18 ವರ್ಷ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ । ಕಾಲ್ತುಳಿತದ ಬಳಿಕ ಮತ್ತೆ ಐಪಿಎಲ್ ಟಿ20ಗೆ ಸಜ್ಜು -13 ನಗರಗಳಲ್ಲಿ ನಡೆಯಲಿವೆ ಪಂದ್ಯಗಳು । ಟ್ರೋಫಿಗಾಗಿ 10 ತಂಡಗಳಿಂದ ಮೆಗಾ ಫೈಟ್ । ವಿರಾಟ್, ರೋಹಿತ್ ಮೇಲೆ ಎಲ್ಲರ ಕಣ್ಣು
ಬೆಂಗಳೂರು : ಜಾಗತಿಕ ಮಟ್ಟದ ಅತ್ಯಂತ ಶ್ರೀಮಂತ, ಶ್ರೇಷ್ಠ ಕ್ರಿಕೆಟ್ ಲೀಗ್ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಮತ್ತೆ ಆಗಮನವಾಗಿದೆ. ಕಳೆದ 18 ವರ್ಷಗಳಿಂದಲೂ ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ಒದಗಿಸುತ್ತಿರುವ ಐಪಿಎಲ್‌ನ 19ನೇ ಆವೃತ್ತಿಗೆ ಶನಿವಾರ ಚಾಲನೆ ಸಿಗಲಿದೆ. ಕರ್ನಾಟಕ ಕ್ರಿಕೆಟ್‌ನ ಪುಣ್ಯಭೂಮಿ, ಚಾಂಪಿಯನ್ ಆರ್‌ಸಿಬಿಯ ತವರು ನೆಲ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಉದ್ಘಾಟನಾ ಪಂದ್ಯ ನಡೆಯಲಿದೆ. ಬೆಂಗಳೂರಿನಲ್ಲಿ ಬರೋಬ್ಬರಿ 18 ವರ್ಷ ಬಳಿಕ ಉದ್ಘಾಟನಾ ಪಂದ್ಯ ನಡೆಯಲಿದ್ದು, ಕಳೆದ ವರ್ಷದ ಭೀಕರ ಕಾಲ್ತುಳಿತ ಬಳಿಕ ಮತ್ತೆ ನಗರದಲ್ಲಿ ಐಪಿಎಲ್ ರಂಗೇರಲಿದೆ.
ಈ ಬಾರಿ ಟೂರ್ನಿ 2 ತಿಂಗಳಿಗೂ ಹೆಚ್ಚು ಕಾಲ ನಡೆಯಲಿದೆ. ಮೇ 24ರ ವರೆಗೂ ಲೀಗ್ ಹಂತದ ಪಂದ್ಯಗಳು ನಡೆಯಲಿದ್ದು, ಮೇ 31ರಂದು ಫೈನಲ್ ಪಂದ್ಯ ನಿಗದಿಯಾಗಿದೆ. ಟ್ರೋಫಿಗಾಗಿ ಈ ಬಾರಿಯೂ 10 ತಂಡಗಳು ಸೆಣಸಾಡಲಿದ್ದು, ಟೂರ್ನಿಯಲ್ಲಿ ಒಟ್ಟು 65 ದಿನಗಳ ಕಾಲ 74 ಪಂದ್ಯಗಳು ನಡೆಯಲಿವೆ. ಬರೋಬ್ಬರಿ 18 ವರ್ಷಗಳ ಕಾಯುವಿಕೆ ಬಳಿಕ ಕಳೆದ ಬಾರಿ ಕಪ್ ಗೆದ್ದಿದ್ದ ಆರ್‌ಸಿಬಿ ತಂಡ ಈ ಬಾರಿ ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಟೂರ್ನಿಗೆ ಕಾಲಿಡಲಿದ್ದು, ಮತ್ತೊಮ್ಮೆ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿಯಲಿದೆ.
