ಫಿಫಾ ವಿಶ್ವಕಪ್‌ನಲ್ಲಿ ಕೇಪ್ ವರ್ಡೆ ವಿರುದ್ಧ ಕಷ್ಟಪಟ್ಟು ಗೆದ್ದ ನಂತರ, ಲಿಯೋನೆಲ್ ಮೆಸ್ಸಿ ತಂಡದ ನ್ಯೂನತೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅತಿಯಾದ ಆತ್ಮವಿಶ್ವಾಸ ಮತ್ತು ತಪ್ಪುಗಳಿಂದ ಹಿನ್ನಡೆಯಾಯಿತು, ಪ್ರಶಸ್ತಿ ಉಳಿಸಿಕೊಳ್ಳಲು ಆಟವನ್ನು ಸುಧಾರಿಸಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮಯಾಮಿ: ಫಿಫಾ ವಿಶ್ವಕಪ್(fifa world cup 2026)ನ ಹಾಲಿ ಚಾಂಪಿಯನ್ ಅರ್ಜೆಂಟೀನಾ ಸದ್ಯ ತೀವ್ರ ಸಂಕಷದಲ್ಲಿದೆ. ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೇಪ್ ವರ್ಡೆ(the Cape Verde)ಯಂತಹ ಚಿಕ್ಕ ತಂಡದ ವಿರುದ್ಧ ಗೆಲ್ಲಲು ಅರ್ಜೆಂಟೀನಾಗೆ ಹೆಚ್ಚುವರಿ ಸಮಯ ಬೇಕಾಯ್ತು. ಇದು ತಂಡದ ಸದ್ಯದ ಪರಿಸ್ಥಿತಿಗೆ ಕನ್ನಡಿ ಹಿಡಿದಿದೆ. ಕೊನೆಗೆ ಅರ್ಜೆಂಟೀನಾ 3-2 ಅಂತರದಲ್ಲಿ ಗೆದ್ದು ನಿಟ್ಟುಸಿರು ಬಿಟ್ಟಿತು. ಕೇಪ್ ವರ್ಡೆಯ ಬಲಿಷ್ಠ ಡಿಫೆನ್ಸ್ ಮುರಿಯಲು ಅರ್ಜೆಂಟೀನಾದ ಆಟಗಾರರು ಸಿಕ್ಕಾಪಟ್ಟೆ ಕಷ್ಟಪಟ್ಟರು. ಅದರಲ್ಲೂ, 40 ವರ್ಷದ ಗೋಲ್‌ಕೀಪರ್ Vozinha ಅವರ ಅದ್ಭುತ ಪ್ರದರ್ಶನ ಅರ್ಜೆಂಟೀನಾಗೆ ದೊಡ್ಡ ತಲೆನೋವಾಗಿತ್ತು.
ಇದೀಗ ಅರ್ಜೆಂಟೀನಾ ತಂಡದ ಕಳಪೆ ಪ್ರದರ್ಶನದ ಬಗ್ಗೆ ಮೆಸ್ಸಿ ಮಾತನಾಡಿದ್ದು, ಈ ಮ್ಯಾಚ್ ಗೆಲ್ಲೋಕೆ ತುಂಬಾ ಹೆಣಗಾಡಬೇಕಾಯ್ತು. ಈ ಪಂದ್ಯ ತುಂಬಾ ಕಠಿಣವಾಗಿರುತ್ತೆ ಅಂತಾ ನಮಗೆ ಮೊದಲೇ ಗೊತ್ತಿತ್ತು. ಸ್ಪೇನ್ ಮತ್ತು ಉರುಗ್ವೆಯಂಥ ಬಲಿಷ್ಠ ತಂಡಗಳ ವಿರುದ್ಧವೂ ಸೋಲದ ತಂಡ ಕೇಪ್ ವರ್ಡೆ. ಇಂಥ ತಂಡದ ವಿರುದ್ಧ ಗೆಲ್ಲುವುದು ಸುಲಭದ ಮಾತಾಗಿರಲಿಲ್ಲ' ಎಂದು ಹೇಳಿದ್ದಾರೆ.
ಮೊದಲ ಗೋಲು ಗಳಿಸಿದ ನಂತರ ತಂಡಕ್ಕೆ ಅತಿಯಾದ ಆತ್ಮವಿಶ್ವಾಸ ಬಂತು. ಬಾಲ್ ಪೊಸೆಷನ್‌ನಲ್ಲಿ ತಪ್ಪುಗಳನ್ನು ಮಾಡಿದ್ದೇ ಸಮಬಲ ಸಾಧಿಸಲು ಕಾರಣವಾಯ್ತು ಅಂತ ಮೆಸ್ಸಿ ಒಪ್ಪಿಕೊಂಡಿದ್ದಾರೆ. ನಾಕೌಟ್ ಹಂತದಲ್ಲಿ ಯಾರನ್ನೂ ಕಮ್ಮಿ ಅಂದಾಜು ಮಾಡಬಾರದು, ಇಲ್ಲಿ ಯಾರೂ ಸುಲಭವಾಗಿ ಏನನ್ನೂ ಬಿಟ್ಟುಕೊಡುವುದಿಲ್ಲ ಅಂತಾನೂ ಅವರು ಎಚ್ಚರಿಸಿದ್ದಾರೆ.
ಪಾಸಿಟಿವ್ ಅಂಶಗಳು
ಏನೇ ಆದರೂ, ಇಂಥ ತೀವ್ರ ಬಿಸಿಲಿನಲ್ಲಿ 120 ನಿಮಿಷಗಳ ಕಾಲ ಮೈದಾನದಲ್ಲಿ ಹೋರಾಡಿದ ತಂಡದ ಮನೋಬಲವನ್ನು ಮೆಸ್ಸಿ ಹೊಗಳಿದ್ದಾರೆ. ಅತ್ಯುತ್ತಮ ಪ್ರದರ್ಶನ ನೀಡದಿದ್ದರೂ ವರ್ಡೆ ವಿರುದ್ಧ ಗೆಲ್ಲಲು ಸಾಧ್ಯವಾಗಿದ್ದು ದೊಡ್ಡ ವಿಷಯ ಎಂದು ಅವರು ಹೇಳಿದ್ದಾರೆ. ಆದರೂ, ಪ್ರಶಸ್ತಿ ಉಳಿಸಿಕೊಳ್ಳಬೇಕಾದರೆ ನಮ್ಮ ಆಟದ ಸಾಮರ್ಥ್ಯ ಇನ್ನಷ್ಟು ಸುಧಾರಿಸಬೇಕು ಎಂಬ ಅರಿವು ಅರ್ಜೆಂಟೀನಾ ತಂಡಕ್ಕಿದೆ ಎಂದಿದ್ದಾರೆ.
ಈ ಗೆಲುವಿನ ನಂತರ, ತಂಡವು ಈಗ ವಿಶ್ರಾಂತಿ ಮತ್ತು ಮುಂದಿನ ಪಂದ್ಯದ ತಯಾರಿ ಕಡೆಗೆ ಗಮನ ಹರಿಸುತ್ತಿದೆ. ಈಜಿಪ್ಟ್ ವಿರುದ್ಧದ ಮುಂದಿನ ಪಂದ್ಯ ಅರ್ಜೆಂಟೀನಾಗೆ ದೊಡ್ಡ ಸವಾಲಾಗಿರಲಿದೆ. ಸ್ಕಲೋನಿ ಮತ್ತು ಅವರ ತಂಡವು ತಮ್ಮ ನ್ಯೂನತೆಗಳನ್ನು ಸರಿಪಡಿಸಿಕೊಂಡು ಬಲಿಷ್ಠ ತಂಡದ ವಿರುದ್ಧ ಗೆಲ್ಲುತ್ತಾರಾ ಎಂಬುದನ್ನು ಕಾದು ನೋಡಬೇಕು.

