ದುಬೈ[ಆ.07]: ಐಸಿಸಿ ನೂತನ ಟೆಸ್ಟ್ ಶ್ರೇಯಾಂಕ ಮಂಗಳವಾರ ಪ್ರಕಟಗೊಂಡಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲೇ ಮುಂದುವರೆದಿದ್ದಾರೆ. ಆದರೆ ಆ್ಯಷಸ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲೇ 2 ಶತಕ ಸಿಡಿಸಿದ ಸ್ಟೀವ್ ಸ್ಮಿತ್ ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದು, ನಂ.1 ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ವಿಂಡೀಸ್ ಪ್ರವಾಸಕ್ಕೂ ಮುನ್ನ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ

ಆಸ್ಪ್ರೇಲಿಯಾ ಬ್ಯಾಟ್ಸ್‌ಮನ್‌ ಸ್ಟೀವ್‌ ಸ್ಮಿತ್‌ ಭಾರತದ ಚೇತೇಶ್ವರ್‌ ಪೂಜಾರ ಅವರನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೇರಿದ್ದಾರೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದ ಮೊದಲ ಆ್ಯಷಸ್‌ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಸ್ಮಿತ್‌ ಶತಕ ಬಾರಿಸಿದ್ದರು. ಸ್ಮಿತ್‌ ಸದ್ಯ 903 ರೇಟಿಂಗ್‌ ಅಂಕಗಳನ್ನು ಹೊಂದಿದ್ದು, ಅಗ್ರ ಸ್ಥಾನದಲ್ಲಿರುವ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ (922)ಗಿಂತ ಕೇವಲ 19 ಅಂಕ ಹಿಂದಿದ್ದಾರೆ. ಆ್ಯಷಸ್‌ ಮುಕ್ತಾಯಗೊಳ್ಳುವ ವೇಳೆಗೆ ಸ್ಮಿತ್‌ ಅಗ್ರಸ್ಥಾನಕ್ಕೇರುವ ನಿರೀಕ್ಷೆ ಇದೆ. 

ನ್ಯೂಜಿಲೆಂಡ್‌ನ ಕೇನ್‌ ವಿಲಿಯಮ್ಸನ್‌ (913) 2ನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ, ಪೂಜಾರ ಹೊರತುಪಡಿಸಿ ಉಳಿದ್ಯಾವ ಭಾರತೀಯ ಬ್ಯಾಟ್ಸ್’ಮನ್’ಗಳು ಟೆಸ್ಟ್ ಶ್ರೇಯಾಂಕದಲ್ಲಿ ಟಾಪ್ 10 ಪಟ್ಟಿಯೊಳಗೆ ಸ್ಥಾನ ಪಡೆಯಲು ವಿಫಲರಾಗಿದ್ದಾರೆ ಸಫಲರಾಗಿಲ್ಲ.

ಬೌಲರ್‌ಗಳ ಪಟ್ಟಿಯಲ್ಲಿ ಆಸ್ಪ್ರೇಲಿಯಾದ ಪ್ಯಾಟ್‌ ಕಮಿನ್ಸ್‌ ಅಗ್ರ ಸ್ಥಾನ ಉಳಿಸಿಕೊಂಡಿದ್ದಾರೆ. ಕಗಿಸೋ ರಬಾಡ, ಜೇಮ್ಸ್ ಆ್ಯಂಡರ್’ಸನ್ ಕ್ರಮವಾಗಿ ಮೊದಲ ಮೂರು ಸ್ಥಾನ ಹಂಚಿಕೊಂಡಿದ್ದಾರೆ. ರವೀಂದ್ರ ಜಡೇಜಾ[06] ಹಾಗೂ ರವಿಚಂದ್ರನ್ ಅಶ್ವಿನ್[10] ಟಾಪ್ 10 ಪಟ್ಟಿಯೊಳಗೆ ಸ್ಥಾನ ಪಡೆದ ಭಾರತೀಯ ಬೌಲರ್’ಗಳು ಎನಿಸಿದ್ದಾರೆ.