ಈ ಬಾರಿಯೂ ಬಹುತೇಕ ದಿನ ಒಂದೇ ಪಂದ್ಯ ನಡೆಯಲಿದೆ. ಕೆಲ ವಾರಾಂತ್ಯಗಳಲ್ಲಿ 2 ಪಂದ್ಯಗಳು ನಿಗದಿಯಾಗಿವೆ. ಮೊದಲ ಪಂದ್ಯ ಮಧ್ಯಾಹ್ನ 3.30ಕ್ಕೆ, 2ನೇ ಪಂದ್ಯ ಸಂಜೆ 7.30ಕ್ಕೆ ಆರಂಭಗೊಳ್ಳಲಿದೆ.
ಟೂರ್ನಿ ಮಾದರಿ ಹೇಗೆ?:
ಟೂರ್ನಿಯಲ್ಲಿ ತಲಾ 5 ತಂಡಗಳ 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ತಂಡಗಳ ಈವರೆಗಿನ ಸಾಧನೆ ಆಧಾರದಲ್ಲಿ 2 ಗುಂಪುಗಳನ್ನು ರಚಿಸಲಾಗಿದೆ. ಆದರೆ ಈ ಗುಂಪುಗಳು ವರ್ಚುವಲ್ ಆಗಿದ್ದು, ಅಂಕಪಟ್ಟಿಯಲ್ಲಿ ಗಣನೆಗೆ ಬರುವುದಿಲ್ಲ. ಚೆನ್ನೈ, ಕೋಲ್ಕತಾ, ರಾಜಸ್ಥಾನ, ಆರ್‌ಸಿಬಿ, ಪಂಜಾಬ್ ಒಂದು ಗುಂಪಿನಲ್ಲಿದ್ದು, ಮುಂಬೈ, ಸನ್‌ರೈಸರ್ಸ್, ಗುಜರಾತ್, ಡೆಲ್ಲಿ ಹಾಗೂ ಲಖನೌ ತಂಡಗಳು ಮತ್ತೊಂದು ಗುಂಪಿನಲ್ಲಿವೆ. ಪ್ರತಿ ತಂಡ ತನ್ನ ಗುಂಪಿನಲ್ಲಿರುವ ಇತರ ತಂಡಗಳ ವಿರುದ್ಧ ತಲಾ 1 ಹಾಗೂ ಇನ್ನೊಂದು ಗುಂಪಿನ 5 ತಂಡಗಳ ವಿರುದ್ಧ ತಲಾ 2 ಪಂದ್ಯ ಆಡಲಿದೆ. ಉದಾಹರಣೆಗೆ, ಆರ್‌ಸಿಬಿಯು ತನ್ನ ಗುಂಪಿನಲ್ಲಿರುವ ಚೆನ್ನೈ, ಕೋಲ್ಕತಾ, ರಾಜಸ್ಥಾನ, ಪಂಜಾಬ್ ವಿರುದ್ಧ ತಲಾ 1 ಹಾಗೂ ಇನ್ನೊಂದು ಗುಂಪಿನಲ್ಲಿರುವ ಗುಜರಾತ್, ಮುಂಬೈ, ಲಖನೌ, ಸನ್‌ರೈಸರ್ಸ್, ಡೆಲ್ಲಿ ವಿರುದ್ಧ ತಲಾ 2 ಪಂದ್ಯ ಆಡಬೇಕಿದೆ. ಅಂದರೆ, ಪ್ರತಿ ತಂಡಕ್ಕೆ ಲೀಗ್ ಹಂತದಲ್ಲಿ ತಲಾ 14 ಪಂದ್ಯ.
