ಇಲ್ಲಿನ ಲೀ ವ್ಯಾಲಿ ಹಾಕಿ ಕ್ರೀಡಾಂಗಣದಲ್ಲಿ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಭಾರತದ ಪರ ಎಸ್.ವಿ. ಸುನೀಲ್ 5ನೇ ನಿ., ಆಕಾಶ್‌'ದೀಪ್ ಸಿಂಗ್ 10ನೇ ನಿ., ಸರ್ದಾರ್ ಸಿಂಗ್ 18ನೇ ನಿಮಿಷದಲ್ಲಿ ಗೋಲುಗಳಿಸಿದರು. ಅತ್ತ ಕೆನಡಾ ತಂಡದ ಪರ ಯಾವೊಬ್ಬ ಆಟಗಾರರು ಗೋಲುಗಳಿಸಲು ಸಾಧ್ಯವಾಗಲಿಲ್ಲ.

ಲಂಡನ್(ಜೂ.17): ಟೀಂ ಇಂಡಿಯಾದ ಪ್ರತಿಭಾನ್ವಿತ ಸ್ಟ್ರೈಕರ್ ಎಸ್.ವಿ. ಸುನೀಲ್ ಮತ್ತು ಆಕಾಶ್ ದೀಪ್ ಸಿಂಗ್ ಅವರ ಪ್ರಭಾವಿ ಪ್ರದರ್ಶನದ ನೆರವಿನಿಂದ, ಹಾಕಿ ವಿಶ್ವ ಲೀಗ್ ಸೆಮಿಫೈನಲ್ ಪಂದ್ಯದಲ್ಲಿ 3-0 ಗೋಲುಗಳಿಂದ ಕೆನಡಾ ವಿರುದ್ಧ ಗೆಲುವು ಸಾಧಿಸಿತು. ಈ ಜಯದೊಂದಿಗೆ ಭಾರತ ತಂಡ 6 ಅಂಕ ಪಡೆದುಕೊಂಡು ಕ್ವಾರ್ಟರ್‌'ಫೈನಲ್ ಹಂತವನ್ನು ಬಹುತೇಕ ಖಚಿತಪಡಿಸಿಕೊಂಡಿದೆ.

ಇಲ್ಲಿನ ಲೀ ವ್ಯಾಲಿ ಹಾಕಿ ಕ್ರೀಡಾಂಗಣದಲ್ಲಿ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಭಾರತದ ಪರ ಎಸ್.ವಿ. ಸುನೀಲ್ 5ನೇ ನಿ., ಆಕಾಶ್‌'ದೀಪ್ ಸಿಂಗ್ 10ನೇ ನಿ., ಸರ್ದಾರ್ ಸಿಂಗ್ 18ನೇ ನಿಮಿಷದಲ್ಲಿ ಗೋಲುಗಳಿಸಿದರು. ಅತ್ತ ಕೆನಡಾ ತಂಡದ ಪರ ಯಾವೊಬ್ಬ ಆಟಗಾರರು ಗೋಲುಗಳಿಸಲು ಸಾಧ್ಯವಾಗಲಿಲ್ಲ.

ಪಂದ್ಯದ ಆರಂಭದಿಂದಲೂ ಆಕ್ರಮಣಾಕಾರಿ ಆಟಕ್ಕೆ ಮುಂದಾದ ಭಾರತ ತಂಡಕ್ಕೆ ಮೊದಲ ಕ್ವಾರ್ಟರ್‌ನ 5ನೇ ನಿಮಿಷದಲ್ಲಿ ಮುನ್ಪಡೆ ಆಟಗಾರ ಎಸ್.ವಿ. ಸುನೀಲ್ ಆಕರ್ಷಕ ಫೀಲ್ಡ್ ಗೋಲು ದಾಖಲಿಸಿ ಖಾತೆ ತೆರೆದರು. ಇದಾದ 5 ನಿಮಿಷಗಳ ಬಳಿಕ ಆಕಾಶ್‌'ದೀಪ್ ಸಿಂಗ್, ಕೆನಡಾದ ಗೋಲ್ ಕೀಪರ್ ಅನ್ನು ವಂಚಿಸುವಲ್ಲಿ ಯಶಸ್ವಿಯಾಗುವ ಮೂಲಕ ತಂಡಕ್ಕೆ ಮತ್ತೊಂದು ಗೋಲುಗಳಿಸಿದರು. ಇದರಿಂದಾಗಿ ಭಾರತ 2-0 ಮುನ್ನಡೆ ಪಡೆಯಿತು.

ದ್ವಿತೀಯ ಕ್ವಾರ್ಟರ್ ಹಂತ ಆರಂಭವಾಗಿ 3 ನಿಮಿಷವಾಗಿತ್ತು. ಆ ವೇಳೆ ಭಾರತದ ಮಿಡ್‌'ಫೀಲ್ಡರ್ ಸರ್ದಾರ್ ಸಿಂಗ್, ಎದುರಾಳಿ ಕೆನಡಾದ ರಕ್ಷಣಾ ಕೋಟೆಯನ್ನು ಬೇಧಿಸುವಲ್ಲಿ ಯಶಸ್ವಿಯಾಗಿ ಫೀಲ್ಡ್ ಗೋಲುಗಳಿಸಿದರು. 18 ನಿಮಿಷಗಳ ಮುಕ್ತಾಯಕ್ಕೆ ಭಾರತ ತಂಡ 3-0ಯಿಂದ ಮುನ್ನಡೆ ಪಡೆದಿತ್ತು. ಭಾರತ ತಂಡ ಅದೇ ಅಂತರವನ್ನು ಕಾಯ್ದುಕೊಂಡು ಪಂದ್ಯ ಜಯಿಸಿತು.

ಭಾರತ-ಪಾಕ್ ಸೆಣಸು

ಭಾರತ ತಂಡ, ಟೂರ್ನಿಯಲ್ಲಿ ತನ್ನ ಮೂರನೇ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ. 6ನೇ ಶ್ರೇಯಾಂಕ ಹೊಂದಿರುವ ಭಾರತ, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿಭಿನ್ನ ತಂತ್ರಗಾರಿಕೆಯಲ್ಲಿ ಕಣಕ್ಕಿಳಿಯುತ್ತಿದ್ದು ಗೆಲುವಿನ ವಿಶ್ವಾಸದಲ್ಲಿದೆ. ನಾಯಕ ಮನ್‌ಪ್ರೀತ್ ಸಿಂಗ್, ರಮಣ್‌'ದೀಪ್ ಸಿಂಗ್, ಹರ್ಮನ್‌'ಪ್ರೀತ್ ಸಿಂಗ್ ಫಾರ್ಮ್‌ನಲ್ಲಿದ್ದು ಎದುರಾಳಿ ತಂಡದ ಮೇಲೆ ಆಕ್ರಮಣಾಕಾರಿ ಆಟವಾಡಲು ಮುಂದಾಗಲಿದೆ. ಹಾಗೆ ಪಾಕಿಸ್ತಾನ ಕೂಡ ಭಾರತದ ವಿರುದ್ಧ ಗೆಲುವು ಪಡೆಯುವ ಉತ್ಸಾಹದಲ್ಲಿದೆ.