Asianet Suvarna News Asianet Suvarna News

ಕಬಡ್ಡಿಪಟುಗಳ ಫಿಟ್ನೆಸ್‌ಗೆ ಹೊಸ ತಂತ್ರ-ಪ್ರೊ ಕಬಡ್ಡಿಗೆ ಹೊಸ ಆಯಾಮ!

ಕಬಡ್ಡಿ ಪಟುಗಳು ಹೆಚ್ಚಿನ ಫಿಟ್ನೆಸ್ ಕಾಪಾಡಿಕೊಳ್ಳಬೇಕು.  ಕಾರಣ ಕಬಡ್ಡಿ ಅಪಾಯಕಾರಿ ಆಟವೂ ಹೌದು. ಹೀಗಾಗಿ ಇಂಜುರಿಗಳ ಸಂಖ್ಯೆ ಹೆಚ್ಚು. ಹೆಚ್ಚು ಫಿಟ್ ಆಗಿದ್ದರೆ ಮಾತ್ರ ಕಬಡ್ಡಿ ಕೋರ್ಟ್‌ನಲ್ಲಿ ಹೋರಾಡಲು ಸಾಧ್ಯ. ಸತತ ಕಬಡ್ಡಿ ಪಂದ್ಯಗಳಿಗೆ ಆಟಗಾರರಿಗೆ ಹೊಸ ಫಿಟ್ನೆ ತಂತ್ರ ಹೇಳಿಕೊಡಲಾಗುತ್ತಿದೆ. ನೂತನ ಫಿಟ್ನೆಸ್ ತಂತ್ರದ ಮಾಹಿತಿ ಇಲ್ಲಿದೆ.

How kabaddi players are becoming faster fitter stronger
Author
Bengaluru, First Published Oct 23, 2018, 8:57 AM IST
  • Facebook
  • Twitter
  • Whatsapp

ಪುಣೆ(ಅ.23): ಪ್ರತಿಯೂಬ್ಬ ಕ್ರೀಡಾಪಟು ಅಂಕಣದಲ್ಲಿ ಎದುರಾಳಿ ವಿರುದ್ಧ ಹೋರಾಡಿ ಜಯ ಸಾಧಿಸಬೇಕಾದರೆ, ಆತನಲ್ಲಿ ಬಲ, ಚಾಣಾಕ್ಷತನ, ತಂತ್ರಗಾರಿಕೆ, ಕೌಶಲ್ಯ ಇರಬೇಕು. ಈ ಎಲ್ಲವೂ ಇದ್ದು, ಫಿಟ್ನೆಸ್‌ ಇಲ್ಲದಿದ್ದರೆ ಏನೂ ಪ್ರಯೋಜನವಾಗದು.

ಈ ದೃಷ್ಟಿಯಲ್ಲಿ ಪ್ರತಿಯೊಬ್ಬ ಕ್ರೀಡಾಪಟುವಿಗೂ ಫಿಟ್ನೆಸ್‌ ಅಮೂಲ್ಯ. ಅದನ್ನು ಕಾಯ್ದುಕೊಳ್ಳುವುದೇ ಆಟಗಾರರಿಗೆ ದೊಡ್ಡ ಸವಾಲು. ಅದರಲ್ಲಿಯೂ ಪ್ರೊ ಕಬಡ್ಡಿ 5 ತಿಂಗಳುಗಳ ಕಾಲ ನಡೆಯುವುದರಿಂದ ಆಟಗಾರರಿಗೆ ಫಿಟ್ನೆಸ್‌ ಬಹಳ ಮುಖ್ಯ. ಆವೃತ್ತಿಯಿಂದ ಆವೃತ್ತಿಗೆ ಪ್ರೊ ಕಬಡ್ಡಿಯ ವೃತ್ತಿಪರತೆ ಹೆಚ್ಚುತ್ತಿದ್ದು, ಫಿಟ್ನೆಸ್‌ ವಿಚಾರದಲ್ಲೂ ಈ ಮಾತು ಸತ್ಯ ಎನಿಸತೊಡಗಿದೆ. ಕಾರಣ, ತಂಡಗಳು ತನ್ನ ಆಟಗಾರರ ಫಿಟ್ನೆಸ್‌ಗಾಗಿ ಹೊಸ ಹೊಸ ತಂತ್ರಗಳನ್ನು ಅಳವಡಿಸಿಕೊಂಡಿವೆ. ಆ ಕುರಿತ ಮಾಹಿತಿಯನ್ನು ಕೋಚ್‌ ಹಾಗೂ ಅಟಗಾರರು ‘ಕನ್ನಡಪ್ರಭ’ದೊಂದಿಗೆ ಹಂಚಿಕೊಂಡಿದ್ದಾರೆ.

