1.5 ಕೋಟಿ ಕೊಟ್ಟು ನೀರಜ್ ಚೋಪ್ರಾರ ಜಾವೆಲಿನ್ ಖರೀದಿಸಿದ್ದ ಬಿಸಿಸಿಐ..!
ಮೋದಿ ಅವರು ಸಂಗ್ರಹಿಸಿದ್ದ ಸ್ಮರಣಿಕೆಗಳ ಹರಾಜು ಪ್ರಕ್ರಿಯೆಯಲ್ಲಿ ನೀರಜ್ ಜಾವೆಲಿನ್ ಖರೀದಿಸಿದದ್ ಬಿಸಿಸಿಐ
ಒಂದೂವರೆ ಕೋಟಿ ರುಪಾಯಿ ನೀಡಿ ಜಾವೆಲಿನ್ ಖರೀದಿಸಿದ್ದ ಬಿಸಿಸಿಐ
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ
ನವದೆಹಲಿ(ಆ.03): 2021ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಗ್ರಹಿಸಿದ್ದ ಸ್ಮರಣಿಕೆಗಳ ಹರಾಜು ಪ್ರಕ್ರಿಯೆ ನಡೆಸಲಾಗಿತ್ತು. ಆಗ ಅನೇಕ ಕ್ರೀಡಾ ಪರಿಕರಗಳನ್ನೂ ಹರಾಜು ಹಾಕಲಾಗಿತ್ತು. ಒಲಿಂಪಿಕ್ಸ್ ಚಿನ್ನ ವಿಜೇತ ನೀರಜ್ ಚೋಪ್ರಾ ಅವರ ಜಾವೆಲಿನ್ ಬರೋಬ್ಬರಿ 1.5 ಕೋಟಿ ರು.ಗೆ ಖರೀದಿಯಾಗಿತ್ತು. ಆದರೆ ಖರೀದಿ ಮಾಡಿದ್ದು ಯಾರು ಎನ್ನುವ ವಿಚಾರ ಈಗ ಬಹಿರಂಗವಾಗಿದೆ.
ದುಬಾರಿ ಮೊತ್ತಕ್ಕೆ ಜಾವೆಲಿನ್ ಅನ್ನು ಬಿಸಿಸಿಐ ಖರೀದಿಸಿತ್ತು ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಶುಕ್ರವಾರ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ಬಳಿಕ ಪ್ರಧಾನಿ ಮೋದಿ ಅವರು ತಮ್ಮ ನಿವಾಸದಲ್ಲಿ ಔತಣಕೂಟವೊಂದನ್ನು ಏರ್ಪಡಿಸಿದ್ದರು. ಆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀರಜ್ ಚೋಪ್ರಾ ಜಾವೆಲಿನ್ ಒಂದನ್ನು ಉಡುಗೊರೆಯಾಗಿ ನೀಡಿದ್ದರು.
ಬಾಸ್ಕೆಟ್‌ಬಾಲ್: ಭಾರತ ತಂಡದಲ್ಲಿ ರಾಜ್ಯದ ಮೇಖಲಾ, ನಿಹಾರಿಕಾ
ಬೆಂಗಳೂರು: ಅಂಡರ್-18 ಏಷ್ಯನ್ ಮಹಿಳಾ ಬಾಸ್ಕೆಟ್‌ಬಾಲ್ ಚಾಂಪಿಯನ್ ಸೆಪ್ಟೆಂಬರ್ 5ರಿಂದ 11ರ ವರೆಗೂ ಬೆಂಗಳೂರಲ್ಲಿ ನಡೆಯಲಿದ್ದು, ಭಾರತ ಸೇರಿ 16 ತಂಡಗಳು ಪಾಲ್ಗೊಳ್ಳಲಿವೆ. ಶುಕ್ರವಾರ ಭಾರತೀಯ ಬಾಸ್ಕೆಟ್‌ಬಾಲ್ ಫೆಡರೇಷನ್(ಬಿಎಫ್‌ಐ) ಅಧ್ಯಕ್ಷ ಡಾ.ಕೆ.ಗೋವಿಂದರಾಜು ಭಾರತ ತಂಡವನ್ನು ಪ್ರಕಟಗೊಳಿಸಿದರು. ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಂಡವನ್ನು ಪ್ರಕಟಗೊಳಿಸಲಾಯಿತು.
12 ಸದಸ್ಯೆಯರ ತಂಡದಲ್ಲಿ ಕರ್ನಾಟಕದ ಮೇಖಲಾ ಗೌಡ, ನಿಹಾರಿಕಾ ರೆಡ್ಡಿ ಸ್ಥಾನ ಪಡೆದಿದ್ದಾರೆ. ಭಾರತದಲ್ಲಿ 5ನೇ ಬಾರಿಗೆ ಏಷ್ಯನ್ ಕಿರಿಯರ ಚಾಂಪಿಯನ್‌ಶಿಪ್ ನಡೆಯಲಿದೆ. ಕಾರ‍್ಯಕ್ರಮದಲ್ಲಿ ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣಗೌಡ, ಕ್ರೀಡಾ ಇಲಾಖೆ ಆಯುಕ್ತ ಡಾ.ಎಚ್.ಎನ್.ಗೋಪಾಲಕೃಷ್ಣ ಇದ್ದರು.
ಏಷ್ಯನ್ ನೆಟ್‌ಬಾಲ್: ಭಾರತ ತಂಡಕ್ಕೆ ರಾಜ್ಯದ ಮೇಘನಾ ಉಪನಾಯಕಿ
ಬೆಂಗಳೂರು: 12ನೇ ಆವೃತ್ತಿಯ ಏಷ್ಯನ್ ಮಹಿಳಾ ನೆಟ್‌ಬಾಲ್ ಚಾಂಪಿಯನ್‌ಶಿಪ್ ಸೆಪ್ಟೆಂಬರ್ 3ರಿಂದ 11ರ ವರೆಗೂ ಸಿಂಗಾಪುರದಲ್ಲಿ ನಡೆಯಲಿದ್ದು, ಟೂರ್ನಿಯಲ್ಲಿ ಭಾರತ ಪಾಲ್ಗೊಳ್ಳಲಿದೆ. 12 ಸದಸ್ಯೆಯರ ಭಾರತ ತಂಡಕ್ಕೆ ಕರ್ನಾಟಕದ ಮೇಘನಾ ಬಿ.ಸಿ. ಉಪನಾಯಕಿಯಾಗಿ ನೇಮಕಗೊಂಡಿದ್ದಾರೆ. ಲೀಗ್ ಹಂತದಲ್ಲಿ ಭಾರತ ಸೆಪ್ಟೆಂಬರ್ 3ರಂದು ಶ್ರೀಲಂಕಾ, ಸೆಪ್ಟೆಂಬರ್ 4ರಂದು ಫಿಲಿಪ್ಪೀನ್ಸ್ ವಿರುದ್ಧ ಆಡಲಿದೆ.
ಜಪಾನ್ ಓಪನ್‌ನ ಕ್ವಾರ್ಟರ್ ಫೈನಲಲ್ಲಿ ಸೋತ ಪ್ರಣಯ್
ಒಸಾಕ: ಭಾರತದ ಎಚ್.ಎಸ್.ಪ್ರಣಯ್ ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ಹೊರಬಿದ್ದರು. ವಿಶ್ವ ಚಾಂಪಿಯನ್‌ಶಿಪ್ ಕಂಚು ವಿಜೇತ ಚೈನೀಸ್ ತೈಪೆಯ ಚೌ ಟಿಯಾನ್ ಚೆನ್ ವಿರುದ್ಧ ನಡೆದ 1 ಗಂಟೆ 20 ನಿಮಿಷಗಳ ಪಂದ್ಯದಲ್ಲಿ 17-21, 21-15, 20-22 ಗೇಮ್‌ಗಳಲ್ಲಿ ವೀರೋಚಿತ ಸೋಲು ಕಂಡರು.
ನಾವಿಲ್ಲಿ ಕನಸುಗಳ ಮಾರಾಟಕ್ಕೆ ಬಂದಿಲ್ಲ: AIFF ನೂತನ ಅಧ್ಯಕ್ಷ ಕಲ್ಯಾಣ್ ಚೌಬೆ ದಿಟ್ಟ ನುಡಿ
ಚೌ ಟಿಯಾನ್ ಚೆನ್ ವಿರುದ್ಧ ಕಳೆದ 2 ಪಂದ್ಯಗಳಲ್ಲಿ ಗೆದ್ದಿದ್ದ ಪ್ರಣಯ್ ಈ ಪಂದ್ಯದಲ್ಲೂ ಜಯಿಸುವ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದಿದ್ದರು. ಆದರೆ ತೈಪೆ ಆಟಗಾರ ಮೇಲುಗೈ ಸಾಧಿಸಿ, ಸೆಮೀಸ್ ಪ್ರವೇಶಿಸಿದರು.
ಅಕ್ಟೋಬರ್ 7ರಿಂದ 9ನೇ ಆವೃತ್ತಿ ಐಎಸ್‌ಎಲ್ ಫುಟ್ಬಾಲ್
ಮುಂಬೈ: 9ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) ಫುಟ್ಬಾಲ್ ಟೂರ್ನಿಯ ಅಕ್ಟೋಬರ್ 7ರಿಂದ ಪ್ರಾರಂಭಗೊಳ್ಳಲಿದೆ ಎಂದು ಆಯೋಜಕರು ಗುರುವಾರ ತಿಳಿಸಿದ್ದಾರೆ. ಕೊಚ್ಚಿಯಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಹಾಗೂ ಈಸ್ಟ್ ಬೆಂಗಾಲ್ ಎಫ್‌ಸಿ ತಂಡಗಳು ಸೆಣಸಲಿವೆ.
ಬೆಂಗಳೂರಿನಲ್ಲಿ ಅಕ್ಟೋಬರ್ 8ರಂದು ಮೊದಲ ಪಂದ್ಯ ನಡೆಯಲಿದ್ದು, ಕಂಠೀರವ ಕ್ರೀಡಾಂಗಣದಲ್ಲಿ ಬೆಂಗಳೂರು ಎಫ್‌ಸಿ ತಂಡವು ನಾಥ್‌ರ್‍ಈಸ್ಟ್ ಎಫ್‌ಸಿ ವಿರುದ್ಧ ಕಣಕ್ಕಿಳಿಯಲಿದೆ. ಈ ಆವೃತ್ತಿಯಲ್ಲಿ ಗುರುವಾರದಿಂದ ಭಾನುವಾರದ ವರೆಗೂ ಮಾತ್ರ ಪಂದ್ಯಗಳು ನಡೆಯಲಿವೆ. ಲೀಗ್ ಹಂತವು 2023ರ ಫೆಬ್ರವರಿ 26ಕ್ಕೆ ಕೊನೆಗೊಳ್ಳಲಿದ್ದು, ಮಾರ್ಚ್‌ನಲ್ಲಿ ಪ್ಲೇ-ಆಫ್ ಪಂದ್ಯಗಳು ನಡೆಯಲಿವೆ. ಲೀಗ್ ಹಂತದಲ್ಲಿ ಪ್ರತಿ ತಂಡವು 20 ಪಂದ್ಯಗಳನ್ನು ಆಡಲಿದೆ. ಟೂರ್ನಿಯಲ್ಲಿ ಒಟ್ಟು 11 ತಂಡಗಳು ಪಾಲ್ಗೊಳ್ಳಲಿವೆ.