ಮೊದಲ ಪಂದ್ಯದಲ್ಲಿ ಮೆಕ್ಸಿಕೋ ವಿರುದ್ಧ ಸೋತು ಆಘಾತಕೊಳಗಾಗಿದ್ದ ಜರ್ಮನಿ, ಕಳೆದ ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟು ಹೊರಬೀಳುವ ಆತಂಕ ಎದುರಿಸಿತ್ತು. ಆದರೆ ಅಂತಿಮ ಕ್ಷಣದಲ್ಲಿ ಟೋನಿ ಕ್ರೂಸ್‌ ಬಾರಿಸಿದ ಗೋಲು ತಂಡದ ನಾಕೌಟ್‌ ಆಸೆ ಜೀವಂತವಾಗಿ ಉಳಿಯುವಂತೆ ಮಾಡಿತ್ತು.

ಕಜಾನ್‌[ಜೂ.27]: ಹಾಲಿ ವಿಶ್ವ ಚಾಂಪಿಯನ್‌ ಜರ್ಮನಿ ಇಂದು ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ದಕ್ಷಿಣ ಕೊರಿಯಾವನ್ನು ಎದುರಿಸಲಿದೆ. ‘ಎಫ್‌’ ಗುಂಪಿನ ನಾಕೌಟ್‌ ಲೆಕ್ಕಾಚಾರಕ್ಕೆ ತೆರೆ ಬೀಳುವ ಸಮಯ ಬಂದಿದ್ದು, ಎಲ್ಲಾ ನಾಲ್ಕೂ ತಂಡಗಳಿಗೆ ಅವಕಾಶವಿದೆ. 

ಮೊದಲ ಪಂದ್ಯದಲ್ಲಿ ಮೆಕ್ಸಿಕೋ ವಿರುದ್ಧ ಸೋತು ಆಘಾತಕೊಳಗಾಗಿದ್ದ ಜರ್ಮನಿ, ಕಳೆದ ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟು ಹೊರಬೀಳುವ ಆತಂಕ ಎದುರಿಸಿತ್ತು. ಆದರೆ ಅಂತಿಮ ಕ್ಷಣದಲ್ಲಿ ಟೋನಿ ಕ್ರೂಸ್‌ ಬಾರಿಸಿದ ಗೋಲು ತಂಡದ ನಾಕೌಟ್‌ ಆಸೆ ಜೀವಂತವಾಗಿ ಉಳಿಯುವಂತೆ ಮಾಡಿತ್ತು. 2 ಪಂದ್ಯಗಳಿಂದ 3 ಅಂಕ ಗಳಿಸಿರುವ ಜರ್ಮನಿ ಗುಂಪಿನಲ್ಲಿ 2ನೇ ಸ್ಥಾನ ಪಡೆದಿದೆ. ಮೆಕ್ಸಿಕೋ 6 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, 3 ಅಂಕಗಳೊಂದಿಗೆ ಸ್ವೀಡನ್‌ 3ನೇ ಸ್ಥಾನದಲ್ಲಿದೆ. ಜರ್ಮನಿ ಈ ಪಂದ್ಯವನ್ನು ಕನಿಷ್ಠ 2 ಗೋಲುಗಳ ಅಂತರದಲ್ಲಿ ಗೆದ್ದು, ಮೆಕ್ಸಿಕೋ ಸೋಲುಂಡರೆ ಅಗ್ರಸ್ಥಾನಕ್ಕೇರುವ ಅವಕಾಶವಿದೆ.

ಜರ್ಮನಿ ನಾಕೌಟ್‌ ಹಾದಿ ಹೇಗೆ?
ದ.ಕೊರಿಯಾ ವಿರುದ್ಧ ಜರ್ಮನಿ 2 ಗೋಲುಗಳ ವ್ಯತ್ಯಾಸದಲ್ಲಿ ಗೆದ್ದರೆ ನಾಕೌಟ್‌ಗೆ ಪ್ರವೇಶ ಪಡೆಯಲಿದೆ. ಒಂದೊಮ್ಮೆ ಜರ್ಮನಿ ವಿರುದ್ಧ ಕೊರಿಯಾ ಗೆದ್ದು, ಮೆಕ್ಸಿಕೋ ವಿರುದ್ಧ ಸ್ವೀಡನ್‌ ಸೋತರೆ ಕೊರಿಯಾಗೆ ನಾಕೌಟ್‌ಗೇರುವ ಅವಕಾಶವಿದೆ. ಆದರೆ ಸ್ವೀಡನ್‌ ಹಾಗೂ ಮೆಕ್ಸಿಕೋಗಿಂತ ಉತ್ತಮ ಗೋಲು ವ್ಯತ್ಯಾಸ ಹೊಂದಿರಬೇಕು.

ಜರ್ಮನಿ ಹಾಗೂ ಸ್ವೀಡನ್‌ ತಮ್ಮ ಪಂದ್ಯಗಳನ್ನು ಡ್ರಾ ಮಾಡಿಕೊಂಡರೆ ಯಾವ ತಂಡ ಹೆಚ್ಚು ಗೋಲು ಬಾರಿಸಿರುತ್ತದೆಯೋ ಆ ತಂಡ ಅಂತಿಮ 16ರ ಸುತ್ತಿಗೇರಲಿದೆ. ಒಂದೊಮ್ಮೆ ಎರಡೂ ತಂಡಗಳು ಒಂದೇ ರೀತಿಯ ಅಂಕ ಗಳಿಸಿದರೆ, ಸ್ವೀಡನ್‌ ವಿರುದ್ಧ ಹಿಂದಿನ ಪಂದ್ಯದಲ್ಲಿ ಗೆದ್ದಿದ್ದರಿಂದ ಮುಂದಿನ ಸುತ್ತಿಗೇರುವ ಅವಕಾಶ ಜರ್ಮನಿ ಪಾಲಾಗಲಿದೆ.