ಲೀಗ್ ಹಂತ ಮುಕ್ತಾಯಕ್ಕೆ ಅಗ್ರ-2 ಸ್ಥಾನ ಪಡೆಯುವ ತಂಡಗಳು ಕ್ವಾಲಿಫೈಯರ್-1 ಹಾಗೂ 3, 4ನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್ ಪ್ರವೇಶಿಸಲಿವೆ. ಕ್ವಾಲಿಫೈಯರ್-1ರಲ್ಲಿ ಗೆದ್ದ ತಂಡ ನೇರವಾಗಿ ಫೈನಲ್‌ಗೇರಲಿದೆ. ಸೋತ ತಂಡ ಎಲಿಮಿನೇಟರ್‌ನಲ್ಲಿ ಗೆದ್ದ ತಂಡದ ವಿರುದ್ಧ ಆಡಲಿದ್ದು, ಅದರಲ್ಲಿ ಗೆಲ್ಲುವ ತಂಡ ಫೈನಲ್ ಪ್ರವೇಶಿಸಲಿದೆ.
ಒಟ್ಟು 13 ನಗರದಲ್ಲಿ ರಂಗೇರಲಿದೆ ಲೀಗ್
ಈ ಬಾರಿ ಟೂರ್ನಿ ಬೆಂಗಳೂರು ಸೇರಿದಂತೆ ಒಟ್ಟು 13 ನಗರಗಳಲ್ಲಿ ನಡೆಯಲಿವೆ. ಅಹಮದಾಬಾದ್, ಚೆನ್ನೈ, ಮುಂಬೈ, ಕೋಲ್ಕತಾ, ನವದೆಹಲಿ, ಧರ್ಮಶಾಲಾ, ಗುವಾಹಟಿ, ಹೈದರಾಬಾದ್, ಜೈಪುರ, ಲಖನೌ, ಮುಲ್ಲಾನ್‌ಪುರ, ರಾಯ್ಪುರದಲ್ಲೂ ಪಂದ್ಯಗಳು ಆಯೋಜನೆಗೊಳ್ಳಲಿವೆ.
ವಿರಾಟ್, ರೋಹಿತ್‌ರತ್ತ ಎಲ್ಲರ ಚಿತ್ತ
ಈ ಬಾರಿಯೂ ದಿಗ್ಗಜ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮೇಲೆ ಎಲ್ಲರ ಕಣ್ಣಿದೆ. ಇವರ ಜೊತೆಗೆ ಎಂ.ಎಸ್.ಧೋನಿ, ಬೂಮ್ರಾ, ಹಾರ್ದಿಕ್ ಪಾಂಡ್ಯ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್, ವಿದೇಶಿ ತಾರೆಗಳಾದ ಹೇಜಲ್‌ವುಡ್, ಕ್ಲಾಸೆನ್, ಕ್ಯಾಮರೂನ್ ಗ್ರೀನ್, ಪ್ಯಾಟ್ ಕಮಿನ್ಸ್ ಸೇರಿದಂತೆ ಪ್ರಮುಖರು ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ.
ಈ ಬಾರಿಯಾದರೂ ಆಗುತ್ತಾ ಧೋನಿಗಿದು ಕೊನೆ ಐಪಿಎಲ್?
ಕಳೆದ 3-4 ವರ್ಷಗಳಿಂದಲೂ ಐಪಿಎಲ್ ಆರಂಭಕ್ಕೂ ಮುನ್ನ ಉದ್ಭವಿಸುತ್ತಿದ್ದ ಪ್ರಶ್ನೆಗಳಲ್ಲಿ ಪ್ರಮುಖವಾದದ್ದು ಎಂ.ಎಸ್.ಧೋನಿಯ ಕುರಿತಾಗಿತ್ತು. ಇದು ಅವರ ಕೊನೆ ಐಪಿಎಲ್ ಆಗಲಿದೆಯೇ ಎಂಬ ಕುತೂಹಲ 2023ರಿಂದಲೂ ಇದೆ. ಪ್ರತಿ ಬಾರಿಯೂ ಅವರು ಗುಟ್ಟನ್ನು ಬಿಟ್ಟುಕೊಡದೆ ಆಡುತ್ತಲೇ ಇದ್ದಾರೆ. ಆದರೆ ಈ ಬಾರಿ ಅವರಿಗೆ ಕೊನೆ ಐಪಿಎಲ್ ಆಗಲಿದೆ ಎಂದೇ ಹೇಳಲಾಗುತ್ತಿದೆ. ಸದ್ಯ ಅವರಿಗೆ 44 ವರ್ಷವಾಗಿದ್ದು, ಟೂರ್ನಿ ಬಳಿಕ ಕ್ರಿಕೆಟ್‌ನಿಂದ ದೂರ ಉಳಿಯುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. 2020ರಲ್ಲೇ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿದ್ದರು.
