ಬೆಂಗಳೂರು[ಆ.19]: ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಸೇರಿದಂತೆ ಇತರೆ ಲೀಗ್‌ಗಳ ಫುಟ್ಬಾಲ್‌ ಪಂದ್ಯಗಳನ್ನು ಆಡಲು ಬೆಂಗಳೂರು ಫುಟ್ಬಾಲ್‌ ಕ್ಲಬ್‌ (ಬಿಎಫ್‌ಸಿ) ಕಂಠೀರವ ಕ್ರೀಡಾಂಗಣವನ್ನು ಪಡೆಯುವಲ್ಲಿ ಯಶಸ್ವಿಯಾದಂತಿದೆ. ಅಥ್ಲೆಟಿಕ್ಸ್‌ ಸಂಸ್ಥೆಯ ವಿರೋಧದ ನಡುವೆಯೂ ಕಂಠೀರವ ಕ್ರೀಡಾಂಗಣದಲ್ಲಿ ಫುಟ್ಬಾಲ್‌ ಪಂದ್ಯಗಳ ಆಯೋಜನೆಗೆ ರಾಜ್ಯ ಕ್ರೀಡಾ ಇಲಾಖೆ ಹಸಿರು ನಿಶಾನೆ ತೋರಿದೆ ಎಂದು ಇಲಾಖೆ ಅಧಿಕಾರಿಗಳು ಸುವರ್ಣನ್ಯೂಸ್ ಸಹೋದರ ಸಂಸ್ಥೆಯಾದ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಕಂಠೀರವದಲ್ಲಿ ಫುಟ್ಬಾಲ್‌ಗೆ ಇನ್ನಿಲ್ಲದ ಕಸರತ್ತು!

ಕಳೆದ ಆವೃತ್ತಿಯ ಐಎಸ್‌ಎಲ್‌ ಸಮಯದಿಂದಲೂ ಕಂಠೀರವದಲ್ಲಿ ಫುಟ್ಬಾಲ್‌ ನಡೆಸಲು ಕರ್ನಾಟಕ ರಾಜ್ಯ ಅಥ್ಲೆಟಿಕ್‌ ಸಂಸ್ಥೆ ಹಾಗೂ ಅಲ್ಲಿನ ಅಥ್ಲೆಟಿಕ್ಸ್‌ ಕೋಚ್‌ಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಗುತ್ತಿಗೆ ಮುಕ್ತಾಯಗೊಂಡ ಬಳಿಕ ಕ್ರೀಡಾಂಗಣವನ್ನು ಫುಟ್ಬಾಲ್‌ ಪಂದ್ಯಗಳಿಗೆ ನೀಡಲು ಕ್ರೀಡಾ ಇಲಾಖೆ ಸಹ ನಿರಾಕರಿಸಿತ್ತು. ಆದರೆ ಜೆಎಸ್‌ಡಬ್ಲ್ಯು ಸಂಸ್ಥೆ ಪ್ರಯತ್ನ ನಿಲ್ಲಿಸಿಲ್ಲ.

ಕ್ರೀಡಾ ಇಲಾಖೆ ಒಪ್ಪಿದ್ದು ಹೇಗೆ?

ಜೆಎಸ್‌ಡಬ್ಲ್ಯು ಸಂಸ್ಥೆ ಗುತ್ತಿಗೆ ಅವಧಿ ಮುಕ್ತಾಯಗೊಂಡು 8 ತಿಂಗಳ ಬಳಿಕ ಕಂಠೀರವ ಕ್ರೀಡಾಂಗಣದಿಂದ ಹೊರ ನಡೆದಿತ್ತು. ಆದರೂ ಮುಂದಿನ ಆವೃತ್ತಿಗಳಿಗೆ ಅವಕಾಶ ಸಿಗಲಿದೆ ಎನ್ನುವ ನಂಬಿಕೆಯಿಂದಲೇ ಸಂಸ್ಥೆಯ ಸಿಬ್ಬಂದಿ ಹಲವು ಸಾಮಾಗ್ರಿಗಳನ್ನು ಕ್ರೀಡಾಂಗಣದಲ್ಲೇ ಬಿಟ್ಟು ಹೋಗಿದ್ದರು. ಅಥ್ಲೀಟ್ಸ್‌ ಹಾಗೂ ಕೋಚ್‌ಗಳಿಂದ ಒತ್ತಡ ಹೆಚ್ಚಾದ ಬಳಿಕ, ಕ್ರೀಡಾ ಇಲಾಖೆ ತಟಸ್ಥ ನಿಲುವು ವಹಿಸಿತ್ತು. ಆದರೂ ಜೆಎಸ್‌ಡಬ್ಲ್ಯು ಸಂಸ್ಥೆ ಪ್ರಯತ್ನ ಬಿಡಲಿಲ್ಲ. ರಾಜಕಾರಣಿಗಳಿಂದ ಇಲಾಖೆ ಮೇಲೆ ಒತ್ತಡ ಹೇರಲು ಮುಂದಾದ ಸಂಸ್ಥೆ, ಕ್ರೀಡಾ ಇಲಾಖೆ ಅಧಿಕಾರಿಗಳ ಜತೆ ನಿರಂತರ ಸಂರ್ಪದಲ್ಲಿತ್ತು. ಈ ನಡುವೆ ಅಥ್ಲೆಟಿಕ್ಸ್‌ ಸಂಸ್ಥೆ ಜತೆಗೂ ಮಾತುಕತೆ ನಡೆಸಿ, ಮನವೊಲಿಸಲಾಗಿದೆ ಎಂದು ಕ್ರೀಡಾ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಥ್ಲೆಟಿಕ್ಸ್‌ ಸಂಸ್ಥೆ ತನ್ನ ನಿಲುವು ಸಡಿಲಗೊಳಿಸುತ್ತಿದ್ದಂತೆ ಕ್ರೀಡಾ ಇಲಾಖೆ ಫುಟ್ಬಾಲ್‌ಗೆ ಅವಕಾಶ ನೀಡುವ ಪ್ರಕ್ರಿಯೆ ಆರಂಭಿಸಿದೆ ಎಂದು ತಿಳಿದುಬಂದಿದೆ.

ಇದೇ ವೇಳೆ ರಾಜ್ಯ ಸರ್ಕಾರದ ಯುವಜನ ಹಾಗೂ ಕ್ರೀಡಾ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ರಜನೀಶ್‌ ಗೋಯಲ್‌ರನ್ನು ‘ಕನ್ನಡಪ್ರಭ’ ಸಂಪರ್ಕಿಸಿದಾಗ, ‘ಕ್ರೀಡಾಂಗಣದಲ್ಲಿ ಎಲ್ಲಾ ಕ್ರೀಡೆಗಳನ್ನು ನಡೆಸಲು ಅವಕಾಶವಿದೆ. ಅದರಂತೆ ಫುಟ್ಬಾಲ್‌ ಅನ್ನು ಆಡಿಸಬಹುದು. ಕಂಠೀರವದಲ್ಲಿ ಮತ್ತೆ ಫುಟ್ಬಾಲ್‌ಗೆ ಅವಕಾಶ ನೀಡುವ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ. ಆ ವಿಚಾರ ಕ್ರೀಡಾ ಇಲಾಖೆ ನಿರ್ದೇಶಕರಿಗೆ ಬಿಟ್ಟಿದ್ದು’ ಎಂದರು.

ಜೆಎಸ್‌ಡಬ್ಲ್ಯುಗೆ ಕಂಠೀರವವೇ ಯಾಕೆ?

ಜೆಎಸ್‌ಡಬ್ಲ್ಯು ಕಂಠೀರವ ಕ್ರೀಡಾಂಗಣವೇ ಬೇಕು ಎನ್ನಲು ಬಲವಾದ ಕಾರಣವಿದೆ. ಐಎಸ್‌ಎಲ್‌ ಸೇರಿದಂತೆ ದೊಡ್ಡ ಮಟ್ಟದ ಪಂದ್ಯಗಳನ್ನು ಆಯೋಜಿಸಲು ಕಂಠೀರವ ಕ್ರೀಡಾಂಗಣ ಬಿಟ್ಟು ಬೇರೆ ಆಯ್ಕೆಯಿಲ್ಲ. ಬೆಂಗಳೂರಿಂದ ಬೇರೆಡೆಗೆ ತಂಡವನ್ನು ಸ್ಥಳಾಂತರ ಮಾಡಲು ಸಂಸ್ಥೆ ಸಿದ್ಧವಿಲ್ಲ. ಕಾರಣ, ಬೆಂಗಳೂರಲ್ಲಿ ಅಪಾರ ಸಂಖ್ಯೆಯ ಫುಟ್ಬಾಲ್‌ ಅಭಿಮಾನಿಗಳಿದ್ದಾರೆ. ತಂಡ ಇಲ್ಲಿ ಆಡುವ ಪ್ರತಿ ಪಂದ್ಯಕ್ಕೂ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುತ್ತಾರೆ. ತಂಡಕ್ಕೆ ಕಂಠೀರವ ಅದೃಷ್ಟ ತಾಣವೂ ಹೌದು. ಬಿಎಫ್‌ಸಿ ಕಂಠೀರವವನ್ನು ತನ್ನ ಭದ್ರಕೋಟೆ ಎಂದೇ ಪರಿಗಣಿಸಿದೆ.

ಕಂಠೀರವ ಕ್ರೀಡಾಂಗಣ ಬಿಟ್ಟರೆ ಇಲ್ಲಿನ ಅಶೋಕನಗರದಲ್ಲಿರುವ ಫುಟ್ಬಾಲ್‌ ಕ್ರೀಡಾಂಗಣದಲ್ಲಿ ಟರ್ಫ್ ವ್ಯವಸ್ಥೆ ಇದೆ. ಆದರೆ ಆಸನ ಸಾಮರ್ಥ್ಯವಿಲ್ಲ. ಹೀಗಾಗಿ ಕಂಠೀರವದಲ್ಲೇ ಪಂದ್ಯಗಳನ್ನು ನಡೆಸಲು ಜೆಎಸ್‌ಡಬ್ಲ್ಯು ಸಂಸ್ಥೆ ಶತ ಪ್ರಯತ್ನ ನಡೆಸುತ್ತದೆ.

ಕೋಚ್‌ಗಳ ನಡೆ ಏನು?

ಅಥ್ಲೆಟಿಕ್ಸ್‌ ಸಂಸ್ಥೆ ನಿಲುವು ಬದಲಿಸಲು ಮುಂದಾದರೂ, ಅಥ್ಲೆಟಿಕ್ಸ್‌ ಕೋಚ್‌ಗಳು ಮಾತ್ರ ಫುಟ್ಬಾಲ್‌ಗೆ ಅವಕಾಶ ನೀಡಬಾರದು ಎಂಬ ವಾದ ಮುಂದುವರಿಸಿದ್ದಾರೆ. ಒಂದೊಮ್ಮೆ ಫುಟ್ಬಾಲ್‌ ಪಂದ್ಯಗಳನ್ನು ನಡೆಸಲು ಅನುಮತಿ ನೀಡಿದರೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರುವುದರ ಜತೆಗೆ ಉಗ್ರ ಹೋರಾಟವನ್ನೂ ಮಾಡಲಾಗುವುದು ಎಂದು ಮತ್ತೊಮ್ಮೆ ಎಚ್ಚರಿಸಿದ್ದಾರೆ.

ಕ್ರೀಡಾ ಇಲಾಖೆ ಯಾವ ನಿರ್ಧಾರಕ್ಕೆ ಬಂದಿದೆ ಎನ್ನುವುದು ಗೊತ್ತಿಲ್ಲ. ಆದರೆ ಅಥ್ಲೆಟಿಕ್ಸ್‌ ಸಂಸ್ಥೆ ಜತೆ ಹೊಂದಾಣಿಕೆ ಮಾಡಿಕೊಂಡು ಕಂಠೀರವದಲ್ಲಿ ಮತ್ತೆ ಫುಟ್ಬಾಲ್‌ ಚಟುವಟಿಕೆ ಮುಂದುವರೆದರೆ ಉಗ್ರ ಹೋರಾಟಕ್ಕೆ ಮುಂದಾಗುವುದಂತೂ ಖಚಿತ. - ರಮೇಶ್‌, ಅಥ್ಲೆಟಿಕ್ಸ್‌ ಕೋಚ್‌

ವರದಿ: ಧನಂಜಯ ಎಸ್‌. ಹಕಾರಿ