ಪಾಕ್ ಕ್ರಿಕೆಟಿಗ ಉಮರ್ ಅಕ್ಮಲ್ ಫಿಕ್ಸಿಂಗ್ ಬಾಂಬ್-ತನಿಖೆಗೆ ಆದೇಶಿಸಿದ ಐಸಿಸಿ

First Published 25, Jun 2018, 2:25 PM IST
ICC to take Umar Akmal’s comments seriously
Highlights

ಪಾಕಿಸ್ತಾನ ಕ್ರಿಕೆಟಿಗ ಉಮರ್ ಅಕ್ಮಲ್ ಐಸಿಸಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಭಾರತ-ಪಾಕಿಸ್ತಾನ ನಡುವಿನ 2015ರ ವಿಶ್ವಕಪ್ ಪಂದ್ಯದಲ್ಲಿ ಸ್ಫಾಟ್ ಫಿಕ್ಸಿಂಗ್ ನಡೆಸುವಂತೆ ಬುಕ್ಕಿಗಳು ತನ್ನನ್ನ ಸಂಪರ್ಕಿಸಿದ್ದರು ಎಂಬ ಹೇಳಿಕೆ ಅಕ್ಮಲ್‌ಗೆ ತಿರುಗುಬಾಣವಾಗಿದೆ. ಈ ಪ್ರಕರಣ ತಿರುವು ಪಡೆದಿದ್ದೆಲ್ಲಿ? ಇಲ್ಲಿದೆ ವಿವರ

ಕರಾಚಿ(ಜೂ.25): ಕ್ರಿಕೆಟ್‌ಗಿಂತ ಹೆಚ್ಚು ವಿವಾದಗಳಿಂದಲೇ ಸುದ್ದಿಯಾಗಿರುವ ಪಾಕಿಸ್ತಾನ ಕ್ರಿಕೆಟಿಗ ಉಮರ್ ಅಕ್ಮಲ್ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅಕ್ಮಲ್ ಫಿಕ್ಸಿಂಗ್ ಬಾಂಬ್ ಸಿಡಿಸಿದ್ದರು. ಇದೀಗ ಅಕ್ಮಲ್ ಹೇಳಿಕೆಯನ್ನ ಐಸಿಸಿ ಗಂಭೀರವಾಗಿ ಪರಿಗಣಿಸಿದೆ.

2015ರ ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯಕ್ಕೂ ಮುನ್ನ ಬುಕ್ಕಿಗಳು ಸ್ಪಾಟ್ ಫಿಕ್ಸಿಂಗ್ ನಡೆಸುವಂತೆ ತನ್ನನ್ನ ಸಂಪರ್ಕಿಸಿದ್ದರು ಎಂದು ಅಕ್ಮಲ್ ಹೇಳಿದ್ದರು. ಪಂದ್ಯದಿಂದ ಹೊರಗುಳಿಯಬೇಕು ಅಥವಾ ಎರಡು ಡಾಟ್ ಬಾಲ್ ಆಡುವಂತೆ ಬುಕ್ಕಿಗಳು ಸೂಚಿಸಿದ್ದರು. ಇದಕ್ಕಾಗಿ 13 ಕೋಟಿ ರೂಪಾಯಿ ಆಫರ್ ನೀಡಿದ್ದರು ಎಂದು ಅಕ್ಮಲ್ ಹೇಳಿದ್ದರು.

ಇದನ್ನು ಓದಿ: 2015ರ ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯ ಫಿಕ್ಸ್ ಮಾಡಲು ಬುಕ್ಕಿಗಳು ಪ್ರಯತ್ನಿಸಿದ್ರಾ?

ಮೂರು ವರ್ಷಗಳ ಬಳಿಕ ಸ್ಪಾಟ್ ಫಿಕ್ಸಿಂಗ್ ಮಾಹಿತಿಯನ್ನ ಬಹಿರಂಗ ಪಡಿಸಿದ ಅಕ್ಮಲ್‌ಗೆ ಸಂಕಷ್ಟ ಶುರುವಾಗಿದೆ. ಅಕ್ಮಲ್ ಹೇಳಿಕೆಯನ್ನ ಗಂಭೀರವಾಗಿ ಪರಿಗಣಿಸಿರುವ ಐಸಿಸಿ, ತನಿಖೆಗೆ ಆದೇಶಿಸಿದೆ. ಐಸಿಸಿ ನಿಯಮದ 2.4.4 ಹಾಗೂ 2.4.5ರ ಪ್ರಕಾರ ಅಕ್ಮಲ್ ತಕ್ಷಣವೇ ಭ್ರಷ್ಟಾಚಾರ ನಿಗ್ರಹ ದಳದ ಗಮನಕ್ಕೆ ತರಬೇಕಿತ್ತು. ಆದರೆ ಅಕ್ಮಲ್ 3 ವರ್ಷಗಳ ಬಳಿಕ ಈ ವಿಚಾರವನ್ನ ಬಹಿರಂಗ ಪಡಿಸಿರೋದರಿಂದ ನಿಯಮ ಉಲ್ಲಂಘಿಸಿದ್ದಾರೆ.

ಮೇಲ್ನೋಟಕ್ಕೆ ಯಾವುದೇ ಸ್ಪಾಟ್ ಫಿಕ್ಸಿಂಗ್ ನಡೆದಿಲ್ಲ. ಆದರೆ ಅಕ್ಮಲ್ ಹೇಳಿಕೆಯನ್ನ ತನಿಖೆ ನಡೆಸುತ್ತೇವೆ  ಎಂದು ಐಸಿಸಿ ಸ್ಪಷ್ಟಪಡಿಸಿದೆ.  ಜೊತೆಗೆ ನಿಯಮ ಉಲ್ಲಂಘಿಸಿದ ಅಕ್ಮಲ್‌ಗೆ ಕನಿಷ್ಠ ಶಿಕ್ಷೆಯಾಗೋ ಸಾಧ್ಯತೆ ಇದೆ.

loader