ವಿಜಯ್ ಹಜಾರೆ ಟೂರ್ನಿಯಲ್ಲಿ ಸತತ 5 ಗೆಲುವು ಸಾಧಿಸಿ ಅಜೇಯವಾಗಿರುವ ಕರ್ನಾಟಕ, ನಾಕೌಟ್‌ ಪ್ರವೇಶಿಸಲು ರಾಜಸ್ಥಾನ ವಿರುದ್ಧ ಸೆಣಸಲಿದೆ. ಮತ್ತೊಂದೆಡೆ, ವಿರಾಟ್ ಕೊಹ್ಲಿ ಮುಂದಿನ ಪಂದ್ಯದಿಂದ ಹೊರಗುಳಿದರೆ, ಗಾಯದಿಂದ ಚೇತರಿಸಿಕೊಂಡಿರುವ ಶ್ರೇಯಸ್ ಅಯ್ಯರ್ ಮುಂಬೈ ತಂಡದ ನಾಯಕರಾಗಿ ಕಣಕ್ಕಿಳಿಯಲಿದ್ದಾರೆ.

ಅಹಮದಾಬಾದ್‌: ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಸತತ 5 ಗೆಲುವು ಸಾಧಿಸಿರುವ ಕರ್ನಾಟಕ, ಮಂಗಳವಾರ ರಾಜಸ್ಥಾನ ವಿರುದ್ಧ ಸೆಣಸಲಿದೆ. ಈ ಪಂದ್ಯದಲ್ಲೂ ಜಯಿಸಿ ನಾಕೌಟ್‌ ಹಂತಕ್ಕೆ ಅಧಿಕೃತವಾಗಿ ಪ್ರವೇಶಿಸುವ ವಿಶ್ವಾಸದಲ್ಲಿದೆ.

ಕರ್ನಾಟಕದ ಅಜೇಯ ಓಟಕ್ಕೆ ಪ್ರಮುಖವಾಗಿ ಬ್ಯಾಟರ್‌ಗಳೇ ಹೆಚ್ಚು ಕೊಡುಗೆ ನೀಡಿದ್ದಾರೆ. ಅದರಲ್ಲೂ ದೇವದತ್‌ ಪಡಿಕ್ಕಲ್‌ 5 ಪಂದ್ಯಗಳಲ್ಲಿ 4 ಶತಕ ಸಿಡಿಸಿ ಉತ್ಕೃಷ್ಟ ಲಯದಲ್ಲಿದ್ದಾರೆ. ಮಯಾಂಕ್‌ ಅಗರ್‌ವಾಲ್, ಅಭಿನವ್‌ ಮನೋಹರ್, ರವಿಚಂದ್ರನ್ ಸ್ಮರಣ್‌, ಕರುಣ್‌ರಿಂದಲೂ ಉತ್ತಮ ಇನ್ನಿಂಗ್ಸ್‌ಗಳು ಮೂಡಿಬಂದಿವೆ. ಕೆ.ಎಲ್‌.ರಾಹುಲ್‌ ಈ ಪಂದ್ಯದಲ್ಲೂ ಆಡುವ ನಿರೀಕ್ಷೆ ಇದ್ದು, ನ್ಯೂಜಿಲೆಂಡ್‌ ವಿರುದ್ಧದ ಸರಣಿಗೂ ಮುನ್ನ ದೊಡ್ಡ ಸ್ಕೋರ್‌ ದಾಖಲಿಸಲು ಎದುರು ನೋಡುತ್ತಿದ್ದಾರೆ.

ಮತ್ತೊಂದೆಡೆ ರಾಜಸ್ಥಾನ ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಸೋತು ಈಗಾಗಲೇ ನಾಕೌಟ್‌ ರೇಸಿಂದ ಹೊರಬಿದ್ದಿದೆ. ತಂಡ ಬಾಕಿ ಇರುವ 2 ಪಂದ್ಯಗಳಲ್ಲಿ ಸುಧಾರಿತ ಆಟವಾಡಲು ಕಾಯುತ್ತಿದೆ.

