ಕೆಐಐಟಿ ಮತ್ತು ಕೆಐಎಸ್‌ಎಸ್‌ನ ಸಂಸ್ಥಾಪಕ ಡಾ. ಅಚ್ಯುತ ಸಮಂತ ಅವರು ಭಾರತೀಯ ವಾಲಿಬಾಲ್ ಫೆಡರೇಶನ್‌ನ (ವಿಎಫ್‌ಐ) ಮುಖ್ಯ ಪೋಷಕರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ವಾರಣಸಿಯಲ್ಲಿ ನಡೆದ ವಿಎಫ್‌ಐನ ವಾರ್ಷಿಕ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಭುವನೇಶ್ವರ: ಕೆಐಐಟಿ ಮತ್ತು ಕೆಐಎಸ್‌ಎಸ್‌ನ ಸಂಸ್ಥಾಪಕರಾದ ಡಾ. ಅಚ್ಯುತ ಸಮಂತ ಅವರು, ಭಾರತೀಯ ವಾಲಿಬಾಲ್ ಫೆಡರೇಶನ್‌ನ (ವಿಎಫ್‌ಐ) ಮುಖ್ಯ ಪೋಷಕರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ವಾರಣಸಿಯಲ್ಲಿ 72ನೇ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಶಿಪ್ ನಡೆಯುತ್ತಿದ್ದು, ಇದೇ ಸಂದರ್ಭದಲ್ಲಿ ಅಚ್ಯುತ ಸಮಂತ ಅವರ ಆಯ್ಕೆ ನಡೆದಿದೆ. ವಾರಣಸಿಯಲ್ಲಿ ನಡೆದ ವಿಎಫ್‌ಐನ ವಾರ್ಷಿಕ ಮಂಡಳಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ದೇಶದ ಎಲ್ಲಾ ರಾಜ್ಯ ವಾಲಿಬಾಲ್ ಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.

ಡಾ. ಸಮಂತ ಅವರು ಸದ್ಯ ಒಡಿಶಾ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷರೂ ಆಗಿದ್ದಾರೆ. ಪೂರ್ವ ನಿಗದಿತ ಕಾರ್ಯಕ್ರಮಗಳಿಂದಾಗಿ ವಾರಾಣಸಿಯಲ್ಲಿ ನಡೆದ ಸಭೆಗೆ ಸಮಂತ ಅವರು ಹಾಜರಾಗಿರಲಿಲ್ಲ. ಸಮಂತ ಅವರನ್ನು ವಿಎಫ್‌ಐ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ದೂರವಾಣಿ ಮೂಲಕ ಸಂಪರ್ಕಿಸಿ ಒಪ್ಪಿಗೆ ಪಡೆದರು.

ಕ್ರೀಡಾ ಕ್ಷೇತ್ರಕ್ಕೆ ವಿಶೇಷವಾಗಿ ವಾಲಿಬಾಲ್‌ಗೆ ಸಮಂತ ಅವರು ಬಹಳ ಕಾಲದಿಂದ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಇದನ್ನು ಪರಿಗಣಿಸಿ ಫೆಡರೇಶನ್ ಅವರ ಹೆಸರನ್ನು ಆಯ್ಕೆ ಮಾಡಿತು. 4 ವರ್ಷಗಳ ಅವಧಿಗೆ ಮುಖ್ಯ ಪೋಷಕ ಹುದ್ದೆಯನ್ನು ಅಲಂಕರಿಸಲಿದ್ದಾರೆ. ತಮ್ಮನ್ನು ಈ ಹುದ್ದೆಗೆ ಆಯ್ಕೆ ಮಾಡಿದ್ದಕ್ಕೆ ಡಾ.ಸಮಂತ ಅವರು ವಿಎಫ್‌ಐಗೆ ಧನ್ಯವಾದ ಹೇಳಿದ್ದಾರೆ.

ಕೆಐಐಟಿಯಲ್ಲಿ ಯುವ ಕೂಟ: ಕೆಐಐಟಿಯಲ್ಲಿ ರಾಷ್ಟ್ರೀಯ ಯುವ ವಾಲಿಬಾಲ್ ಚಾಂಪಿಯನ್‌ಶಿಪ್ ಅನ್ನು ಆಯೋಜಿಸಲು ಜನರಲ್ ಕೌನ್ಸಿಲ್ ಇದೇ ವೇಳೆ ಅನುಮೋದನೆ ನೀಡಿತು.

ಡಾ. ಸಮಂತಾಗೆ ಪ್ರತಿಷ್ಠಿತ ಗ್ರ್ಯಾಂಡ್ ಕ್ರಾಸ್ ಪ್ರಶಸ್ತಿ

ಡಾ. ಸಮಂತಾ ಅವರಿಗೆ ಪ್ರತಿಷ್ಠಿತ ಗ್ರ್ಯಾಂಡ್ ಕ್ರಾಸ್ ಪ್ರಶಸ್ತಿಯನ್ನು ನೀಡಿದ್ದಕ್ಕಾಗಿ ಮತ್ತು ಅವರನ್ನು ಎಫ್‌ಐವಿಬಿ ವಾಲಿಬಾಲ್ ಫೌಂಡೇಶನ್ ಕೌನ್ಸಿಲ್‌ನ ಸದಸ್ಯರನ್ನಾಗಿ ನೇಮಿಸಿದ್ದಕ್ಕಾಗಿ ಅಂತರರಾಷ್ಟ್ರೀಯ ವಾಲಿಬಾಲ್ ಫೆಡರೇಶನ್ (ಎಫ್‌ಐವಿಬಿ) ಗೆ ವಿಎಫ್‌ಐ ಇದೇ ವೇಳೆ ಕೃತಜ್ಞತೆ ತಿಳಿಸಿತು.

ಬದ್ಧತೆಯಿಂದ ಕೆಲಸ ಮಾಡುವೆ

ವಾಲಿಬಾಲ್‌ ನನ್ನ ಹೃದಯಕ್ಕೆ ಹತ್ತಿರವಾಗಿದೆ. ನೀವೆಲ್ಲ ನನ್ನ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ನಂಬಿಕೆಗೆ ಚಿರಋಣಿ. ತಳಮಟ್ಟದಿಂದ ವಾಲಿಬಾಲ್‌ ಅನ್ನು ಹೆಚ್ಚು ಪ್ರಚುರಪಡಿಸಲು ನಾನು ಸದಾ ಪ್ರಯತ್ನಿಸಿದ್ದೇನೆ. ವಿಎಫ್‌ಐ ನೀಡುತ್ತಾ ಬಂದಿರುವ ಪ್ರೋತ್ಸಾಹವನ್ನು ಮರೆಯಲಾಗದು. ಒಡಿಶಾ ಮತ್ತು ಭಾರತದಾದ್ಯಂತ ವಾಲಿಬಾಲ್‌ನ ಪ್ರಚಾರ ಮತ್ತು ಬೆಳವಣಿಗೆಗಾಗಿ ಇನ್ನಷ್ಟು ಬದ್ಧತೆಯಿಂದ ಕೆಲಸ ಮಾಡುತ್ತೇನೆ.

ಡಾ. ಅಚ್ಯುತ ಸಮಂತ, ವಿಎಫ್‌ಐ ಮುಖ್ಯ ಪೋಷಕ