ಇಂದಿನಿಂದ ಫ್ರೆಂಚ್ ಓಪನ್ ಟೆನಿಸ್-12ನೇ ಪ್ರಶಸ್ತಿ ಮೇಲೆ ನಡಾಲ್ ಕಣ್ಣು
ಪ್ರತಿಷ್ಠಿತ ಫ್ರೆಂಚ್ ಓಪನ್ ಟೆನಿಸ್ ಟೂರ್ನಿ ಆರಂಭಗೊಳ್ಳುತ್ತಿದೆ. ರಾಫೆಲ್ ನಡಾಲ್, ನೋವಾಕ್ ಜೋಕೋವಿಚ್, ರೋಜರ್ ಫೆಡರರ್ ಪ್ರಸಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ವಿಶೇಷ ಅಂದರೆ ಚಾಂಪಿಯನ್ ಆದವರಿಗೆ 17.88 ಕೋಟಿ ರೂಪಾಯಿ ಬಹುಮಾನ ಸಿಗಲಿದೆ.
ಪ್ಯಾರಿಸ್(ಮೇ.26): 2019ರ 2ನೇ ಟೆನಿಸ್ ಗ್ರ್ಯಾಂಡ್‌ಸ್ಲಾಂಗೆ ಭಾನುವಾರ ಚಾಲನೆ ಸಿಗಲಿದೆ. 123ನೇ ಆವೃತ್ತಿಯ ಫ್ರೆಂಚ್ ಓಪನ್ ಬಹಳಷ್ಟುನಿರೀಕ್ಷೆಗಳೊಂದಿಗೆ ಆರಂಭಗೊಳ್ಳುತ್ತಿದೆ. 11 ಬಾರಿ ಪ್ರಶಸ್ತಿ ಗೆದ್ದು ದಾಖಲೆ ಬರೆದಿರುವ ಸ್ಪೇನ್‌ನ ರಾಫೆಲ್ ನಡಾಲ್ 12ನೇ ಟ್ರೋಫಿ ಮೇಲೆ ಕಣ್ಣಿಟ್ಟಿದ್ದಾರೆ. ವಿಶ್ವ ನಂ.1 ನೋವಾಕ್ ಜೋಕೋವಿಚ್, 20 ಗ್ರ್ಯಾಂಡ್‌ಸ್ಲಾಂಗಳ ಒಡೆಯ ರೋಜರ್ ಫೆಡರರ್‌ರಿಂದ ಕಠಿಣ ಸ್ಪರ್ಧೆ ಎದುರಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ಫ್ರೆಂಚ್ ಓಪನ್‌ನಿಂದ ಹಿಂದೆ ಸರಿದ ಶರಪೋವಾ
2018ರ ವಿಂಬಲ್ಡನ್, ಯುಎಸ್ ಓಪನ್, 2019ರ ಆಸ್ಪ್ರೇಲಿಯನ್ ಓಪನ್ ಗೆದ್ದಿದ್ದ ಜೋಕೋವಿಚ್, ಫ್ರೆಂಚ್ ಓಪನ್ ಗೆದ್ದು ವೃತ್ತಿಬದುಕಿನಲ್ಲಿ 2ನೇ ಬಾರಿಗೆ ಒಂದೇ ಬಾರಿಗೆ ಎಲ್ಲಾ 4 ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿಗಳನ್ನು ತಮ್ಮ ಬಳಿಯೇ ಇಟ್ಟುಕೊಳ್ಳಲು ಎದುರು ನೋಡುತ್ತಿದ್ದರೆ, ವೃತ್ತಿಬದುಕಿನಲ್ಲಿ ಕೇವಲ ಒಮ್ಮೆ ಮಾತ್ರ ಫ್ರೆಂಚ್ ಓಪನ್ ಗೆದ್ದಿರುವ ಫೆಡರರ್, ಮಣ್ಣಿನಂಕಣದಲ್ಲಿ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಕಾತರರಾಗಿದ್ದಾರೆ. ಡೊಮಿನಿಕ್ ಥೀಮ್, ಅಲೆಕ್ಸಾಂಡರ್ ಜ್ವೆರೆವ್, ಸ್ಟೆಫಾನೊಸ್ ಸಿಟ್ಸಿಪಾಸ್ ಸೇರಿದಂತೆ ಇನ್ನೂ ಕೆಲ ಯುವ ಆಟಗಾರರಿಂದ ಅಚ್ಚರಿಯ ಪ್ರದರ್ಶನ ಮೂಡಿಬರುವ ಸಾಧ್ಯತೆ ಇದೆ.
