ನವದೆಹಲಿ[ಫೆ.12]: ಭಾರತ ಕ್ರಿಕೆಟ್‌ ತಂಡದ ಮಾಜಿ ಬೌಲರ್‌, ದೆಹಲಿ ಕ್ರಿಕೆಟ್‌ ಸಂಸ್ಥೆಯ ಹಿರಿಯರ ಆಯ್ಕೆ ಸಮಿತಿ ಮುಖ್ಯಸ್ಥ ಅಮಿತ್‌ ಭಂಡಾರಿ ಮೇಲೆ ಸೋಮವಾರ ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿದ ಘಟನೆ ಸಂಭವಿಸಿದೆ. ಇಲ್ಲಿನ ಸೇಂಟ್‌ ಸ್ಟೀಫನ್ಸ್‌ ಮೈದಾನದಲ್ಲಿ ಮುಂಬರುವ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಗೆ ದೆಹಲಿ ಹಿರಿಯರ ತಂಡ ಅಭ್ಯಾಸ ಪಂದ್ಯವನ್ನಾಡುತ್ತಿದ್ದ ವೇಳೆಯೇ, ತಂಡಕ್ಕೆ ಆಯ್ಕೆಯಾಗದ ಅಂಡರ್‌-23 ಆಟಗಾರನೊಬ್ಬ ಹಲ್ಲೆ ನಡೆಸಿದ್ದಾನೆ. ಭಾರತೀಯ ಕ್ರಿಕೆಟ್‌ನಲ್ಲಿ ಈ ರೀತಿಯ ಘಟನೆ ನಡೆದಿರುವುದು ಇದೇ ಮೊದಲು ಎನ್ನಲಾಗುತ್ತಿದೆ.

ತಲೆಗೆ ಚೆಂಡು ಬಡಿದು ಮೈದಾನದಲ್ಲೇ ಕುಸಿದು ಬಿದ್ದ ಟೀಂ ಇಂಡಿಯಾ ವೇಗಿ

ಭಂಡಾರಿ ತಲೆ ಹಾಗೂ ಕಿವಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸಂತ ಪರಮಾನಂದ ಆಸ್ಪತ್ರೆಗೆ ಆಯ್ಕೆ ಸಮಿತಿ ಸದಸ್ಯ ಸುಖವಿಂದರ್‌ ಸಿಂಗ್‌ ದಾಖಲಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸುವ ಮೊದಲೇ ಆಟಗಾರ ಹಾಗೂ ಆತನ ಕರೆದುಕೊಂಡು ಬಂದಿದ್ದ ಗೂಂಡಾಗಳು ಕಾಲ್ಕಿತ್ತಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

IPL: ಹೊಸ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ರಾಜಸ್ಥಾನ ರಾಯಲ್ಸ್

ರಾಷ್ಟ್ರೀಯ(ಅಂಡರ್‌-23) ಏಕದಿನ ಪಂದ್ಯಾವಳಿಯ ತಂಡಕ್ಕೆ ತಮ್ಮನ್ನು ಆಯ್ಕೆ ಮಾಡದ ಕಾರಣ ಅಂಡರ್‌-23 ಆಟಗಾರ ಅನುಜ್‌ ದೇಢಾ ಎನ್ನುವ ಆಟಗಾರ ಈ ರೀತಿ ಹಲ್ಲೆ ನಡೆಸಿ ಸೇಡು ತೀರಿಸಿಕೊಂಡಿದ್ದಾನೆ ಎಂದು ಭಂಡಾರಿ ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ. ‘ಅನುಜ್‌ ಎನ್ನುವ ಹುಡುಗ ಕೆಲ ದಿನಗಳಿಂದ ತಂಡಕ್ಕೆ ಆಯ್ಕೆ ಮಾಡುವಂತೆ ಅಮಿತ್‌ರ ಬೆನ್ನು ಬಿದ್ದಿದ್ದ. ಆದರೆ ಆತ ತಂಡಕ್ಕೆ ಆಡುವಷ್ಟು ಸಮರ್ಥನಲ್ಲ, ಸ್ಥಾನ ನೀಡಲು ಸಾಧ್ಯವಿಲ್ಲ ಎಂದು ಅಮಿತ್‌ ಸ್ಪಷ್ಟವಾಗಿ ತಿಳಿಸಿದ್ದರು. ಆತ ಗೂಂಡಾಗಳನ್ನು ಕರೆದುಕೊಂಡು ಬಂದು, ಹಿರಿಯರ ತಂಡದ ಅಭ್ಯಾಸದ ನಡುವೆಯೇ ಹಲ್ಲೆ ನಡೆಸಿದ್ದಾನೆ’ ಎಂದು ಹೆಸರು ಹೇಳಲು ಇಚ್ಛಿಸದ ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ಅಂಡರ್‌-23 ಆಯ್ಕೆ ಪ್ರಕ್ರಿಯೆಗೆ ಪ್ರಕಟಿಸಿದ್ದ 79 ಸದಸ್ಯರ ಸಂಭಾವ್ಯ ಪಟ್ಟಿಯಲ್ಲಿ ಅನುಜ್‌ ಹೆಸರಿತ್ತು. ಆದರೆ ಅಂತಿಮ ಪಟ್ಟಿಯಲ್ಲಿ ಹೆಸರು ಕೈಬಿಟ್ಟಿದ್ದಕ್ಕೆ ಅನುಜ್‌ ಆಯ್ಕೆಗಾರನ ಮೇಲೆ ಹಲ್ಲೆ ನಡೆಸಿ ತಪ್ಪು ಮಾಡಿದ್ದಾನೆ ಎಂದು ದೆಹಲಿ ಕ್ರಿಕೆಟ್‌ ಸಂಸ್ಥೆ ಅಧಿಕಾರಿಗಳು ಹೇಳಿದ್ದಾರೆ.

