ನೀರಜ್ ಚೋಪ್ರಾ ಅವರ ಪತ್ನಿ ಹಿಮಾನಿ ಮೋರ್, ವೃತ್ತಿಪರ ಟೆನಿಸ್‌ನಿಂದ ಕ್ರೀಡಾ ವ್ಯವಹಾರ ಉದ್ಯಮಕ್ಕೆ ಪ್ರವೇಶಿಸುವ ಹಾದಿಯಲ್ಲಿದ್ದಾರೆ. ಸ್ವಂತ ಉದ್ಯಮವನ್ನು ಆರಂಭಿಸುವ ನಿಟ್ಟಿನಲ್ಲಿ ಅಮೆರಿಕದ ಲಾಭದಾಯಕ ಉದ್ಯೋಗದ ಪ್ರಸ್ತಾಪವನ್ನು ನಿರಾಕರಿಸಿ ಸುದ್ದಿಯಾಗಿದ್ದಾರೆ.
ನವದೆಹಲಿ (ಆ.16): ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಅವರ ಪತ್ನಿ ಹಿಮಾನಿ ಮೋರ್, ಟೆನಿಸ್‌ನಿಂದ ದೂರ ಸರಿದು ಕ್ರೀಡಾ ವ್ಯವಹಾರದಲ್ಲಿ ವೃತ್ತಿಜೀವನ ಮುಂದುವರಿಸುವ ಮೂಲಕ ತಮ್ಮ ವೃತ್ತಿಪರ ಪ್ರಯಾಣದಲ್ಲಿ ಹೊಸ ಹಾದಿ ಹಿಡಿದಿದ್ದಾರೆ. ಮಾಜಿ ವೃತ್ತಿಪರ ಟೆನಿಸ್ ಆಟಗಾರ್ತಿ ಹಿಮಾನಿ, ಸ್ವಂತ ಉದ್ಯಮವನ್ನು ನಿರ್ಮಿಸುವತ್ತ ಗಮನಹರಿಸುವ ದೃಷ್ಟಿಯಲ್ಲಿ ತಮ್ಮ ಕ್ರೀಡಾ ಜೀವನದ ಅಧ್ಯಾಯವನ್ನು ಮುಗಿಸಲು ತೀರ್ಮಾನ ಮಾಡಿದ್ದಾರೆ.
ದೈನಿಕ್ ಭಾಸ್ಕರ್ ಜೊತೆಗಿನ ಮಾತುಕತೆಯ ವೇಳೆ, ಆಕೆಯ ತಂದೆ ಚಂದ್ ಮೋರ್, ವಿದೇಶದಲ್ಲಿ ಬಂದ ಒಳ್ಳೆಯ ಜಾಬ್ ಆಫರ್‌ಅನ್ನೂ ಕೂಡ ತಮ್ಮ ಉದ್ಯಮದ ವಿಚಾರವಾಗಿ ಅವರು ನಿರಾಕರಿಸಿದ್ದಾರೆ ಎಂದು ತಿಳಿಸಿದ್ದಾರೆ. ಅಮರಿಕದಲ್ಲಿ ಕ್ರೀಡೆಗೆ ಸಂಬಂಧಪಟ್ಟ ಸಂಸ್ಥೆಯಿಂದ ಆಕೆಗೆ ಒಂದೂವರೆ ಕೋಟಿಯ ಜಾಬ್ ಆಫರ್ ಬಂದಿತ್ತು. ಆದರೆ, ಇದನ್ನು ಆಕೆ ನಿರಾಕರಿಸಿದ್ದು, ತಮ್ಮ ಸ್ವಂತ ಉದ್ಯಮದತ್ತ ಗಮನಹರಿಸಲು ತೀರ್ಮಾನ ಮಾಡಿದ್ದಾರೆ' ಎಂದು ಹೇಳಿದ್ದಾರೆ.
