French Open 2023: ಆಲ್ಕರಜ್, ಇಗಾ ಸ್ವಿಯಾಟೆಕ್ ಸೆಮೀಸ್‌ಗೆ ಲಗ್ಗೆ
ಫ್ರೆಂಚ್ ಓಪನ್ ಟೂರ್ನಿಯಲ್ಲಿ ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಿದ ಕಾರ್ಲೋಸ್ ಆಲ್ಕರಜ್
ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂನಲ್ಲಿ ಚೊಚ್ಚಲ ಬಾರಿ ಸೆಮಿಫೈನಲ್ ಪ್ರವೇಶಿಸಿದ ಆಲ್ಕರಜ್
ಹಾಲಿ ಚಾಂಪಿಯನ್ ಇಗಾ ಸ್ವಿಯಾಟೆಕ್ ಕೂಡಾ ಸೆಮೀಸ್‌ಗೆ ಲಗ್ಗೆ
ಪ್ಯಾರಿಸ್(ಜೂ.08): ವಿಶ್ವ ನಂ.1 ಟೆನಿಸಿಗ, ಈ ಬಾರಿಯ ಪ್ರಮುಖ ಆಕರ್ಷಣೆ ಎನಿಸಿರುವ ಯುವ ತಾರೆ ಕಾರ್ಲೋಸ್ ಆಲ್ಕರಜ್ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂನಲ್ಲಿ ಚೊಚ್ಚಲ ಬಾರಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದ್ದಾರೆ. ಹಾಲಿ ಚಾಂಪಿಯನ್ ಇಗಾ ಸ್ವಿಯಾಟೆಕ್ ಕೂಡಾ ಸೆಮೀಸ್ಗೇರಿದ್ದು, ಮತ್ತೊಂದು ಗ್ರ್ಯಾನ್‌ಸ್ಲಾಂ ಗೆಲುವಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.
20 ವರ್ಷದ ಹಾಲಿ ಯುಎಸ್ ಓಪನ್ ಚಾಂಪಿಯನ್ ಆಲ್ಕರಜ್ ಮಂಗಳವಾರ ರಾತ್ರಿ ಪುರುಷರ ಸಿಂಗಲ್ಸ್ ಕ್ವಾರ್ಟರ್ಫೈನಲ್ನಲ್ಲಿ 5ನೇ ಶ್ರೇಯಾಂಕಿತ ಗ್ರೀಕ್‌ನ ಸ್ಟೆಫಾನೊಸ್ ಸಿಟ್ಸಿಪಾಸ್ ವಿರುದ್ಧ 6-2, 6-1, 7-6(7-5) ಸೆಟ್ಗಳಲ್ಲಿ ಜಯಭೇರಿ ಬಾರಿಸಿದರು. ಸಿಟ್ಸಿಪಾಸ್ 2021ರ ಬಳಿಕ ಮತ್ತೆ ಫೈನಲ್ಗೇರಿ ಚೊಚ್ಚಲ ಗ್ರ್ಯಾನ್‌ಸ್ಲಾಂ ಗೆಲ್ಲುವ ನಿರೀಕ್ಷೆಯಲ್ಲಿದ್ದರೂ ಆಲ್ಕರಜ್ರ ಬಲಿಷ್ಠ ಹೊಡೆತಗಳ ಮುಂದೆ ಮಂಡಿಯೂರಿದರು. 2ನೇ ಗ್ರ್ಯಾನ್‌ಸ್ಲಾಂ ಗೆಲ್ಲುವತ್ತ ದಿಟ್ಟಹೆಜ್ಜೆ ಇಟ್ಟಿರುವ ಆಲ್ಕರಜ್ಗೆ ಶುಕ್ರವಾರ ಸೆಮಿಫೈನಲ್ನಲ್ಲಿ 22 ಗ್ರ್ಯಾನ್ಸ್ಲಾಂಗಳ ಒಡೆಯ, ಸರ್ಬಿಯಾದ ನೋವಾಕ್ ಜೋಕೋವಿಚ್ ಸವಾಲು ಎದುರಾಗಲಿದ್ದು, ಈ ಮುಖಾಮುಖಿ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಇಗಾ ಜಯದ ಓಟ: 2020, 2022ರ ಚಾಂಪಿಯನ್, ವಿಶ್ವ ನಂ.1 ಸ್ವಿಯಾಟೆಕ್ ಮಹಿಳಾ ಸಿಂಗಲ್ಸ್ ಕ್ವಾರ್ಟರ್ನಲ್ಲಿ 6ನೇ ಶ್ರೇಯಾಂಕಿತೆ, ಅಮೆರಿಕದ ಕೊಕೊ ಗಾಫ್ ವಿರುದ್ಧ 6-4, 6-2ರಲ್ಲಿ ಸುಲಭ ಗೆಲುವು ಸಾಧಿಸಿದರು. ಕಳೆದ ಆವೃತ್ತಿ ಫೈನಲ್‌ನಲ್ಲಿ ಗಾಫ್, ಸ್ವಿಯಾಟೆಕ್ ವಿರುದ್ಧವೇ ಸೋತಿದ್ದರು.