ಕಠಿಣ ಕ್ರಮಕ್ಕೆ ಆಗ್ರಹ: ‘ದೆಹಲಿ ಪೊಲೀಸ್‌ ಆಯುಕ್ತ ಅಮೂಲ್ಯ ಪಾಠಕ್‌ರೊಂದಿಗೆ ನಾನೇ ಖುದ್ದಾಗಿ ಮಾತನಾಡಿದ್ದೇನೆ. ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ. ಆಟಗಾರ ಯಾರೇ ಆಗಿರಲಿ ಆತ ತಪ್ಪಿಸಿಕೊಳ್ಳಲು ಬಿಡುವುದಿಲ್ಲ’ ಎಂದು ದೆಹಲಿ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷ ರಜತ್‌ ಶರ್ಮಾ ಹೇಳಿದ್ದಾರೆ. ಆಸ್ಪತ್ರೆಯಲ್ಲಿ ಭಂಡಾರಿಯನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ರಜತ್‌, ‘ಅಮಿತ್‌ ಬಹಳ ಹೆದರಿದ್ದಾರೆ. ಇದು ಸಹಜ. ಇನ್ನೂ 24 ಗಂಟೆಗಳ ಕಾಲ ನಿಗಾ ಘಟಕದಲ್ಲಿ ಇರಿಸುವುದಾಗಿ ವೈದ್ಯರು ತಿಳಿಸಿದ್ದಾರೆ. ಅಂಡರ್‌-23 ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡುವಂತೆ ಗೂಂಡಾಗಳು ಬೆದರಿಕೆ ಹಾಕಿದ್ದಾರೆ. ಒಬ್ಬ ವ್ಯಕ್ತಿ ಪಿಸ್ತೂಲ್‌ ತೋರಿಸಿ ಹೆದರಿಸಿದ್ದಾಗಿ ಭಂಡಾರಿ ನನ್ನ ಬಳಿ ಹೇಳಿದರು’ ಎಂದು ಹೇಳಿದ್ದಾರೆ.

ಘಟನೆ ನಡೆದಿದ್ದು ಹೇಗೆ?

ದೆಹಲಿ ಹಿರಿಯರ ತಂಡದ ವ್ಯವಸ್ಥಾಪಕ ಶಂಕರ್‌ ಸೈನಿ ಘಟನೆ ನಡೆದಿದ್ದು ಹೇಗೆ ಎನ್ನುವುದರ ವಿವರ ಬಹಿರಂಗ ಪಡಿಸಿದ್ದಾರೆ. ‘ನಾನು ನನ್ನ ಸಹೋದ್ಯೋಗಿಯೊಂದಿಗೆ ಟೆಂಟ್‌ ಒಳಗೆ ಕೂತು ಊಟ ಮಾಡುತ್ತಿದ್ದೆ. ಭಂಡಾರಿ ಇನ್ನಿತರ ಆಯ್ಕೆಗಾರರು ಹಾಗೂ ಹಿರಿಯರ ತಂಡದ ಕೋಚ್‌ ಮಿಥುನ್‌ ಮನ್ಹಾಸ್‌ ಜತೆ ಮುಷ್ತಾಕ್‌ ಅಲಿ ಟ್ರೋಫಿ ಸಂಭ್ಯಾವ ಆಟಗಾರರ ಅಭ್ಯಾಸ ಪಂದ್ಯವನ್ನು ವೀಕ್ಷಿಸುತ್ತಿದ್ದರು. ಕೆಲ ವ್ಯಕ್ತಿಗಳು ಮೈದಾನಕ್ಕೆ ಆಗಮಿಸಿ ನೇರವಾಗಿ ಭಂಡಾರಿ ಬಳಿ ತೆರಳಿದರು. ಭಂಡಾರಿ ಹಾಗೂ ಅವರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಅವರು ತೆರಳಿದರು. ನಾವು ಏನಾಗುತ್ತಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳುವಷ್ಟರಲ್ಲಿ 15ಕ್ಕೂ ಹೆಚ್ಚು ಮಂದಿ ಹಾಕಿ ಸ್ಟಿಕ್‌, ಕಬ್ಬಿಣದ ರಾಡ್‌, ಸೈಕಲ್‌ ಚೈನ್‌ಗಳಿಂದ ಮೈದಾನಕ್ಕೆ ನುಗ್ಗಿದರು. ಅಭ್ಯಾಸ ನಡೆಸುತ್ತಿದ್ದ ಆಟಗಾರರು, ಸಹಾಯಕ ಸಿಬ್ಬಂದಿ ಭಂಡಾರಿಯನ್ನು ರಕ್ಷಿಸಲು ಮುಂದಾದಾಗ, ನಿಮಗೂ ಇದಕ್ಕೂ ಸಂಬಂಧವಿಲ್ಲ. ಯಾರಾದರೂ ಮುಂದೆ ಬಂದರೆ ಶೂಟ್‌ ಮಾಡುತ್ತೇವೆ ಎಂದು ಪಿಸ್ತೂಲ್‌ ತೋರಿಸಿ ಬೆದರಿಸಿದರು. ಭಂಡಾರಿ ಓಡಲು ಆರಂಭಿಸಿದಾಗ ಅವರನ್ನು ಅಟ್ಟಾಡಿಸಿಕೊಂಡು ಹೋಗಿ ತಲೆ ಹಾಗೂ ಮುಖಕ್ಕೆ ಹಾಕಿ ಸ್ಟಿಕ್‌ ಹಾಗೂ ರಾಡ್‌ಗಳಿಂದ ಹೊಡೆದರು’ ಎಂದು ಸೈನಿ ವಿವರಿಸಿದ್ದಾರೆ.