ಟಿ20 ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆಯ ವೇಳೆ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಅವರ ಗೆಳತಿ ಮಹೀಕಾ ಶರ್ಮಾ ವಿವಾದಕ್ಕೆ ಸಿಲುಕಿದ್ದಾರೆ. ಫೋಟೋಶೂಟ್ ವೇಳೆ ಐಸಿಸಿ ಅಧಿಕಾರಿಯ ಮಾತನ್ನು ಮಹೀಕಾ ನಿರ್ಲಕ್ಷಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪಾಂಡ್ಯ ಮೇಲೆ ದೂರು ದಾಖಲಾಗಿದೆ.

ಅಹಮದಾಬಾದ್: ಟಿ20 ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್ ಆದ ಬಳಿಕ, ಟೀಂ ಇಂಡಿಯಾದ ಸಂಭ್ರಮಾಚರಣೆಯ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ತುಂಬಿ ತುಳುಕುತ್ತಿವೆ. ಆದರೆ, ಈ ಸಂಭ್ರಮದ ನಡುವೆಯೇ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಅವರ ಗೆಳತಿ ಮಹೀಕಾ ಶರ್ಮಾ ಸೇರಿರುವ ಒಂದು ವಿಡಿಯೋ ಈಗ ಭಾರೀ ಚರ್ಚೆಗೆ ಕಾರಣವಾಗಿದೆ.

ಹಟಮಾರಿತನ ತೋರಿದ ಹಾರ್ದಿಕ್ ಪಾಂಡ್ಯ ಗೆಳತಿ

ವಿಶ್ವಕಪ್ ಗೆದ್ದ ನಂತರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ತಂಡದ ಸದಸ್ಯರು ಫೋಟೋಶೂಟ್‌ಗೆ ರೆಡಿಯಾಗುತ್ತಿದ್ದರು. ಆಗ ಮೈದಾನದಲ್ಲಿದ್ದ ಮಹೀಕಾರನ್ನು ಪಕ್ಕಕ್ಕೆ ಸರಿಯುವಂತೆ ಐಸಿಸಿ ಸಿಇಒ ಸಂಜೋಗ್ ಗುಪ್ತಾ ಕೇಳಿಕೊಳ್ಳುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆದರೆ, ಸಂಜೋಗ್ ಗುಪ್ತಾ ಹೇಳಿದರೂ ಮಹೀಕಾ ಅಲ್ಲಿಂದ ಕದಲದೆ ಹಾರ್ದಿಕ್ ಪಕ್ಕದಲ್ಲೇ ನಿಂತುಕೊಂಡರು ಎಂದು ಅಭಿಮಾನಿಗಳು ಆರೋಪಿಸುತ್ತಿದ್ದಾರೆ. ವಿಶ್ವಕಪ್ ಗೆಲುವಿನ ನಂತರ ಹಾರ್ದಿಕ್ ಮತ್ತು ಮಹೀಕಾ ಮೈದಾನದಲ್ಲಿ ಒಟ್ಟಿಗೆ ಇದ್ದರು. ವಿಶ್ವಕಪ್ ಟ್ರೋಫಿ ಹಿಡಿದು ನಿಂತು, ಕುಳಿತು, ಮಲಗಿ ಹೀಗೆ ಹಲವು ಭಂಗಿಗಳಲ್ಲಿ ಇಬ್ಬರೂ ಫೋಟೋಗೆ ಪೋಸ್ ಕೊಟ್ಟಿದ್ದು ಕೂಡ ದೊಡ್ಡ ಚರ್ಚೆಯಾಗಿತ್ತು.

Scroll to load tweet…

ಇದಲ್ಲದೆ, ತಂಡದ ವಿಜಯೋತ್ಸವದ ವೇಳೆ ಹಾರ್ದಿಕ್ ಪಾಂಡ್ಯರ ಕೆಲವು ನಡವಳಿಕೆಗಳ ವಿರುದ್ಧವೂ ಅಭಿಮಾನಿಗಳು ಟೀಕೆ ವ್ಯಕ್ತಪಡಿಸಿದ್ದಾರೆ. ತಂಡದ ಇತರ ಸದಸ್ಯರಿಗೆ ವಿಶ್ವಕಪ್ ಟ್ರೋಫಿ ನೀಡದೆ, ತಮ್ಮ ಗೆಳತಿಯೊಂದಿಗೆ ಟ್ರೋಫಿ ಹಿಡಿದು ಬೇರೆ ಬೇರೆ ಪೋಸ್‌ಗಳಲ್ಲಿ ಫೋಟೋ ತೆಗೆಸಿಕೊಳ್ಳಲು ಯತ್ನಿಸಿದರು. ಅವರು ಅನಗತ್ಯವಾಗಿ ಗಮನ ಸೆಳೆಯಲು ಪ್ರಯತ್ನಿಸಿದರು ಎಂಬುದು ಮತ್ತೊಂದು ಆರೋಪ.

ಸಂಕಷ್ಟದಲ್ಲಿ ಹಾರ್ದಿಕ್ ಪಾಂಡ್ಯ?

Scroll to load tweet…

ಸಂಭ್ರಮಾಚರಣೆ ವೇಳೆ ಭಾರತದ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಹಾರ್ದಿಕ್ ವಿರುದ್ಧ ಕಾನೂನು ಕ್ರಮಕ್ಕೂ ಮುಂದಾಗಿದ್ದಾರೆ. ರಾಷ್ಟ್ರಧ್ವಜವನ್ನು ಹೊದ್ದು ಗೆಳತಿಯೊಂದಿಗೆ ವೇದಿಕೆಯಲ್ಲಿ ಮಲಗಿದ್ದರು ಎಂಬುದು ದೂರಿಗೆ ಕಾರಣವಾಗಿದೆ. ಪುಣೆಯ ಶಿವಾಜಿ ನಗರ ಪೊಲೀಸ್ ಠಾಣೆಯಲ್ಲಿ ವಕೀಲ ವಾಜಿದ್ ಖಾನ್ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋದ ಸತ್ಯಾಸತ್ಯತೆಯನ್ನು ಅಧಿಕೃತವಾಗಿ ಯಾರೂ ಖಚಿತಪಡಿಸಿಲ್ಲ. ವಿಡಿಯೋದಲ್ಲಿ ಮಹೀಕಾ ಮತ್ತು ಸಂಜೋಗ್ ಗುಪ್ತಾ ನಡುವಿನ ಸಂಭಾಷಣೆ ಸ್ಪಷ್ಟವಾಗಿಲ್ಲ. ಹೀಗಾಗಿ, ಅವರು ಮೈದಾನದಿಂದ ಹೊರಹೋಗುವಂತೆ ಹೇಳಿದರೇ ಅಥವಾ ಬೇರೆನಾದರೂ ಸೂಚನೆ ನೀಡಿದರೇ ಎಂಬುದು ಖಚಿತವಾಗಿಲ್ಲ.