ಡೋಪಿಂಗ್‌ನಲ್ಲಿ ಸಿಕ್ಕಿಬಿದ್ದ ಗೋಮತಿ ಮಾರಿಮುತ್ತು
ಏಷ್ಯನ್ ಚಾಂಪಿಯನ್‌ಶಿಪ್ ಟೂರ್ನಿ 800 ಮೀಟರ್ ಓಟದಲ್ಲಿ ಚಿನ್ನ ಗೆದ್ದು ಇತಿಹಾಸ ಬರೆದಿದ್ದ ಭಾರತದ ಅಥ್ಲೀಟ್ ಗೋಮತಿ ಮಾರಿಮುತ್ತು ಇದೀಗ ಉದ್ದೀಪನಾ ಮದ್ದು ಸೇವಿಸಿ ಸಿಕ್ಕಿಬಿದ್ದಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ...
ನವದೆಹಲಿ(ಮೇ.22): ಕಳೆದ ತಿಂಗಳು ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ 800 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಬರೆದಿದ್ದ ಭಾರತದ ಅಥ್ಲೀಟ್ ಗೋಮತಿ ಮಾರಿಮುತ್ತು ಉದ್ದೀಪನಾ ಮದ್ದು ಸೇವನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ನಿಷೇಧಿತ ಮದ್ದು ಸೇವಿಸಿರುವುದು ಅವರ ‘ಎ’ ಮಾದರಿಯ ರಕ್ತ ಪರೀಕ್ಷೆಯಿಂದ ದೃಢಪಟ್ಟಿದ್ದು, ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್ (ಎಎಫ್‌ಐ) ಅವರನ್ನು ತಾತ್ಕಾಲಿಕ ಅಮಾನತುಗೊಳಿಸಿದೆ.
ಚಿನ್ನ ಗೆದ್ದ ಗೋಮತಿಗೆ ಡಿಎಂಕೆ ₹15 ಲಕ್ಷ ಬಹುಮಾನ
ದೋಹಾದಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ವೇಳೆ ನಡೆದಿದ್ದ ಸ್ಟೆರಾಯ್ಡ್ ಪರೀಕ್ಷೆಯಲ್ಲಿ ಅವರ ರಕ್ತದಲ್ಲಿ ನಿಷೇಧಿತ ಮದ್ದಿನ ಅಂಶವಿರುವುದು ದೃಢಪಟ್ಟಿದೆ. ಒಂದೊಮ್ಮೆ ಅವರ ‘ಬಿ’ ಮಾದರಿಯಲ್ಲೂ ಸಹ ಉದ್ದೀಪನಾ ಸೇವನೆ ದೃಢಪಟ್ಟರೆ ಗರಿಷ್ಠ 4 ವರ್ಷಗಳ ನಿಷೇಧಕ್ಕೆ ಒಳಗಾಗಲಿದ್ದಾರೆ. ಜತೆಗೆ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಗೆದ್ದ ಚಿನ್ನದ ಪದಕವನ್ನು ವಾಪಸ್ ಮಾಡಬೇಕಾಗುತ್ತದೆ. ಕೂಟದಲ್ಲಿ ಭಾರತ 3 ಚಿನ್ನ, 7 ಬೆಳ್ಳಿ ಹಾಗೂ 7 ಕಂಚಿನ ಪದಕಗಳನ್ನು ಗೆದ್ದಿತ್ತು.
ಗೋಮತಿ ಮಾರ್ಚ್’ನಲ್ಲಿ ನಡೆದ ಫೆಡರೇಷನ್ ಕಪ್ ವೇಳೆಯೇ ಡೋಪಿಂಗ್ ಟೆಸ್ಟ್‌ನಲ್ಲಿ ಅನುತೀರ್ಣಗೊಂಡಿದ್ದರು ಎನ್ನಲಾಗಿದ್ದು, ರಾಷ್ಟ್ರೀಯ ಉದ್ದೀಪನಾ ಮದ್ದು ಸೇವನೆ ನಿಗ್ರಹ ಘಟಕ (ನಾಡಾ) ಎಚ್ಚರಿಸಿಲ್ಲ ಎನ್ನಲಾಗಿದೆ. ಒಂದೊಮ್ಮೆ ಮುಂಚಿತವಾಗಿಯೇ ಮಾಹಿತಿ ನೀಡಿದ್ದರೆ, ಗೋಮತಿ ಏಷ್ಯನ್ ಚಾಂಪಿಯನ್‌ಗೆ ತೆರಳದಂತೆ ತಡೆಯುತ್ತಿದ್ದೆವು ಎಂದು ಎಎಫ್‌ಐ ಅಧಿಕಾರಿ ಹೇಳಿದ್ದಾರೆ.