ಎಲ್ಲಾ 10 ತಂಡಕ್ಕೂ ಭಾರತೀಯ ನಾಯಕರು!
ಈ ಬಾರಿ ಲೀಗ್‌ನಲ್ಲಿ ಒಂದು ವಿಶೇಷತೆಯಿದೆ. ಆರಂಭಿಕ ಹಂತದಲ್ಲಿ ಎಲ್ಲಾ 10 ತಂಡಗಳನ್ನು ಭಾರತೀಯ ನಾಯಕರೇ ಮುನ್ನಡೆಸಲಿದ್ದಾರೆ. ಸನ್‌ರೈಸರ್ಸ್‌ಗೆ ಪ್ಯಾಟ್ ಕಮಿನ್ಸ್ ನಾಯಕನಾಗಿದ್ದರೂ ಅವರು ಗಾಯಗೊಂಡಿರುವ ಕಾರಣ ಆರಂಭಿಕ ಕೆಲ ಪಂದ್ಯಗಳಲ್ಲಿ ಇಶಾನ್ ಕಿಶನ್ ತಂಡ ಮುನ್ನಡೆಸಲಿದ್ದಾರೆ. ಉಳಿದಂತೆ ಆರ್‌ಸಿಬಿಗೆ ರಜತ್ ಪಾಟೀದಾರ್, ಚೆನ್ನೈಗೆ ಋತುರಾಜ್, ಕೋಲ್ಕತಾಗೆ ಅಜಿಂಕ್ಯ ರಹಾನೆ, ಮುಂಬೈಗೆ ಹಾರ್ದಿಕ್, ಗುಜರಾತ್‌ಗೆ ಗಿಲ್, ಪಂಜಾಬ್‌ಗೆ ಶ್ರೇಯಸ್, ಲಖನೌಗೆ ರಿಷಭ್ ಪಂತ್, ಡೆಲ್ಲಿಗೆ ಅಕ್ಷರ್ ಪಟೇಲ್, ರಾಜಸ್ಥಾನಕ್ಕೆ ರಿಯಾನ್ ಪರಾಗ್ ನಾಯಕತ್ವ ವಹಿಸಲಿದ್ದಾರೆ.
14 ಪಂದ್ಯ
ಪ್ರತಿ ತಂಡಗಳು ಲೀಗ್ ಹಂತದಲ್ಲಿ ಒಟ್ಟು 14 ಪಂದ್ಯಗಳನ್ನು ಆಡಲಿದೆ.
02 ನಗರ
ಆರ್‌ಸಿಬಿ 2 ನಗರಗಳನ್ನು ತವರು(ಬೆಂಗಳೂರು, ರಾಯ್ಪುರ) ಕ್ರೀಡಾಂಗಣವಾಗಿ ಆಯ್ಕೆ ಮಾಡಿದೆ.
70 ಪಂದ್ಯ
ಲೀಗ್ ಹಂತದಲ್ಲಿ 70 ಪಂದ್ಯ. ಬಳಿಕ ಫೈನಲ್ ಸೇರಿ ಪ್ಲೇ-ಆಫ್‌ನಲ್ಲಿ 4 ಪಂದ್ಯ ನಡೆಯಲಿವೆ.


