ಫ್ರೆಂಚ್‌ ಓಪನ್‌ನಲ್ಲಿ ಮೊದಲ ಬಾರಿಗೆ ಸೆಮೀಸ್‌ಗೆ ಲಗ್ಗೆಯಿಟ್ಟ ಸಬಲೆಂಕಾಕ್ವಾರ್ಟರ್‌ನಲ್ಲಿ ಸ್ವಿಟೋಲಿನಾ ವಿರುದ್ಧ ಜಯಸೆಮೀಸ್‌ನಲ್ಲಿ ಚೆಕ್‌ ಗಣರಾಜ್ಯದ ಕ್ಯಾರೋಲಿನಾ ಮುಚೋವಾ ವಿರುದ್ದ ಕಾದಾಟ

ಪ್ಯಾರಿಸ್‌(ಜೂ.07): ವಿಶ್ವ ನಂ.2, ಹಾಲಿ ಆಸ್ಪ್ರೇಲಿಯನ್‌ ಓಪನ್‌ ಚಾಂಪಿಯನ್‌ ಬೆಲಾರಸ್‌ನ ಅರೈನಾ ಸಬಲೆಂಕಾ ಚೊಚ್ಚಲ ಬಾರಿಗೆ ಫ್ರೆಂಚ್‌ ಓಪನ್‌ ಮಹಿಳಾ ಸಿಂಗಲ್ಸ್‌ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಮಂಗಳವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಮಾಜಿ ವಿಶ್ವ ನಂ.3, ಉಕ್ರೇನ್‌ನ ಎಲೆನಾ ಸ್ವಿಟೋಲಿನಾ ವಿರುದ್ಧ 6-4, 6-4 ನೇರ ಸೆಟ್‌ಗಳಲ್ಲಿ ಸುಲಭ ಜಯ ಸಾಧಿಸಿದರು.

ಸಬಲೆಂಕಾಗೆ ಸೆಮೀಸ್‌ನಲ್ಲಿ ಚೆಕ್‌ ಗಣರಾಜ್ಯದ ಕ್ಯಾರೋಲಿನಾ ಮುಚೋವಾ ಎದುರಾಗಲಿದ್ದಾರೆ. ಮಂಗಳವಾರ ಕ್ವಾರ್ಟರ್‌ ಫೈನಲ್‌ನಲ್ಲಿ ಮುಚೋವಾ, 2021ರ ರನ್ನರ್‌-ಅಪ್‌ ರಷ್ಯಾದ ಅನಸ್ತಾಸಿಯಾ ಪಾವ್ಲುಚೆಂಕೊವಾ ವಿರುದ್ಧ 7-5, 6-2 ಸೆಟ್‌ಗಳಲ್ಲಿ ಜಯಿಸಿದರು.

ಇದೇ ವೇಳೆ ಸೋಮವಾರ ರಾತ್ರಿ 4ನೇ ಸುತ್ತಿನ ಪಂದ್ಯದಲ್ಲಿ ತಮ್ಮ ಎದುರಾಳಿ ಉಕ್ರೇನ್‌ನ ಲೆಸಿಯಾ ಸುರೆಂಕೊ ಮೊದಲ ಸೆಟ್‌ ವೇಳೆ ಗಾಯಗೊಂಡು ಹೊರನಡೆದ ಕಾರಣ ವಿಶ್ವ ನಂ.1, ಹಾಲಿ ಚಾಂಪಿಯನ್‌ ಇಗಾ ಸ್ವಿಯಾಟೆಕ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಅವರು ಬುಧವಾರ ಅಮೆರಿಕದ ಕೊಕೊ ಗಾಫ್‌ ವಿರುದ್ಧ ಸೆಣಸಲಿದ್ದಾರೆ.

French Open 2023: ಕ್ವಾರ್ಟ​ರ್‌ ಫೈನಲ್‌ಗೆ ಆಲ್ಕ​ರಜ್‌, ಜಬುರ್‌ ಲಗ್ಗೆ

ಇನ್ನು ಪುರುಷರ ಸಿಂಗಲ್ಸ್‌ನಲ್ಲಿ ಕಳೆದ ವರ್ಷದ ರನ್ನರ್‌-ಅಪ್‌ ಕ್ಯಾಸ್ಪರ್‌ ರುಡ್‌, 6ನೇ ಶ್ರೇಯಾಂಕಿತ ಹೋಲ್ಗರ್‌ ರುನೆ ಅಂತಿಮ 8ರ ಘಟ್ಟಕ್ಕೆ ಪ್ರವೇಶಿಸಿದರು. 4ನೇ ಸುತ್ತಿನ ಪಂದ್ಯದಲ್ಲಿ ನಾರ್ವೆಯ ರುಡ್‌, ಚಿಲಿಯ ನಿಕೋಲಸ್‌ ಜಾರ್ರಿ ವಿರುದ್ಧ 7-6, 7-5, 7-5ರಲ್ಲಿ ಗೆದ್ದರೆ, ಡೆನ್ಮಾರ್ಕ್ನ ಹೋಲ್ಗರ್‌ 4ನೇ ಸುತ್ತಿನ ಪಂದ್ಯದಲ್ಲಿ ಅರ್ಜೆಂಟೀನಾದ ಫ್ರಾನ್ಸಿಸ್ಕೊ ವಿರುದ್ಧ 7-6, 3-6, 6-4, 1-6, 7-6 ಸೆಟ್‌ಗಳಲ್ಲಿ ರೋಚಕ ಗೆಲುವು ಪಡೆದರು.

ಸಿಂಗಾಪುರ ಓಪನ್‌: ಸಿಂಧುಗೆ ಸೋಲು!