ಪ್ರಜ್ನೇಶ್ ಮೇಲೆ ನಿರೀಕ್ಷೆ: ಪುರುಷರ ಸಿಂಗಲ್ಸ್‌ನಲ್ಲಿ ಕಣಕ್ಕಿಳಿಯಲಿರುವ ಭಾರತದ ಏಕೈಕ ಆಟಗಾರ ಪ್ರಜ್ನೇಶ್ ಗುಣೇಶ್ವರನ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಕಳೆದೊಂದು ವರ್ಷದಲ್ಲಿ ಆಕರ್ಷಕ ಪ್ರದರ್ಶನ ತೋರಿರುವ ಪ್ರಜ್ನೇಶ್, ಮೊದಲ ಸುತ್ತಿನಲ್ಲಿ ಬೊಲಿವಿಯಾದ ಹುಗೊ ಡೆಲ್ಲಿಯನ್ ವಿರುದ್ಧ ಸೆಣಸಲಿದ್ದಾರೆ.
ಇದನ್ನೂ ಓದಿ: ATP ರ‍್ಯಾಂಕಿಂಗ್'ನಲ್ಲಿ 3ನೇ ಸ್ಥಾನಕ್ಕೇರಿದ ಫೆಡರರ್
ಹಾಲೆಪ್‌ಗೆ ಕಠಿಣ ಸವಾಲು: ಮಹಿಳಾ ಸಿಂಗಲ್ಸ್‌ನ ಹಾಲಿ ಚಾಂಪಿಯನ್, ವಿಶ್ವ ನಂ.1 ಸಿಮೋನಾ ಹಾಲೆಪ್ ಪ್ರಶಸ್ತಿ ಉಳಿಸಿಕೊಳ್ಳಲು ಹೆಚ್ಚಿನ ಪರಿಶ್ರಮ ವಹಿಸಬೇಕಿದೆ. ಇತ್ತೀಚೆಗಷ್ಟೇ ಇಟಲಿ ಓಪನ್ ಗೆದ್ದಿದ್ದ ಚೆಕ್ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ, ದಿಗ್ಗಜ ಆಟಗಾರ್ತಿ ಸೆರೆನಾ ವಿಲಿಯಮ್ಸ್, ಜರ್ಮನಿಯ ಆ್ಯಂಜಿಲಿಕ್ ಕೆರ್ಬರ್, ಪೆಟ್ರಾ ಕ್ವಿಟೋವಾ, ಕಳೆದ ಬಾರಿಯ ರನ್ನರ್ -ಅಪ್ ಅಮೆರಿಕದ ಸ್ಲೋನ್ ಸ್ಟೀಫನ್ಸ್, ಮಾಜಿ ನಂ.1 ಡೆನ್ಮಾರ್ಕ್ನ ಕ್ಯಾರೋಲಿನ್ ವೋಜ್ನಿಯಾಕಿ ಪ್ರಶಸ್ತಿ ರೇಸ್‌ನಲ್ಲಿದ್ದಾರೆ.
ಭಾರತದ ರೋಹನ್ ಬೋಪಣ್ಣ, ಲಿಯಾಂಡರ್ ಪೇಸ್, ದಿವಿಜ್ ಶರಣ್, ಪೂರವ್ ರಾಜಾ ಹಾಗೂ ಜೀವನ್ ನೆಡುಚೆಳಿಯನ್ ವಿವಿಧ ಜತೆಗಾರರೊಂದಿಗೆ ಪುರುಷರ ಡಬಲ್ಸ್‌ನಲ್ಲಿ ಆಡಲಿದ್ದಾರೆ.
ಚಾಂಪಿಯನ್‌ಗೆ 17.88 ಕೋಟಿ ಬಹುಮಾನ
ಫ್ರೆಂಚ್ ಓಪನ್ ಪುರುಷರ ಹಾಗೂ ಮಹಿಳಾ ಸಿಂಗಲ್ಸ್‌ನಲ್ಲಿ ಗೆಲ್ಲುವ ಆಟಗಾರ/ಆಟಗಾರ್ತಿಗೆ ತಲಾ .17.88 ಕೋಟಿ ಬಹುಮಾನ ಮೊತ್ತ ಸಿಗಲಿದೆ. ರನ್ನರ್-ಅಪ್ ಆಗುವ ಟೆನಿಸಿಗರಿಗೆ .9.17 ಕೋಟಿ ಬಹುಮಾನ ಮೊತ್ತ ಸಿಗಲಿದೆ.