ದೆಹಲಿ ವಿವಿಯ ಮಾಜಿ ವಿದ್ಯಾರ್ಥಿಯಾಗಿರುವ ಹಿಮಾನಿ, ರಾಜಕೀಯ ವಿಜ್ಞಾನದಲ್ಲಿ ಪದಕವಿ ಪಡೆದಿದ್ದಾರೆ. ಅದರೊಂದಿಗೆ ಅಮೆರಿಕದ ಫ್ರಾಂಕ್ಲಿನ್ ಪೀಯರ್ಸ್ ವಿವಿಯಿಂದ ಕ್ರೀಡಾ ಮತ್ತು ಫಿಟ್‌ನೆಸ್ ಮ್ಯಾನೇಜ್‌ಮೆಂಟ್‌ನಲ್ಲೂ ಪದವಿ ಪಡೆದುಕೊಂಡಿದ್ದಾರೆ. ಈ ವರ್ಷದ ಆರಂಭದಲ್ಲಿ ಹಿಮಾಚಲ ಪ್ರದೇಶದ ಸೋಲನ್‌ನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ನೀರಜ್ ಚೋಪ್ರಾ ಹಾಗೂ ಹಿಮಾನಿ ಮೋರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ತಮ್ಮ ವಿವಾಹವನ್ನು ಈ ಜೋಡಿ ಘೋಷಿಸಿಕೊಂಡ ಬೆನ್ನಲ್ಲಿಯೇ, ದಂಪತಿಗಳು ಅಮೆರಿಕಕ್ಕೆ ಹಾರಿದ್ದರು. ನೀರಜ್ ಚೋಪ್ರಾ ನಿರಂತರ ವೇಳಾಪಟ್ಟಿ ಹಾಗೂ ಅಭ್ಯಾಸದ ಕಾರಣದಿಂದಾಗಿ ಅವರ ಕುಟುಂಬಕ್ಕೆ ಸಣ್ಣ ಆರತಕ್ಷತೆ ಕಾರ್ಯಕ್ರಮ ಇರಿಸಿಕೊಳ್ಳಲು ಅವಕಾಶ ಇಲ್ಲದಂತಾಗಿದೆ.
ಈ ನಡುವೆ, ನೀರಜ್ ಪೋಲೆಂಡ್‌ನಲ್ಲಿ ನಡೆಯಲಿರುವ ಸಿಲೇಸಿಯಾ ಡೈಮಂಡ್ ಲೀಗ್‌ನಿಂದ ಹಿಂದೆ ಸರಿದಿದ್ದಾರೆ, ಈ ಮುಖಾಮುಖಿಯನ್ನು ಅವರು ಮತ್ತು ಒಲಿಂಪಿಕ್ ಚಾಂಪಿಯನ್ ಅರ್ಷದ್ ನದೀಮ್ ನಡುವಿನ ಪ್ರಮುಖ ಮುಖಾಮುಖಿ ಎಂದು ಬಿಂಬಿಸಲಾಗಿತ್ತು. ಅಂತಿಮ ಪ್ರವೇಶ ಪಟ್ಟಿಯಲ್ಲಿ ಇಬ್ಬರೂ ಹೆಸರುಗಳು ಇಲ್ಲದಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಬದಲಾಗಿ, ನೀರಜ್ ತನ್ನ ಶಕ್ತಿಯನ್ನು ಸಂರಕ್ಷಿಸಿಕೊಳ್ಳುತ್ತಿದ್ದಾರೆ ಮತ್ತು ಟೋಕಿಯೊದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗಾಗಿ ತನ್ನ ಸಿದ್ಧತೆಗಳನ್ನು ಮಾಡುತ್ತಿದ್ದಾರೆ ಎಂದು ನಂಬಲಾಗಿದೆ. ಪುರುಷರ ಜಾವೆಲಿನ್ ಥ್ರೋ ಸೆಪ್ಟೆಂಬರ್ 17 ಮತ್ತು 18 ರಂದು ನಡೆಯಲಿದ್ದು, ನೀರಜ್ ತಮ್ಮ ಗಮನಾರ್ಹ ವೃತ್ತಿಜೀವನಕ್ಕೆ ಮತ್ತೊಂದು ಅಧ್ಯಾಯವನ್ನು ಸೇರಿಸುವ ಗುರಿಯನ್ನು ಹೊಂದಿದ್ದಾರೆ.