ಜಿಮ್‌ನಲ್ಲಿ ವೈಯಕ್ತಿಕ ತರಬೇತಿ!
ಪ್ರತಿಯೊಬ್ಬ ಕಬಡ್ಡಿ ಆಟಗಾರನೂ ಜಿಮ್‌ನಲ್ಲಿ ಬೆವರಿಳಿಸುವುದು ಕಡ್ಡಾಯ. ಬೆಳಗ್ಗೆ ಅಥವಾ ಸಂಜೆ ಆಟಗಾರರೊಂದಿಗೆ ಕೋಚ್‌ ಹಾಗೂ ಟ್ರೈನರ್‌ಗಳು ಜಿಮ್‌ನಲ್ಲಿ ವೈಯಕ್ತಿಕ ತರಬೇತಿ ನೀಡುತ್ತಾರೆ. ಈ ಹಿಂದಿನ ಆವೃತ್ತಿಗಳಲ್ಲಿ ಎಲ್ಲಾ ಆಟಗಾರರಿಗೂ ಒಂದೇ ರೀತಿಯ ತರಬೇತಿ ನೀಡಲಾಗುತ್ತಿತ್ತು. ಆದರೆ, 6ನೇ ಆವೃತ್ತಿಯಲ್ಲಿ ಇದು ಬದಲಾಗಿದೆ. ಈ ಬಾರಿ ಪಂದ್ಯದ ವಿಡಿಯೋಗಳನ್ನು ಕೋಚ್‌ ಮತ್ತು ಜಿಮ್‌ ತರಬೇತುದಾರ ಸೂಕ್ಷ್ಮವಾಗಿ ಗಮನಿಸಿ, ಆಟಗಾರ ಎಲ್ಲಿ ಎಡವುತ್ತಿದ್ದಾನೆ, ಆತನ ದೌರ್ಬಲ್ಯವೇನು ಎನ್ನುವುದನ್ನು ಗುರುತಿಸುತ್ತಾರೆ. ಅದಕ್ಕೆ ತಕ್ಕಂತೆ ಆ ಆಟಗಾರನಿಗೆ ಅಗತ್ಯ ಇರುವ ಜಿಮ್‌ ತರಬೇತಿಯನ್ನು ನೀಡಲಾಗುತ್ತದೆ. ಕೇವಲ ಭಾರ ಎತ್ತುವುದು ಮಾತ್ರವಲ್ಲ, ವಿಭಿನ್ನ ಶೈಲಿ ವ್ಯಾಯಾಮಗಳನ್ನು ಸಹ ಮಾಡಿಸಲಾಗುತ್ತದೆ.

15-30 ನಿಮಿಷ ಈಜು
ಬೆಳಗ್ಗೆ ಕಬಡ್ಡಿ ಅಭ್ಯಾಸದ ನಂತರ ಹಿಡಿದುಕೊಂಡಿರುವ ಸ್ನಾಯುಗಳನ್ನು ಸಡಿಲಗೊಳಿಸಲು 15ರಿಂದ 30 ನಿಮಿಷ ಆಟಗಾರರು ಈಜುಕೊಳಕ್ಕಿಳಿಯುತ್ತಾರೆ. ಕೆಲವು ತಂಡಗಳು ತಮ್ಮ ಅಭ್ಯಾಸ ವೇಳಾಪಟ್ಟಿಯಲ್ಲಿ ವಾರದಲ್ಲಿ ಮೂರು ಅಥವಾ ನಾಲ್ಕು ದಿನ ಈಜನ್ನು ಸೇರಿಸಿವೆ. ಬೆಂಗಾಲ್‌ ವಾರಿಯ​ರ್‍ಸ್ ಸೇರಿದಂತೆ ಕೆಲವು ತಂಡಗಳು ಪ್ರತಿ ದಿನ ಈಜು ಅವಧಿಯನ್ನು ಕಡ್ಡಾಯಗೊಳಿಸಿವೆ.

ಏಕಾಗ್ರತೆಗಾಗಿ ಯೋಗ-ಧ್ಯಾನ
ಕಬಡ್ಡಿ ಅಂಕಣದಲ್ಲಿ ಏಕಾಗ್ರತೆ ಮುಖ್ಯ. ಹೀಗಾಗಿ ಕಬಡ್ಡಿ ಆಟಗಾರರು ಯೋಗ-ಧ್ಯಾನದ ಮೊರೆ ಹೋಗುತ್ತಿದ್ದಾರೆ. ಪ್ರತಿ ಆವೃತ್ತಿ ಆರಂಭವಾಗುವುದಕ್ಕೂ ಮುನ್ನ ಆಟಗಾರರಿಗೆ ಆಯಾ ತಂಡಗಳು ಯೋಗ-ಧ್ಯಾನದ ಶಿಬಿರ ಆಯೋಜಿಸುತ್ತವೆ. ಶಿಬಿರದಲ್ಲಿ ಕಲಿತ ಯೋಗವನ್ನು ಕೆಲವು ಆಟಗಾರರು ಪ್ರತಿ ದಿನ ಮುಂಜಾನೆ ಕಡ್ಡಾಯವಾಗಿ ಮಾಡುತ್ತಾರೆ. ಆದರೆ, ಇದು ಎಲ್ಲರಿಗೂ ಕಡ್ಡಾಯವಲ್ಲ.

ವಾರದಲ್ಲಿ ಒಂದೆರಡು ದಿನ ಓಟ
ಪಂದ್ಯದ ಸಂದರ್ಭದಲ್ಲಿ ಆಟಗಾರರು ವೇಗಕ್ಕೆ ಆದ್ಯತೆ ನೀಡಬೇಕಾಗುತ್ತದೆ. ಅದರಲ್ಲಿಯೂ ರೈಡಿಂಗ್‌ ಮಾಡುವವರಿಗೆ ಚಿರತೆಯ ವೇಗ ಇದ್ದರೆ ಇನ್ನೂ ಅನುಕೂಲ. ಹೀಗಾಗಿ ಪ್ರತಿ ತಂಡದಲ್ಲಿಯೂ ಆಟಗಾರರಿಗೆ 1 ಗಂಟೆ ಓಟದ ತರಬೇತಿ ನೀಡಲಾಗುತ್ತದೆ. ವಾರದಲ್ಲಿ ಒಂದು ಅಥವಾ ಎರಡು ದಿನ ಮಾತ್ರ ಈ ತರಬೇತಿ ಇರುತ್ತದೆ. ಇದರಲ್ಲಿ ಎಲ್ಲಾ ಆಟಗಾರರು ಪಾಲ್ಗೊಳ್ಳುವುದು ಕಡ್ಡಾಯ.

ಬಾಡಿ ಮಸಾಜ್‌ ಕಡ್ಡಾಯ
ಬಾಡಿ ಮಸಾಜ್‌ನಿಂದಾಗಿ ದೇಹ ಹಗುರವಾಗುತ್ತದೆ. ಹೀಗಾಗಿ ಎಲ್ಲಾ ಕಬಡ್ಡಿ ಆಟಗಾರರಿಗೂ ಬಾಡಿ ಮಸಾಜ್‌ ಮಾಡಿಸಲಾಗುತ್ತಿದೆ. ವಾರದಲ್ಲಿ ಒಂದು ದಿನ ಅಥವಾ 10 ದಿನಕ್ಕೆ ಒಂದು ಬಾರಿ ಈ ವ್ಯವಸ್ಥೆ ಕಲ್ಪಿಸಲಾಗಿದೆ. ಕೆಲ ತಂಡಗಳು ಬಾಡಿ ಮಸಾಜ್‌ ಕಡ್ಡಾಯಗೊಳಿಸಿವೆ. ಅಂಕಣದಲ್ಲಿ ಹೆಚ್ಚು ಸಮಯ ಕಳೆಯುವ, ಹೆಚ್ಚು ಸಕ್ರಿಯರಾಗಿರುವ ಆಟಗಾರರು ವಾರದಲ್ಲಿ ಮೂರ್ನಾಲ್ಕು ಬಾರಿ ಬಾಡಿ ಮಸಾಜ್‌ನ ಮೊರೆ ಹೋಗುತ್ತಿದ್ದಾರೆ.

