದೇಶಬಾಂಧವರಾದ ಡಿ.ಪಿ.ಮನು ಹಾಗೂ ಕಿಶೋರ್‌ ಜೆನಾ ಅವರನ್ನೂ ನೀರಜ್‌ ಹುರಿದುಂಬಿಸುತ್ತಿದ್ದ ದೃಶ್ಯಗಳು ಕಂಡುಬಂದವು.

Latest Videos
Follow Us:
Download App:
  • android
  • ios