ಹೈದರಾಬಾದ್[ಅ.12]: ಭಾರತ-ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್’ನ ಮೊದಲ ದಿನ ಕೆರಿಬಿಯನ್ ಪಡೆ 7 ವಿಕೆಟ್ ಕಳೆದುಕೊಂಡು 295 ರನ್ ಬಾರಿಸಿದೆ. ರೋಸ್ಟನ್ ಚೇಸ್ ಅಜೇಯ 98 ರನ್ ಬಾರಿಸಿದ್ದು, ಶತಕದ ಹೊಸ್ತಿಲಲ್ಲಿದ್ದಾರೆ.

ಹೈದರಾಬಾದ್’ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿರುವ ಇಂಡ-ವಿಂಡೀಸ್ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳು ಸಮಬಲದ ಪ್ರದರ್ಶನ ತೋರಿದವು. ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ಮಧ್ಯಮ ಕ್ರಮಾಂಕದಲ್ಲಿ ದಿಟ್ಟ ಪ್ರದರ್ಶನ ತೋರುವ ಮೂಲಕ ಭಾರತಕ್ಕೆ ತಿರುಗೇಟು ನೀಡುವಲ್ಲಿ ಸಫಲವಾಯಿತು. ನಾಯಕ ಜೇಸನ್ ಹೋಲ್ಡರ್ 52 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ರೋಸ್ಟನ್ ಚೇಸ್ 98 ರನ್ ಬಾರಿಸಿದ್ದು ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಎರಡನೇ ಟೆಸ್ಟ್’ನ ಮೊದಲ ದಿನ ನಿರ್ಮಾಣವಾದ ಕೆಲವು ಅಪರೂಪದ ದಾಖಲೆಗಳು ನಿಮ್ಮ ಮುಂದೆ..

294- ಶಾರ್ದೂಲ್ ಠಾಕೂರ್ ಟೀಂ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ 294ನೇ ಕ್ರಿಕೆಟಿಗ ಎನ್ನುವ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

3- ಭಾರತ ಪರ ಕಳೆದ ಮೂರು ಟೆಸ್ಟ್ ಪಂದ್ಯಗಳಲ್ಲಿ ಮೂರು ಕ್ರಿಕೆಟಿಗರು ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್’ನಲ್ಲಿ ಹನುಮ ವಿಹಾರಿ, ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್’ನಲ್ಲಿ ಪೃಥ್ವಿ ಶಾ ಬಳಿಕ ಇದೀಗ ಎರಡನೇ ಟೆಸ್ಟ್ ಪಂದ್ಯಗಳಲ್ಲಿ ಶಾರ್ದೂಲ್ ಠಾಕೂರ್ ಪದಾರ್ಪಣೆ ಮಾಡಿದ್ದಾರೆ.

5- ಪ್ರಸಕ್ತ ವರ್ಷದಲ್ಲೇ ಟೀಂ ಇಂಡಿಯಾ ಪರ ಐವರು ಕ್ರಿಕೆಟಿಗರು ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದಾರೆ. ಜನವರಿಯಲ್ಲಿ ದಕ್ಷಿಣ ಆಫ್ರಿಕಾ ಎದುರು ಜಸ್ಪ್ರೀತ್ ಬುಮ್ರಾ ಪದಾರ್ಪಣೆ ಮಾಡಿದರೆ, ಆ ಬಳಿಕ ಪಂತ್ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್’ನಲ್ಲಿ ಟೆಸ್ಟ್ ಕ್ರಿಕೆಟ್’ಗೆ ಕಾಲಿಟ್ಟರು. ನಂತರದ ಸರದಿ ಹನುಮಾ ವಿಹಾರಿ, ಪೃಥ್ವಿ ಶಾ ಹಾಗೂ ಶಾರ್ದೂಲ್ ಠಾಕೂರ್ ಅವರದ್ದು. ಈ ಮೊದಲು 2013ರಲ್ಲೂ ಭಾರತ ಪರ ಐವರು ಕ್ರಿಕೆಟಿಗರು ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರು. ರೋಹಿತ್ ಶರ್ಮಾ, ಶಿಖರ್ ಧವನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ ಮತ್ತು ಅಜಿಂಕ್ಯ ರಹಾನೆ ಟೆಸ್ಟ್ ಕ್ರಿಕೆಟ್’ಗೆ ಕಾಲಿಟ್ಟಿದ್ದರು.

100- ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಕುಲ್ದೀಪ್ ಯಾದವ್ ನೂರು ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಸುನಿಲ್ ಆ್ಯಂಬ್ರಿಸ್ ವಿಕೆಟ್ ಕಬಳಿಸುವುದರೊಂದಿಗೆ ಈ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ.

500- ಕಿರಾನ್ ಪೊವೆಲ್ ವಿಕೆಟ್ ಕಬಳಿಸುವ ಮೂಲಕ ಅಶ್ವಿನ್ ಪ್ರಥಮ ದರ್ಜೆ ಕ್ರಿಕೆಟ್’ನಲ್ಲಿ 500 ವಿಕೆಟ್ ಕಬಳಿಸಿದ ಸಾಧನೆ ಮಾಡಿದರು.

103- ಯುವ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಶಭ್ ಪಂತ್ ಇದುವರೆಗೆ 4 ಪಂದ್ಯಗಳಲ್ಲಿ 103 ರನ್’ಗಳನ್ನು ಇತರೆ ರನ್’ಗಳ ರೂಪದಲ್ಲಿ ಬಿಟ್ಟುಕೊಟ್ಟಿದ್ದಾರೆ. ವಿಕೆಟ್ ಕೀಪಿಂಗ್’ನಲ್ಲಿ ಪಂತ್ ಸುಧಾರಿಸಿಕೊಳ್ಳದಿದ್ದರೆ ಮುಂದೆ ದುಬಾರಿಯಾಗಬಹುದು.