ಮಂಗಳವಾರದಿಂದ (ಅ.25) ಆರಂಭವಾಗುವ ಫ್ರೆಂಚ್ ಓಪನ್ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪಿ.ವಿ ಸಿಂಧೂ ಸೇರಿದಂತೆ ಭಾರತದ ಸ್ಟಾರ್ ಆಟಗಾರರು ಪ್ರಭಾವಿ ಪ್ರದರ್ಶನದೊಂದಿಗೆ ಪದಕ ಜಯಿಸುವ ವಿಶ್ವಾಸದಲ್ಲಿದ್ದಾರೆ.

ಪ್ಯಾರಿಸ್(ಅ.24): ರಿಯೊ ಕೂಟದ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ಮತ್ತು ಭಾರತದ ಇತರೆ ಶಟ್ಲರ್‌ಗಳು, ಮಂಗಳವಾರದಿಂದ (ಅ.25) ಆರಂಭವಾಗುವ ಫ್ರೆಂಚ್ ಓಪನ್ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಭಾವಿ ಪ್ರದರ್ಶನದೊಂದಿಗೆ ಪದಕ ಜಯಿಸುವ ವಿಶ್ವಾಸದಲ್ಲಿದ್ದಾರೆ.

ಸಿಂಧು ಮೊದಲ ಸುತ್ತಿನ ಪಂದ್ಯದಲ್ಲಿ ಹಾಂಕಾಂಗ್‌ನ ಯಿಪ್ ಪುಯಿ ಯಿನ್ ಅವರನ್ನು ಎದುರಿಸಲಿದ್ದಾರೆ. ಇನ್ನು 2ನೇ ಸುತ್ತಿನಲ್ಲಿ ಚೀನಾದ ಹೆ ಬಿಂಗ್‌ಜಿಯಾವೊ ಎದುರು ಸೆಣಸಲಿದ್ದಾರೆ. ಡೆನ್ಮಾರ್ಕ್ ಓಪನ್‌ನಲ್ಲಿ ಜಿಯಾವೊ ಅವರನ್ನು ಸಿಂಧು ಮಣಿಸಿದ್ದರು.

ಇನ್ನು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಡಚ್ ಓಪನ್ ಫೈನಲ್ ಪ್ರವೇಶಿಸಿದ್ದ ಅಜಯ್ ಜಯರಾಂ, ಮೊದಲ ಸುತ್ತಿನಲ್ಲಿ ಸ್ಥಳೀಯ ಆಟಗಾರನ ಎದುರು ಹೋರಾಡಲಿದ್ದಾರೆ. ಸ್ವಿಜರ್‌ಲೆಂಡ್ ಓಪನ್ ಚಾಂಪಿಯನ್ ಎಚ್.ಎಸ್. ಪ್ರಣಯ್, ಮೊದಲ ಸುತ್ತಿನ ಪಂದ್ಯದಲ್ಲಿ ಥಾಯ್ಲೆಂಡ್‌ನ ಬೂನ್ಸಾಕ್ ಪೊನ್ಸಾನಾ ಎದುರು ಸೆಣಸಲಿದ್ದಾರೆ.

ಕೆನಡಾ ಓಪನ್ ಪ್ರಶಸ್ತಿ ವಿಜೇತ ಭಾರತದ ಮತ್ತೊಬ್ಬ ಸಿಂಗಲ್ಸ್ ಶಟ್ಲರ್ ಬಿ. ಸಾಯಿ ಪ್ರಣೀತ್, ಕೊರಿಯಾದ ಲೀ ಹ್ಯೂನ್ ಸೆಕೆಂಡ್ ಅವರನ್ನು ಎದುರಿಸಲಿದ್ದಾರೆ. ಇನ್ನೊಬ್ಬ ಸಿಂಗಲ್ಸ್ ಪ್ರತಿಭೆ ಸಮೀರ್ ವರ್ಮಾ ಬ್ರೆಜಿಲ್‌ನ ಯಾಗೊರ್ ಕೊಯಿಲ್ಹೊ ಡಿ ಒಲ್ಹಿವೇರಾ ಎದುರು ಸೆಣಸಲಿದ್ದಾರೆ.