ಚುರುಕುತನಕ್ಕಾಗಿ ಫುಟ್ಬಾಲ್‌, ವಾಲಿಬಾಲ್‌ ಆಟ
ಕಬಡ್ಡಿ ಆಟಗಾರರಿಗೆ ಚುರುಕುತನ, ನಮ್ಯತೆ ಬಹಳ ಮುಖ್ಯ. ದೇಹ ಎಷ್ಟುಹಗುರಾಗಿರುತ್ತದೋ ಅಷ್ಟುಒಳ್ಳೆಯದು. ಹೀಗಾಗಿ, ಹೆಚ್ಚೆಚ್ಚು ಕ್ರೀಯಾಶೀಲರಾಗಿರಲು ಆಟಗಾರರು ಫುಟ್ಬಾಲ್‌, ವಾಲಿಬಾಲ್‌, ಬ್ಯಾಡ್ಮಿಂಟನ್‌, ಹ್ಯಾಂಡ್‌ಬಾಲ್‌, ಟೇಬಲ್‌ ಟೆನಿಸ್‌ ಹೀಗೆ ವಿವಿಧ ಕ್ರೀಡೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಈ ರೀತಿ ಬೇರೆ ಬೇರೆ ಕ್ರೀಡೆಗಳನ್ನು ಆಡುವ ಮೂಲಕ ಮನಸಿಗೆ ವಿಶ್ರಾಂತಿ ದೊರೆಯಲಿದೆ. ಜತೆಗೆ ಫಿಟ್ನೆಸ್‌ ಕಾಯ್ದುಕೊಳ್ಳಲು ನೆರವಾಗಲಿದೆ.

ಯಾವುದೇ ಕಾರಣಕ್ಕೂ ಆಟಗಾರರ ಫಿಟ್ನೆಸ್‌ ಬಗ್ಗೆ ನಿರ್ಲಕ್ಷ್ಯ ವಹಿಸುವಂತಿಲ್ಲ. ಈಜು, ಜಿಮ್‌, ಯೋಗ, ಧ್ಯಾನ, ಕ್ರಾಸ್‌ ಕಂಟ್ರಿ ಓಟ, ಹೀಗೆ ಎಲ್ಲಾ ರೀತಿಯ ತರಬೇತಿ ನೀಡುತ್ತೇವೆ. ಆಹಾರ ಪದ್ಧತಿಯೂ ಅಷ್ಟೇ. ಯಾವುದನ್ನು ಸೇವಿಸಬೇಕು, ಯಾವುದನ್ನು ಸೇವಿಸಬಾರದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ ಎಂದು ಬೆಂಗಳೂರು ಬುಲ್ಸ್‌ ಸಹಾಯಕ ಕೋಚ್‌ ಬಿ.ಸಿ.ರಮೇಶ್‌ ಹೇಳಿದ್ದಾರೆ.

ಪ್ರತಿಯೊಬ್ಬ ಆಟಗಾರನ ಲೋಪದೋಷ ಗುರುತಿಸಿ ಅದಕ್ಕೆ ಬೇಕಾದಂತಹ ಫಿಟ್ನೆಸ್‌ ತರಬೇತಿಯನ್ನು ನೀಡುತ್ತೇವೆ. ಪ್ರತಿ ತಂಡದ ತರಬೇತಿಯ ವಿಧಾನದಲ್ಲಿ ವ್ಯತ್ಯಾಸವಿದೆ. ನಮ್ಮ ತಂಡದಲ್ಲಿ ಈಜು, ಜಿಮ್‌, ಬಾಡಿ ಮಸಾಜ್‌ ಕಡ್ಡಾಯಗೊಳಿಸಿದ್ದೇವೆ. ಹ್ಯಾಂಡ್‌ಬಾಲ್‌, ಫುಟ್ಬಾಲ್‌, ವಾಲಿಬಾಲ್‌ ಅನ್ನು ಆಡಿಸುತ್ತೇವೆ ಎಂದು ಬೆಂಗಾಲ್‌ ವಾರಿಯರ್ಸ್ ಕೋಚ್‌ ಜಗದೀಶ್‌ ಕುಂಬ್ಳೆ  ಹೇಳಿದ್ದಾರೆ.

ಮಂಜು ಮಳಗುಳಿ

Follow Us:
Download App:
  • android
  • ios