ಸಿಂಗಾಪುರ: ಹಾಲಿ ಚಾಂಪಿಯನ್‌ ಪಿ.ವಿ.ಸಿಂಧು ಸಿಂಗಾಪುರ ಓಪನ್‌ನ ಮೊದಲ ಸುತ್ತಿನಲ್ಲೇ ಸೋತು ಆಘಾತ ಅನುಭವಿಸಿದ್ದಾರೆ. ಮಂಗಳವಾರ ನಡೆದ ಮಹಿಳಾ ಸಿಂಗಲ್ಸ್‌ ಪಂದ್ಯದಲ್ಲಿ ವಿಶ್ವ ನಂ.1, ಜಪಾನ್‌ನ ಅಕನೆ ಯಮಗುಚಿ ವಿರುದ್ಧ 21-18, 19-21, 17-21 ಗೇಮ್‌ಗಳಲ್ಲಿ ಸೋಲುಂಡರು. ಇದೇ ವೇಳೆ ಎಚ್‌.ಎಸ್‌.ಪ್ರಣಯ್‌, ಲಕ್ಷ್ಯ ಸೇನ್‌ ಹಾಗೂ ಸೈನಾ ನೆಹ್ವಾಲ್‌ ಸಹ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು. ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಕಿದಂಬಿ ಶ್ರೀಕಾಂತ್‌, ಥಾಯ್ಲೆಂಡ್‌ನ ಕಂಟಾಫäನ್‌ ವಾಂಗ್‌ಚಾರೊಯಿನ್‌ ವಿರುದ್ಧ 21-15, 21-19ರಲ್ಲಿ ಗೆದ್ದು 2ನೇ ಸುತ್ತು ಪ್ರವೇಶಿಸಿದರು. ಪುರುಷರ ಡಬಲ್ಸ್‌ನಲ್ಲಿ ಅರ್ಜುನ್‌ ಹಾಗೂ ಧೃವ್‌ ಕಪಿಲಾ ಸಹ 2ನೇ ಸುತ್ತಿಗೇರಿದರು.

ಹಾಕಿ: ಕೊರಿಯಾ ವಿರುದ್ಧ ಡ್ರಾ ಸಾಧಿಸಿದ ಭಾರತ

ಕಾಕಮಿಗಹರಾ(ಜಪಾನ್‌): 0-2 ಹಿನ್ನಡೆಯಿಂದ ಪುಟಿದೆದ್ದ ಭಾರತ ಮಹಿಳಾ ತಂಡ ಕಿರಿಯರ ಏಷ್ಯಾಕಪ್‌ ಹಾಕಿ ಟೂರ್ನಿಯ ‘ಎ’ ಗುಂಪಿನ ತನ್ನ 3ನೇ ಪಂದ್ಯದಲ್ಲಿ ಕೊರಿಯಾ ವಿರುದ್ಧ 2-2 ಗೋಲುಗಳ ಡ್ರಾ ಸಾಧಿಸಿದೆ. ಮಂಗಳವಾರ ಪಂದ್ಯದಲ್ಲಿ ಕೊರಿಯಾ 15, 30ನೇ ನಿಮಿಷಗಳಲ್ಲಿ ಗೋಲು ಬಾರಿಸಿತು. ಭಾರತ ಪರ 43ನೇ ನಿಮಿಷದಲ್ಲಿ ದೀಪಿಕಾ ಸೊರೆಂಗ್‌, 54ನೇ ನಿಮಿಷದಲ್ಲಿ ದೀಪಿಕಾ ಗೋಲು ಬಾರಿಸಿ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳಲು ನೆರವಾದರು. ಭಾರತ ಗುಂಪು ಹಂತದ ಅಂತಿಮ ಪಂದ್ಯವನ್ನು ಗುರುವಾರ ಚೈನೀಸ್‌ ತೈಪೆ ವಿರುದ್ಧ ಆಡಲಿದೆ.

ಕಿರಿಯರ ಅಥ್ಲೆಟಿಕ್ಸ್‌: ಚಿನ್ನ ಗೆದ್ದ ಸುನೀಲ್‌

ಯೆಚಿಯಾನ್‌(ಕೊರಿಯಾ): ಭಾರತದ 19 ವರ್ಷದ ಸುನೀಲ್‌ ಕುಮಾರ್‌ ಇಲ್ಲಿ ನಡೆಯುತ್ತಿರುವ ಅಂಡರ್‌-20 ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ಡೆಕಥ್ಲಾನ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಮಂಗಳವಾರ ಭಾರತ ಒಟ್ಟು 4 ಪದಕ ಜಯಿಸಿತು. ಮಹಿಳೆಯರ 3000 ಮೀ. ಓಟದಲ್ಲಿ ಬುಶ್ರಾ ಖಾನ್‌, ಹೈಜಂಪ್‌ನಲ್ಲಿ ಪೂಜಾಗೆ ಬೆಳ್ಳಿ ಪದಕ ಗೆದ್ದರೆ, ಮಹಿಳೆಯರ 4ಗಿ100 ಮೀ. ರಿಲೇ ಓಟದಲ್ಲಿ ಭಾರತ ತಂಡಕ್ಕೆ ಕಂಚು ದೊರೆಯಿತು. ಫೈನಲ್‌ನಲ್ಲಿ ಭಾರತ 5ನೇ ಸ್ಥಾನ ಪಡೆದಿತ್ತು. ಆದರೆ ಚೀನಾ ಹಾಗೂ ಥಾಯ್ಲೆಂಡ್‌ ಅನರ್ಹಗೊಂಡ ಬಳಿಕ ಭಾರತ 3ನೇ ಸ್ಥಾನಕ್ಕೇರಿತು. ಈ ತಂಡದಲ್ಲಿ ಕರ್ನಾಟಕದ ನಯನಾ ಕೂಡ ಇದ್ದರು.