ಹ್ಯಾಮಿಲ್ಟನ್[ಫೆ.10]: ಕಾಲಿನ್ ಮನ್ರೋ ಆಕರ್ಷಕ ಅರ್ಧಶತಕ, ಟಿಮ್ ಸೈಫರ್ಟ್, ಕಾಲಿನ್ ಡಿ ಗ್ರಾಂಡ್’ಹೋಂ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ನ್ಯೂಜಿಲೆಂಡ್ ತಂಡವು ನಿಗದಿತ 20 ಓವರ್’ಗಳಲ್ಲಿ 4 ವಿಕೆಟ್ ಕಳೆದುಕೊಂಡು 212 ರನ್ ಬಾರಿಸಿದ್ದು, ಟೀಂ ಇಂಡಿಯಾಗೆ ಸವಾಲಿನ ಗುರಿ ನೀಡಿದೆ.

ಧೋನಿ ಮಿಂಚಿನ ಸ್ಟಂಪಿಂಗ್’ಗೆ ಪೆವಿಲಿಯನ್ ಸೇರಿದ ಸೈಫರ್ಟ್

ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನ್ಯೂಜಿಲೆಂಡ್ ಸ್ಫೋಟಕ ಆರಂಭ ಪಡೆಯಿತು.ಟಿಮ್ ಸೈಫರ್ಟ್-ಕಾಲಿನ್ ಮನ್ರೋ ಜೋಡಿ ಪವರ್ ಪ್ಲೆನಲ್ಲಿನ ಮೊದಲ 6 ಓವರ್’ಗಳಲ್ಲಿ 11ರ ಸರಾಸರಿಯಲ್ಲಿ 66 ರನ್ ಬಾರಿಸಿತ್ತು. ಮೊದಲ ಟಿ20 ಪಂದ್ಯದ ಹೀರೋ ಸೈಫರ್ಟ್ ಕೇವಲ 25 ಎಸೆತಗಳಲ್ಲಿ ತಲಾ 3 ಬೌಂಡರಿ ಹಾಗೂ ಸಿಕ್ಸರ್’ಗಳ ನೆರವಿನಿಂದ 43 ರನ್ ಸಿಡಿಸಿದರು. ಈ ವೇಳೆ ಧೋನಿ ಮಾಡಿದ ಮಿಂಚಿನ ಸ್ಟಂಪಿಂಗ್’ಗೆ ಸೈಫರ್ಟ್ ಪೆವಿಲಿಯನ್ ಸೇರಬೇಕಾಯಿತು. ಮೊದಲ ವಿಕೆಟ್’ಗೆ ಈ ಜೋಡಿ 80 ರನ್ ಕಲೆಹಾಕಿತು. ಆಬಳಿಕ ನಾಯಕ ವಿಲಿಯಮ್ಸನ್ ಕೂಡಿಕೊಂಡ ಮನ್ರೋ ಮತ್ತೆ ರನ್ ವೇಗ ಹೆಚ್ಚಿಸಿದರು. ಕೇವಲ 40 ಎಸೆತಗಳಲ್ಲಿ ತಲಾ 5 ಬೌಂಡರಿ ಹಾಗೂ ಸಿಕ್ಸರ್’ಗಳ ನೆರವಿನಿಂದ 72 ರನ್ ಬಾರಿಸಿ ಕುಲ್ದೀಪ್’ಗೆ ಎರಡನೇ ಬಲಿಯಾದರು. ಆಬಳಿಕ ನಾಯಕ ವಿಲಿಯಮ್ಸನ್ [27], ಕಾಲಿನ್ ಗ್ರಾಂಡ್’ಹೋಂ[30], ಡೇರಲ್ ಮಿಚೆಲ್[19*] ಹಾಗೂ ರಾಸ್ ಟೇಲರ್ [14*] ಎರ್ಜರಿ ಬ್ಯಾಟಿಂಗ್ ನೆರವಿನಿಂದ ತಂಡ ಇನ್ನೂರರ ಗಡಿ ದಾಟಿತು.

ಭಾರತ ಪರ ಕುಲ್ದೀಪ್ ಯಾದವ್ 2 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್ ಹಾಗೂ ಖಲೀಲ್ ಅಹಮ್ಮದ್ ತಲಾ ಒಂದೊಂದು ವಿಕೆಟ್ ಪಡೆದರು. ಇನ್ನು ಪಾಂಡ್ಯ ಬ್ರದರ್ಸ್ ಈ ಪಂದ್ಯದಲ್ಲಿ ದುಬಾರಿಯಾದರು. ಹಾರ್ದಿಕ್ ಪಾಂಡ್ಯ 4 ಓವರ್’ಗಳಲ್ಲಿ 11ರ ಸರಾಸರಿಯಂತೆ 44 ರನ್ ಬಿಟ್ಟುಕೊಟ್ಟರೆ, ಕಳೆದ ಪಂದ್ಯದ ಹೀರೋ ಕೃನಾಲ್ ಪಾಂಡ್ಯ 13.50 ಸರಾಸರಿಯಂತೆ 54 ರನ್ ಬಿಟ್ಟುಕೊಟ್ಟರು. ಆದರೆ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.

ಸಂಕ್ಷಿಪ್ತ ಸ್ಕೋರ್:

ನ್ಯೂಜಿಲೆಂಡ್: 212/4
ಕಾಲಿನ್ ಮನ್ರೋ: 72
ಕುಲ್ದೀಪ್ ಯಾದವ್: 26/2