ಫೈನಲ್'ನಲ್ಲಿ ಸೋತರೂ ತಂಡಕ್ಕೆ 5 ಲಕ್ಷ ಡಾಲರ್ ಹಣ ಸಿಗಲಿದೆ. ಅಂದರೆ, ಸುಮಾರು ಮೂರು ಕೋಟಿ ರೂ.ನಷ್ಟು ಹಣವು ಬೆಂಗಳೂರಿಗೆ ಸಿಗುವುದು ನಿಶ್ಚಿತ.

ದೋಹಾ(ನ. 11): ಈ ಬಾರಿ ಎಎಫ್'ಸಿ ಕಪ್'ನಲ್ಲಿ ಬಹುಮಾನದ ಮೊತ್ತವನ್ನು ಹೆಚ್ಚಿಸಲಾಗಿದೆ. ಚಾಂಪಿಯನ್ ಆದ ತಂಡಕ್ಕೆ ಬರೋಬ್ಬರಿ 1 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 6.68 ಕೋಟಿ ರೂ.) ಸಿಗಲಿದೆ. ಫೈನಲ್ ತಲುಪುವ ಮೂಲಕ ಭಾರತದ ಮಟ್ಟಿಗೆ ಹೊಸ ಮೈಲಿಗಲ್ಲು ಸೃಷ್ಟಿಸಿರುವ ಬೆಂಗಳೂರು ಎಫ್'ಸಿಗೆ ಈಗ ಚಾಂಪಿಯನ್ ಆಗುವ ಅಪೂರ್ವ ಅವಕಾಶ ಸಿಕ್ಕಿದೆ. ಚಾಂಪಿಯನ್ ಪಟ್ಟದ ಜೊತೆಗೆ ಕೋಟಿ ಕೋಟಿ ಹಣವೂ ದಕ್ಕಲಿದೆ.

ಫೈನಲ್'ನಲ್ಲಿ ಸೋತರೂ ತಂಡಕ್ಕೆ 5 ಲಕ್ಷ ಡಾಲರ್ ಹಣ ಸಿಗಲಿದೆ. ಅಂದರೆ, ಸುಮಾರು ಮೂರು ಕೋಟಿ ರೂ.ನಷ್ಟು ಹಣವು ಬೆಂಗಳೂರಿಗೆ ಸಿಗುವುದು ನಿಶ್ಚಿತ.

ಸೆಮಿಫೈನಲ್, ಕ್ವಾರ್ಟರ್'ಫೈನಲ್ ಮತ್ತು ಪ್ರೀಕ್ವಾರ್ಟರ್'ಫೈನಲ್ ಪ್ರವೇಶಿಸಿದ ತಂಡಗಳಿಗೂ ಈ ಬಾರಿ ಬಹುಮಾನ ನೀಡಲಾಗುತ್ತಿದೆ. ಕಳೆದ ವರ್ಷದವರೆಗೂ ಚಾಂಪಿಯನ್ ಹಾಗೂ ರನ್ನರ್'ಅಪ್'ಗಳಿಗೆ ತಲಾ 3.5 ಲಕ್ಷ ಡಾಲರ್ ಹಾಗೂ 2.5 ಲಕ್ಷ ಡಾಲರ್ ಹಣವನ್ನು ಬಹುಮಾನವಾಗಿ ನೀಡಲಾಗುತ್ತಿತ್ತು. ಆದರೆ, ಈ ಬಾರಿ ನವದೆಹಲಿಯಲ್ಲಿ ನಡೆದ ಎಎಫ್'ಸಿ ಕಾರ್ಯಕಾರಿ ಸಮಿತಿಯಲ್ಲಿ ಬಹುಮಾನದ ಮೊತ್ತವನ್ನು ಏರಿಸಲು ಹಾಗೂ ಪ್ರೀಕ್ವಾರ್ಟರ್'ಫೈನಲಿಸ್ಟ್'ಗಳಿಗೂ ಬಹುಮಾನ ವಿಸ್ತರಿಸಲು ನಿರ್ಧರಿಸಲಾಯಿತು.

ಯಾರಿಗೆಷ್ಟು ಬಹುಮಾನ?
ವಿಜೇತ ತಂಡಕ್ಕೆ: 10 ಲಕ್ಷ ಡಾಲರ್ (6.68 ಕೋಟಿ ರೂ.)
ರನ್ನರ್ ಅಪ್: 5 ಲಕ್ಷ ಡಾಲರ್ (3.34 ಕೋಟಿ ರೂ.)
ಸೆಮಿಫೈನಲಿಸ್ಟ್: 40 ಸಾವಿರ ಡಾಲರ್ (26.7 ಲಕ್ಷ ರೂ.)
ಕ್ವಾರ್ಟರ್'ಫೈನಲಿಸ್ಟ್: 25 ಸಾವಿರ ಡಾಲರ್ (16.7 ಲಕ್ಷ ರೂ.)
ಪ್ರೀಕ್ವಾರ್ಟರ್'ಫೈನಲಿಸ್ಟ್: 15 ಸಾವಿರ ಡಾಲರ್ (10 ಲಕ್ಷ ರೂ.)

ಈ ಬಾರಿಯ ಎಎಫ್'ಸಿ ಕಪ್ ಪ್ರಶಸ್ತಿಗಾಗಿ ಬೆಂಗಳೂರು ಎಫ್'ಸಿ ಮತ್ತು ಇರಾಕ್'ನ ಏರ್ ಫೋರ್ಸ್ ಕ್ಲಬ್ ನಡುವೆ ಹಣಾಹಣಿ ನಡೆಯಲಿದೆ. ಕಳೆದ ಬಾರಿಯ ಚಾಂಪಿಯನ್ ಮಲೇಷ್ಯಾದ ಜೊಹೋರ್ ತಂಡವನ್ನು ಸೋಲಿಸಿ ಫೈನಲ್ ಏರುವ ಮೂಲಕ ಬೆಂಗಳೂರು ಎಫ್'ಸಿ ಹೊಸ ಇತಿಹಾಸ ನಿರ್ಮಿಸಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಚಾಂಪಿಯನ್ ಆಗುವ ಅವಕಾಶ ಪಡೆದಿದೆ. ಈ ಮಹತ್ವದ ಪಂದ್ಯ ಭಾರತೀಯ ಕಾಲಮಾನದಲ್ಲಿ ಇಂದು ಶನಿವಾರ ರಾತ್ರಿ 9:30ಕ್ಕೆ ಆರಂಭಗೊಳ್ಳಲಿದೆ.