French Open 2023: ಸೆಮೀಸ್‌ಗೆ ವಿಶ್ವ ನಂ.2 ಸಬಲೆಂಕಾ!
ಜಬುರ್ಗೆ ಶಾಕ್: 7ನೇ ಶ್ರೇಯಾಂಕಿತೆ, ಟ್ಯುನೀಶಿಯಾದ ಒನ್ಸ್ ಜಬುರ್ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ಆಘಾತ ಅನುಭವಿಸಿದರು. ಬುಧವಾರ ಮಹಿಳಾ ಸಿಂಗಲ್ಸ್ನಲ್ಲಿ ಕಳೆದ ವರ್ಷದ ವಿಂಬಲ್ಡನ್, ಆಸ್ಪ್ರೇಲಿಯನ್ ಓಪನ್ ರನ್ನರ್-ಅಪ್ ಜಬುರ್, ಬ್ರೆಜಿಲ್‌ನ ಬೀಟ್ರಿಜ್ ಹಡ್ಡಾದ್ ವಿರುದ್ಧ 6-3, 6-7(5-7), 1-6ರಲ್ಲಿ ಸೋಲನುಭವಿಸಿದರು. ಹಡ್ಡಾದ್ 1968ರ ಬಳಿಕ ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ ಸೆಮೀಸ್ಗೇರಿದ ಮೊದಲ ಬ್ರೆಜಿಲ್ ಆಟಗಾರ್ತಿ ಎನಿಸಿಕೊಂಡರು. ಗುರುವಾರ ಸೆಮೀಸ್ನಲ್ಲಿ ಇಗಾ-ಹಡ್ಡಾದ್ ಸೆಣಸಲಿದ್ದಾರೆ.
ಸಿಂಗಾಪುರ ಓಪನ್ನಲ್ಲಿ ಸಾತ್ವಿಕ್-ಚಿರಾಗ್‌ಗೆ ಸೋಲು
ಸಿಂಗಾಪುರ: ಪದಕ ಭರವಸೆ ಮೂಡಿಸಿದ್ದ ಭಾರತದ ತಾರಾ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮೊದಲ ಸುತ್ತಲ್ಲೇ ಸೋತು ನಿರಾಸೆ ಅನುಭವಿಸಿದೆ. ವಿಶ್ವ ನಂ.4, ಭಾರತದ ಜೋಡಿ ಬುಧವಾರ ಜಪಾನ್ನ ಅಕಿರಾ ಕೊಗಾ-ತೈಚಿ ಸಾಯಿಟೊ ಜೋಡಿ ವಿರುದ್ಧ 21-18, 14-21, 21-18 ಗೇಮ್ಗಲ್ಲಿ ಸೋಲನುಭವಿಸಿತು.
ಮಹಿಳಾ ಡಬಲ್ಸ್ನಲ್ಲಿ ತ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್, ಹಾಂಕಾಂಗ್‌ನ ಯೆಂಗ್ ಟಿಂಗ್-ಪುಯಿ ಲಾಮ್ ವಿರುದ್ಧ 14-21, 21-18, 19-21ರಲ್ಲಿ ಸೋಲನುಭವಿಸಿದರು. ಗುರುವಾರ ಮಾಜಿ ವಿಶ್ವ ನಂ.1 ಕಿದಂಬಿ ಶ್ರೀಕಾಂತ್, ಪ್ರಿಯಾನ್ಶು ರಾಜಾವತ್ ಪುರುಷರ ಸಿಂಗಲ್ಸ್ 2ನೇ ಸುತ್ತಿನ ಪಂದ್ಯಗಳಲ್ಲಿ ಆಡಲಿದ್ದಾರೆ.
ಭಾರತ ನೆಟ್ಬಾಲ್ ತಂಡಕ್ಕೆ ರಾಜ್ಯದ ಗಗನಾ, ಸುರಭಿ
ಬೆಂಗಳೂರು: ಜೂ.10ರಿಂದ 17ರ ವರೆಗೆ ಕೊರಿಯಾದಲ್ಲಿ ನಡೆಯಲಿರುವ ಏಷ್ಯನ್ ಯೂತ್ ನೆಟ್ಬಾಲ್ ಚಾಂಪಿಯನ್ಶಿಪ್ಗೆ ಭಾರತ ಮಹಿಳಾ ತಂಡ ಆಯ್ಕೆಯಾಗಿದ್ದು, ಕರ್ನಾಟಕದ ಕೆ.ಎಸ್.ಗಗನಾ ಹಾಗೂ ಬಿ.ಆರ್.ಸುರಭಿ ಸ್ಥಾನ ಪಡೆದಿದ್ದಾರೆ. ಗಗನಾರನ್ನು ಉಪನಾಯಕಿಯನ್ನಾಗಿ ನೇಮಿಸಲಾಗಿದೆ. ಕರ್ನಾಟಕದ ಮಾಜಿ ಆಟಗಾರ ಸಿ.ಗಿರೀಶ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ.