1956ರ ಮೆಲ್ಬೋರ್ನ್ ಒಲಿಂಪಿಕ್ಸ್ ಕೂಟದಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಿದ್ದ ಭಾರತ ಮತ್ತು ಪಾಕಿಸ್ತಾನ, ಪರಸ್ಪರ 166 ಪಂದ್ಯಗಳನ್ನು ಆಡಿವೆ. ಭಾನುವಾರದ ಪಂದ್ಯವನ್ನೂ ಒಳಗೊಂಡಂತೆ ಭಾರತ 54ರಲ್ಲಿ ಗೆದ್ದಿದ್ದರೆ, ಪಾಕಿಸ್ತಾನ 82ರಲ್ಲಿ ಜಯದ ಸವಿಯುಂಡಿದೆ. ಮಿಕ್ಕ 30 ಪಂದ್ಯಗಳು ಡ್ರಾನಲ್ಲಿ ಕೊನೆಕಂಡಿವೆ.

ಕುಂಟಾನ್(ಅ.24): ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳೆನಿಸಿರುವ ಭಾರತ ಮತ್ತು ಪಾಕಿಸ್ತಾನ ಹಾಕಿ ತಂಡಗಳ ಆರು ದಶಕಗಳ ವೈಭವೋಪೇತ ಬಹುಪಾಲು ದಾಖಲೆಗಳನ್ನು ಕಸದಬುಟ್ಟಿಗೆ ಹಾಕಲು ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ (ಎಚ್'ಐಎಚ್) ನಿರ್ಧರಿಸಿದೆ.

1956ರ ಮೆಲ್ಬೋರ್ನ್ ಒಲಿಂಪಿಕ್ಸ್ ಕೂಟದಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಿದ್ದ ಭಾರತ ಮತ್ತು ಪಾಕಿಸ್ತಾನ, ಪರಸ್ಪರ 166 ಪಂದ್ಯಗಳನ್ನು ಆಡಿವೆ. ಭಾನುವಾರದ ಪಂದ್ಯವನ್ನೂ ಒಳಗೊಂಡಂತೆ ಭಾರತ 54ರಲ್ಲಿ ಗೆದ್ದಿದ್ದರೆ, ಪಾಕಿಸ್ತಾನ 82ರಲ್ಲಿ ಜಯದ ಸವಿಯುಂಡಿದೆ. ಮಿಕ್ಕ 30 ಪಂದ್ಯಗಳು ಡ್ರಾನಲ್ಲಿ ಕೊನೆಕಂಡಿವೆ. ಆದರೆ, ಎಚ್'ಐಎಚ್ ಇಂಡೋ-ಪಾಕ್‌ನ ಬಹುಪಾಲು ಇತಿಹಾಸವನ್ನು ಅಳಿಸಲು ನಿರ್ಧರಿಸಿದೆ.

ಎಚ್'ಐಎಚ್ ನ ‘ಟಿಎಂಎಸ್ ಡಾಟಾ’ದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣದ 46 ಪಂದ್ಯಗಳ ದಾಖಲೆಯನ್ನಷ್ಟೇ ಉಳಿಸಲಾಗಿದೆ ಎನ್ನಲಾಗಿದೆ. ಅದರಂತೆ ಭಾರತ ಮತ್ತು ಪಾಕಿಸ್ತಾನ ಇಲ್ಲೀವರೆಗೆ ಕೇವಲ 47 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಭಾರತ 19ರಲ್ಲಿ ಗೆದ್ದಿದ್ದರೆ, ಪಾಕಿಸ್ತಾನ 25 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆಯಂತೆ. ಅಂತೆಯೇ ಮೂರು ಪಂದ್ಯಗಳು ಡ್ರಾ ಕಂಡಿವೆ ಎನ್ನಲಾಗಿದೆ. ಅಂದಹಾಗೆ ಭಾರತ-ಪಾಕ್ ಪಂದ್ಯ ಎಂದರೆ, ದೊಡ್ಡ ಮಟ್ಟದ ವೀಕ್ಷಕರು, ಪ್ರಸಾರದ ಹಕ್ಕಿಗಾಗಿ ಟೆಲಿವಿಷನ್‌ಗಳು ಮಿಲಿಯನ್ ಡಾಲರ್‌ಗಟ್ಟಲೇ ಹಣ ಸುರಿಯುತ್ತವೆ. ಹೀಗಿರುವಾಗ ಎಚ್'ಐಎಚ್ ತಳೆದ ಈ ನಿರ್ಣಯ ವಿಚಿತ್ರವೆನಿಸಿದೆ.

ಶ್ರೀಜೇಶ್ ಪಡೆಗೆ ಫೈನಲ್ ಮೇಲೆ ಕಣ್ಣು

ಅಂದಹಾಗೆ ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕಿಸ್ತಾನ ಎದುರು, 3-2 ಗೋಲುಗಳ ಮನೋಜ್ಞ ಗೆಲುವಿನ ಬಳಿಕ ಇನ್ನಷ್ಟು ಆತ್ಮವಿಶ್ವಾಸ ಪಡೆದಿರುವ ಭಾರತ ತಂಡ, ಸ್ಥಳೀಯ ಮಲೇಷ್ಯಾ ಮತ್ತು ಚೀನಾ ವಿರುದ್ಧ ಜಯದ ಗುರಿ ಹೊತ್ತಿದೆಯಲ್ಲದೆ, ಅದರೊಂದಿಗೆ ಫೈನಲ್ ಹಾದಿಯನ್ನು ಸುಗಮ ಮಾಡಿಕೊಳ್ಳಲು ಮುಂದಾಗಿದೆ. ಮಂಗಳವಾರ ಚೀನಾ ಎದುರು ಸೆಣಸಲಿರುವ ಭಾರತ, ಬುಧವಾರ ಆತಿಥೇಯ ಮಲೇಷ್ಯಾವನ್ನು ಎದುರಿಸಲಿದೆ. ಭಾರತ ತಂಡ ಟೂರ್ನಿಯ ಮೊದಲ ಪಂದ್ಯದಲ್ಲಿ 10-2 ಗೋಲುಗಳಿಂದ ಜಪಾನ್ ವಿರುದ್ಧ ಮತ್ತು 3-2ರಿಂದ ಪಾಕಿಸ್ತಾನ ಎದುರು ಗೆಲುವು ಪಡೆದಿದೆ. ಈ ಜಯದೊಂದಿಗೆ ಭಾರತ ತಂಡ ರೌಂಡ್ ರಾಬಿನ್ ಹಂತದಲ್ಲಿ ಮೊದಲ ಸ್ಥಾನ ಪಡೆದಿದೆ. ಇನ್ನು ಎರಡನೇ ಪಂದ್ಯದಲ್ಲಿ ದಕ್ಷಿಣ ಕೊರಿಯಾ ಎದುರು 1-1 ಗೋಲುಗಳಿಂದ ಡ್ರಾ ಸಾಸಿತ್ತು. ಹೀಗಾಗಿ ಮಲೇಷ್ಯಾ ತಂಡ ಭಾರತ 2 ಅಂಕ ಹಿನ್ನಡೆಯಲ್ಲಿದೆ.