ನಾವಿಲ್ಲಿ ಕನಸುಗಳ ಮಾರಾಟಕ್ಕೆ ಬಂದಿಲ್ಲ: AIFF ನೂತನ ಅಧ್ಯಕ್ಷ ಕಲ್ಯಾಣ್ ಚೌಬೆ ದಿಟ್ಟ ನುಡಿ
ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಅಧ್ಯಕ್ಷರಾಗಿ ಕಲ್ಯಾಣ್ ಚೌಬೆ ಆಯ್ಕೆ
ಬೈಚುಂಗ್ ಭುಟಿಯಾ ಎದುರು 33-1 ಮತಗಳ ಭರ್ಜರಿ ಗೆಲುವು
ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ ಅಧ್ಯಕ್ಷ, ಶಾಸಕ ಎನ್.ಎ.ಹ್ಯಾರಿಸ್ ಉಪಾಧ್ಯಕ್ಷರಾಗಿ ಆಯ್ಕೆ
ನವದೆಹಲಿ(ಆ.03): ಅಖಿಲ ಭಾರತ ಫುಟ್ಬಾಲ್ ಫೆಡರೇಷನ್(ಎಐಎಫ್‌ಎಫ್) ತನ್ನ 85 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಮಾಜಿ ಫುಟ್ಬಾಲಿಗನನ್ನು ಅಧ್ಯಕ್ಷನಾಗಿ ಪಡೆದಿದೆ. ಕಿರಿಯರ ವಿಭಾಗದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ, ಪ್ರತಿಷ್ಠಿತ ಮೋಹನ್ ಬಗಾನ್, ಈಸ್ಟ್ ಬೆಂಗಾಲ್ ಕ್ಲಬ್‌ಗಳ ಮಾಜಿ ಗೋಲ್‌ಕೀಪರ್ ಕಲ್ಯಾಣ್ ಚೌಬೆ ಶುಕ್ರವಾರ ನಡೆದ ಚುನಾವಣೆಯಲ್ಲಿ 33-1 ಮತಗಳ ಅಂತರದಲ್ಲಿ ದಿಗ್ಗಜ ಫುಟ್ಬಾಲಿಗ, ಬೈಚುಂಗ್ ಭುಟಿಯಾ ವಿರುದ್ಧ ಜಯಿಸಿ ಅಧ್ಯಕ್ಷ ಸ್ಥಾನಕ್ಕೇರಿದರು.
ಬಿಜೆಪಿ ಟಿಕೆಟ್ ಪಡೆದು ಬಂಗಾಳದ ಕೃಷ್ಣನಗರದಿಂದ ಲೋಕಸಭೆಗೆ ಸ್ಪರ್ಧಿಸಿ ಸೋತಿದ್ದ ಕಲ್ಯಾಣ್‌ಗೆ ಬಹುತೇಕ ಎಲ್ಲಾ ರಾಜ್ಯ ಫುಟ್ಬಾಲ್ ಸಂಸ್ಥೆಗಳು ಬೆಂಬಲ ಸೂಚಿಸಿದ್ದವು. ಭುಟಿಯಾ ಹಾಗೂ ಕಲ್ಯಾಣ್ ಈಸ್ಟ್ ಬೆಂಗಾಲ್ ತಂಡದಲ್ಲಿ ಒಟ್ಟಿಗೆ ಆಡಿದ್ದರು ಎನ್ನುವುದು ವಿಶೇಷ.
ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಕಲ್ಯಾಣ್ ಚೌಬೆ, ನಾವಿಲ್ಲಿ ಕನಸುಗಳನ್ನು ಮಾರಲು ಬಂದಿಲ್ಲ. ನಾವು ಮುಂಬರುವ ದಿನಗಳಲ್ಲಿ ಸಾಕಷ್ಟು ಫುಟ್ಬಾಲ್ ಅಕಾಡೆಮಿಗಳನ್ನು ಸ್ಥಾಪಿಸುತ್ತೇವೆ, ಮುಂದಿನ ಎಂಟೇ ವರ್ಷಗಳಲ್ಲಿ ಫಿಫಾ ವಿಶ್ವಕಪ್ ಟೂರ್ನಿಯನ್ನು ಭಾರತದಲ್ಲಿ ನಡೆಸುತ್ತೇವೆ ಎಂದು ಬರವಸೆ ನೀಡುವುದಿಲ್ಲ ಎಂದು ಚೌಬೆ ಹೇಳಿದ್ದಾರೆ.
ನನ್ನ ಜೀವನದಲ್ಲಿ ನೂರಕ್ಕೂ ಹೆಚ್ಚು ಫುಟ್ಬಾಲ್ ಅಕಾಡೆಮಿಗಳನ್ನು ಉದ್ಘಾಟಿಸಲು ಹೋಗಿದ್ದೇನೆ. ಈ ಎಲ್ಲಾ ಅಕಾಡೆಮಿಗಳಲ್ಲೂ ಮುಂದಿನ ಎಂಟು ವರ್ಷಗಳಲ್ಲಿ ಭಾರತದಲ್ಲಿ ಫುಟ್ಬಾಲ್ ವಿಶ್ವಕಪ್ ಆಯೋಜಿಸಲಾಗುವುದು ಎಂದು ಮಕ್ಕಳಿಗೆ ಹೇಳಿದ್ದಾರೆ. ಆದರೆ ವಾಸ್ತವದಲ್ಲಿ ಇದು ಸಾಧ್ಯವಿಲ್ಲ. ನಾವು ಯಾವುದೇ ಭರವಸೆಗಳನ್ನು ನೀಡುವುದಿಲ್ಲ, ಆದರೆ ಒಂದಂತೂ ಹೇಳುತ್ತೇನೆ, ಭಾರತೀಯ ಫುಟ್ಬಾಲ್ ಅನ್ನು ಈಗಿರುವ ಪರಿಸ್ಥಿತಿಗಿಂತ ಉತ್ತಮ ಹಂತಕ್ಕೆ ಕೊಂಡೊಯ್ಯುತ್ತೇವೆ ಎಂದು ಕಲ್ಯಾಣ್ ಚೌಬೆ ತಿಳಿಸಿದ್ದಾರೆ.