ಪಂದ್ಯ ಆರಂಭ: ಬೆಳಗ್ಗೆ 9ಕ್ಕೆ

ಇಂದಿನ ಪಂದ್ಯದಲ್ಲಿ ಆಡಲ್ಲ ವಿರಾಟ್‌ ಕೊಹ್ಲಿ

ಬೆಂಗಳೂರು: ಬಿಸಿಸಿಐ ಸೂಚನೆ ಮೇರೆಗೆ ವಿಜಯ್‌ ಹಜಾರೆ ಟೂರ್ನಿಯಲ್ಲಿ 2 ಪಂದ್ಯಗಳನ್ನಾಡಿರುವ ವಿರಾಟ್‌ ಕೊಹ್ಲಿ, ಮಂಗಳವಾರ ನಡೆಯಲಿರುವ ರೈಲ್ವೇಸ್‌ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರ ಕಣಕ್ಕಿಳಿಯುವುದಿಲ್ಲ. ಕಳೆದ ವಾರ ದೆಹಲಿ ಕ್ರಿಕೆಟ್‌ ಸಂಸ್ಥೆ ಮುಖ್ಯಸ್ಥ ರೋಹನ್‌ ಜೇಟ್ಲಿ, ಕೊಹ್ಲಿ ಇನ್ನೊಂದು ಪಂದ್ಯ ಆಡಲಿದ್ದಾರೆ ಎಂದಿದ್ದರು. ಆದರೆ ವಿರಾಟ್‌, ಈ ಪಂದ್ಯಕ್ಕಾಗಿ ಬೆಂಗಳೂರಿಗೆ ಆಗಮಿಸಿಲ್ಲ ಎಂದು ತಂಡದ ಕೋಚ್‌ ಸರಣ್‌ದೀಪ್‌ ಸಿಂಗ್‌ ಹೇಳಿದ್ದಾರೆ.

ಮುಂಬೈ ತಂಡಕ್ಕೆ ಶ್ರೇಯಸ್ ಅಯ್ಯರ್ ನಾಯಕ

ಸಿಡ್ನಿ ಏಕದಿನ ಪಂದ್ಯದಲ್ಲಿ ಗಾಯಗೊಂಡು ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದ ಶ್ರೇಯಸ್ ಅಯ್ಯರ್, ಇದೀಗ ನ್ಯೂಜಿಲೆಂಡ್ ಎದುರು ಜನವರಿ 11ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದಕ್ಕೂ ಮೊದಲು ಶ್ರೇಯಸ್ ಅಯ್ಯರ್ ಇಂದಿನ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ಮುಂಬೈ ಪರ ನಾಯಕನಾಗಿ ಮೈದಾನಕ್ಕಿಳಿಯಲಿದ್ದಾರೆ.

ಮುಂಬೈ ತಂಡದ ನಾಯಕ ಶಾರ್ದೂಲ್ ಠಾಕೂರ್ ಗಾಯಗೊಂಡಿದ್ದರಿಂದ ಅವರಿಗೆ ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ. ಹೀಗಾಗಿ ಶ್ರೇಯಸ್ ಅಯ್ಯರ್ ನಾಯಕನಾಗಿ ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ. ಮುಂಬೈ ತಂಡದಲ್ಲಿ ಶಿವಂ ದುಬೆ ಹಾಗೂ ಶ್ರೇಯಸ್ ಅಯ್ಯರ್ ಅವರಂತಹ ತಾರಾ ಆಟಗಾರರ ದಂಡೆ ಇದೆ. ಶ್ರೇಯಸ್ ಅಯ್ಯರ್ ಲೀಗ್ ಹಂತದಲ್ಲಿ ಇಂದು ಹಿಮಾಚಲ ಪ್ರದೇಶ ಎದುರು ಹಾಗೂ ಜನವರಿ 08ರಂದು ಪಂಜಾಬ್ ವಿರುದ್ದದ ಪಂದ್ಯದಲ್ಲಿ ನಾಯಕನಾಗಿ ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ. ಇದಾದ ಬಳಿಕ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ.