ಕಂಠೀರವದಲ್ಲಿ ಫುಟ್ಬಾಲ್‌ಗೆ ಇನ್ನಿಲ್ಲದ ಕಸರತ್ತು!
ಬೆಂಗಳೂರಿನ ಶ್ರೀ ಕಂಠೀರವ ಮೈದಾನದಲ್ಲಿ BFC ಪಂದ್ಯಗಳನ್ನು ನಡೆಸಲು JSW ಸಾಕಷ್ಟು ಕಸರತ್ತು ನಡೆಸುತ್ತಿದ್ದು, ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ
ಬೆಂಗಳೂರು(ಆ.05): ಅದೃಷ್ಟದ ತಾಣ ಕಂಠೀರವ ಕ್ರೀಡಾಂಗಣವನ್ನು ಬಿಟ್ಟು ಹೋಗಲು ಸಿದ್ಧವಿಲ್ಲದ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್‌ಸಿ) ತಂಡ, ಕರ್ನಾಟಕ ರಾಜ್ಯ ಕ್ರೀಡಾ ಇಲಾಖೆಯಿಂದ ಏನಾದರೂ ಮಾಡಿ ಕ್ರೀಡಾಂಗಣ ಬಳಕೆಗೆ ಅನುಮತಿ ಪಡೆಯಬೇಕು ಎಂದು ಹೋರಾಡುತ್ತಿದೆ. ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿದೆ. ಇಷ್ಟು ದಿನ ಕಂಠೀರವವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ (ಕೆಎಎ) ಒತ್ತಡಕ್ಕೆ ಮಣಿಯುತ್ತಿದೆ ಎಂದು ಅಥ್ಲೆಟಿಕ್ಸ್ ಕೋಚ್‌ಗಳು ಆರೋಪಿಸಿದ್ದಾರೆ.
BFC ಪ್ರಯತ್ನ ವಿಫಲ; ಕಂಠೀರವದಿಂದ ಫುಟ್ಬಾಲ್ ಔಟ್!
ಯಾವುದೇ ಕಾರಣಕ್ಕೂ ಫುಟ್ಬಾಲ್ ನಡೆಸಲು ಒಪ್ಪುವುದಿಲ್ಲ ಎಂದು ಕೆಎಎ ಸಿಇಒ ಎಲ್ವಿಸ್ ಜೋಸೆಫ್ ಪುನರುಚ್ಚರಿಸಿದ್ದಾರೆ. ಆದರೂ ಕೆಲ ಕೋಚ್‌ಗಳು ತೆರೆ ಮರೆಯಲ್ಲಿ ಜೆಎಸ್‌ಡಬ್ಲ್ಯು(ಜಿಂದಾಲ್ ಸೌತ್ ವೆಸ್ಟ್)ಗೆ ಕ್ರೀಡಾಂಗಣ ಬಿಟ್ಟುಕೊಡಲು ವ್ಯವಸ್ಥೆ ನಡೆಯುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು ಚಾಂಪಿಯನ್ಸ್ ತಂಡಗಳಿಗೆ ಕ್ರೀಡಾಂಗಣ ಸಮಸ್ಯೆ
‘ಅಥ್ಲೆಟಿಕ್ಸ್ ಸಂಸ್ಥೆ ಏನಾದರೂ ಕ್ರೀಡಾಂಗಣವನ್ನು ಜೆಎಸ್‌ಡಬ್ಲ್ಯುಗೆ ಬಿಟ್ಟುಕೊಟ್ಟು ಅಥ್ಲೀಟ್‌ಗಳಿಗೆ ತೊಂದರೆಯಾಗುವಂತೆ ಮಾಡಿದರೆ, ಉಗ್ರ ಹೋರಾಟ ನಡೆಸುತ್ತೇವೆ. ಕೋಚ್‌ಗಳೆಲ್ಲರೂ ಒಗ್ಗಟ್ಟಿನಿಂದಿದ್ದೇವೆ’ ಎಂದು ಹೆಸರು ಹೇಳಲು ಇಚ್ಛಿಸದ ಕೋಚ್ ಒಬ್ಬರು ಸುವರ್ಣನ್ಯೂಸ್.ಕಾಂ ಸಹೋದರ ಸಂಸ್ಥೆ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಕಂಠೀರವಕ್ಕೆ ಜೆಎಸ್‌ಡಬ್ಲ್ಯು ಭೇಟಿ, ಪರಿಶೀಲನೆ!
JSW(ಜಿಂದಾಲ್ ಸೌತ್ ವೆಸ್ಟ್)ಸಂಸ್ಥೆ ಕ್ರೀಡಾ ಇಲಾಖೆ ಹಾಗೂ ಕೆಎಎ ಜತೆ ನಿರಂತರ ಸಂಪರ್ಕದಲಿದೆ ಎನ್ನಲಾಗಿದ್ದು, ಕೆಲ ದಿನಗಳ ಹಿಂದಷ್ಟೇ ಸಂಸ್ಥೆಯ ಕೆಲ ಅಧಿಕಾರಿಗಳು ಕಂಠೀರವ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ‘ಮೈದಾನದ ಅಳತೆ, ಆಸನ ವ್ಯವಸ್ಥೆ, ನೂತನ ಮಲ್ಟಿಜಿಮ್‌ನ ಫೋಟೋಗಳನ್ನು ಅಧಿಕಾರಿಗಳು ಕ್ಲಿಕ್ಕಿಸಿಕೊಂಡು ಹೋದರು’ ಎಂದು ಕ್ರೀಡಾಂಗಣದ ಸಿಬ್ಬಂದಿ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು. ಗೊಂದಲ, ವಿರೋಧದ ನಡುವೆಯೂ ಜೆಎಸ್‌ಡಬ್ಲ್ಯು ಸಂಸ್ಥೆ 6ನೇ ಆವೃತ್ತಿಯ ಐಎಸ್‌ಎಲ್ ಪಂದ್ಯಗಳನ್ನು ಕಂಠೀರವದಲ್ಲಿ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ.