ದುಬೈ(ಮೇ.15): ಭಾರತದ ಜಿ.ಎಸ್‌.ಲಕ್ಷ್ಮಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ)ಯ ಮ್ಯಾಚ್‌ ರೆಫ್ರಿ ಸಮಿತಿಗೆ ಸೇರ್ಪಡೆಗೊಂಡ ಮೊದಲ ಮಹಿಳೆ ಎನ್ನುವ ದಾಖಲೆ ಬರೆದಿದ್ದಾರೆ. ಪುರುಷರ ಅಂತಾರಾಷ್ಟ್ರೀಯ ಪಂದ್ಯಗಳಲ್ಲೂ ಅವರಿಗೆ ರೆಫ್ರಿಯಾಗಿ ಕಾರ್ಯನಿರ್ವಹಿಸಲು ಮಾನ್ಯತೆ ಸಿಕ್ಕಿದೆ. ಕಳೆದ ತಿಂಗಳಷ್ಟೇ ಪುರುಷರ ಪಂದ್ಯದಲ್ಲಿ ಅಂಪೈರ್‌ ಆಗಿ ಕಾರ್ಯನಿರ್ವಹಿಸಿದ ಮೊದಲ ಮಹಿಳೆ ಎನ್ನುವ ದಾಖಲೆಯನ್ನು ಆಸ್ಪ್ರೇಲಿಯಾದ ಕ್ಲಾರಿ ಪೊಲೊಸಾಕ್‌ ಬರೆದಿದ್ದರು. ಇದೀಗ ಲಕ್ಷ್ಮಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ಇದನ್ನೂ ಓದಿ: ನೋ ಬಾಲ್ ಪಜೀತಿ- ಸಚಿನ್ ತೆಂಡುಲ್ಕರ್ ಕಾಲೆಳೆದ ಐಸಿಸಿ

ಆಂಧ್ರ ಪ್ರದೇಶ ಮೂಲದ 51 ವರ್ಷದ ಲಕ್ಷ್ಮಿ, ಈ ಹಿಂದೆ ಭಾರತ ಪರ ಕ್ರಿಕೆಟ್‌ ಆಡಿದ್ದರು. ಬಳಿಕ ಅಂಪೈರ್‌ ಆಗಿ ಕೆಲಸ ಮಾಡಿದ್ದರು. 2008-09ರಲ್ಲಿ ದೇಸಿ ಟೂರ್ನಿಗಳಲ್ಲಿ ಮ್ಯಾಚ್‌ ರೆಫ್ರಿಯಾಗಿದ್ದ ಅವರು, 3 ಮಹಿಳಾ ಏಕದಿನ ಹಾಗೂ 3 ಮಹಿಳಾ ಟಿ20 ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ‘ಐಸಿಸಿ ರೆಫ್ರಿ ಸಮಿತಿಗೆ ಸೇರ್ಪಡೆಗೊಂಡಿದ್ದಕ್ಕೆ ಬಹಳ ಹೆಮ್ಮೆಯಾಗುತ್ತಿದೆ. ಕ್ರಿಕೆಟರ್‌ ಆಗಿ, ಮ್ಯಾಚ್‌ ರೆಫ್ರಿಯಾಗಿ ಹಲವು ವರ್ಷಗಳ ಅನುಭವವಿದೆ. 

ಇದನ್ನೂ ಓದಿ: ಟಿ10ನಲ್ಲಿ ಭ್ರಷ್ಟಾಚಾರ: ಲಂಕಾ ಮಾಜಿ ಕ್ರಿಕೆಟಿಗರು ಸಸ್ಪೆಂಡ್

ಈ ಅನುಭವವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಳಸಿಕೊಳ್ಳುತ್ತೇನೆ’ ಎಂದು ಲಕ್ಷ್ಮಿ ಹೇಳಿದ್ದಾರೆ. ‘ಲಕ್ಷ್ಮಿ ಅವರನ್ನು ರೆಫ್ರಿ ಸಮಿತಿಗೆ ಸ್ವಾಗತಿಸುತ್ತೇನೆ. ಅವರು ತಮ್ಮ ಪ್ರತಿಭೆ, ಸಾಮರ್ಥ್ಯದಿಂದ ಈ ಮಟ್ಟಕ್ಕೇರಿದ್ದಾರೆ. ಮತ್ತಷ್ಟುಮಹಿಳೆಯರಿಗೆ ಲಕ್ಷ್ಮಿ ಸ್ಫೂರ್ತಿಯಾಗಲಿದ್ದಾರೆ’ ಎಂದು ಐಸಿಸಿಯ ಅಂಪೈರ್‌ ಹಾಗೂ ರೆಫ್ರಿಗಳ ವಿಭಾಗದ ಹಿರಿಯ ವ್ಯವಸ್ಥಾಪಕ ಏಡ್ರಿಯಾನ್‌ ಗ್ರಿಫಿತ್‌ ಹೇಳಿದ್ದಾರೆ.