ಭಾರತ ಫುಟ್ಬಾಲ್ ಮೇಲಿನ ನಿಷೇಧ ಹಿಂಪಡೆದ ಫಿಫಾ..!
ಇನ್ನು ಕಲ್ಯಾಣ್ ಚೌಬೆ ಎದುರು ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಜಿತಗೊಂಡಿರುವ ಬೈಚುಂಗ್ ಭುಟಿಯಾ ಅವರನ್ನು ಕಲ್ಯಾಣ್ ಚೌಬೆಯವರು ಕಾರ್ಯಕಾರಿಣಿ ಸಮಿತಿಯ ಸಹ ಆಯ್ಕೆ ಸದಸ್ಯರಾಗಿ ಕಾರ್ಯನಿರ್ವಹಿಸಲು ಸ್ವಾಗತಿಸಿದ್ದಾರೆ. ಭಾರತೀಯ ಫುಟ್ಬಾಲ್ ಸಂಸ್ಥೆಗೆ ಬೈಚುಂಗ್ ಭುಟಿಯಾ ನೀಡಿದ ಸಾಧನೆಯನ್ನು ಕೆಲವೇ ಕೆಲವು ಆಟಗಾರರು ಮಾತ್ರ ಮಾಡಿದ್ದಾರೆ. ನಾವು ಅವರನ್ನು ಸ್ವಾಗತಿಸುತ್ತೇವೆ ಎಂದು ಕಲ್ಯಾಣ್ ಚೌಬೆ ಹೇಳಿದ್ದಾರೆ.
ರಾಮಾಯಣದಲ್ಲಿ ಹನುಮಂತನೊಬ್ಬನೇ ಲಂಕೆಗೆ ಸೇತುವೆಯನ್ನು ನಿರ್ಮಿಸಲಿಲ್ಲ. ಅಳಿಲುಗಳು ಕೂಡಾ ತಮ್ಮ ಕೈಲಾದ ನೆರವನ್ನು ನೀಡಿವೆ. ಹೀಗಾಗಿ ಪ್ರತಿಯೊಬ್ಬರ ಸಹಾಯ ಹಾಗೂ ಸಹಕಾರವನ್ನು ಪಡೆದುಕೊಂಡು ನಾವು ಭಾರತೀಯ ಫುಟ್ಬಾಲ್ ಸಂಸ್ಥೆಯನ್ನು ಮುನ್ನಡೆಸಲಿದ್ದೇವೆ ಎಂದು ಚೌಬೆ ತಿಳಿಸಿದ್ದಾರೆ.
ಇದೇ ವೇಳೆ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ ಅಧ್ಯಕ್ಷ, ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ರಾಜಸ್ಥಾನದ ಮನ್ವೇಂದ್ರ ಸಿಂಗ್ ವಿರುದ್ಧ 29-5 ಮತಗಳ ಅಂತರದಲ್ಲಿ ಹ್ಯಾರಿಸ್ ಜಯಗಳಿಸಿದರು. ಕಾರ‍್ಯಕಾರಿ ಸಮಿತಿಯ ಎಲ್ಲಾ 14 ಸದಸ್ಯರು ಅವಿರೋಧವಾಗಿ ಆಯ್ಕೆಯಾದರು.
ಭಾರತೀಯ ಫುಟ್ಬಾಲ್ ಆಡಳಿತದಲ್ಲಿ ಹೊರಗಿನವರ ಪ್ರಭಾವದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆಗಳ ಒಕ್ಕೂಟ (ಫಿಫಾ) ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್‌ಎಫ್) ಮೇಲೆ ನಿಷೇಧ ಹೇರಿತ್ತು. 85 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಎಐಎಫ್‌ಎಫ್ ನಿಷೇಧಕ್ಕೊಳಗಾಗಿತ್ತು.
ಭಾರತೀಯ ಫುಟ್ಬಾಲ್ ಫೆಡರೇಶನ್(ಎಐಎಫ್‌ಎಫ್) ಮೇಲಿನ ನಿಷೇಧವನ್ನು ಜಾಗತಿಕ ಫುಟ್ಬಾಲ್ ಆಡಳಿತ ಸಮಿತಿ(ಫಿಫಾ) ಆಗಸ್ಟ್ 25ರಂದು ಹಿಂತೆಗೆದುಕೊಂಡಿತ್ತು. ಇದರೊಂದಗೆ ಭಾರತದಲ್ಲಿ ಅಕ್ಟೋಬರ್‌ನಲ್ಲಿ ನಿಗದಿಯಾಗಿದ್ದ ಅಂಡರ್-17 ಫಿಫಾ ಮಹಿಳಾ ವಿಶ್ವಕಪ್ ನಿಗದಿಯಂತೆ ನಡೆಯಲಿದೆ.