ಇದುವರೆಗೂ ಉಮೇಶ್ ಯಾದವ್ ಒಟ್ಟು 33 ಟೆಸ್ಟ್, 70 ಏಕದಿನ ಹಾಗೂ ಒಂದು ಟಿ20 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 92,98 ಹಾಗೂ 1 ವಿಕೆಟ್ ಪಡೆದಿದ್ದಾರೆ.
ನವದೆಹಲಿ(ಆ.10): ಉಮೇಶ್ ಯಾದವ್, ಭಾರತ ತಂಡದ ಪ್ರಮುಖ ವೇಗದ ಬೌಲರ್. ಕಡು ಕಷ್ಟದಿಂದ ಟೀಂ ಇಂಡಿಯಾ ಬಳಗ ಸೇರಿಕೊಂಡ ಉಮೇಶ್ ಯಾದವ್ 20 ವರ್ಷದವರಿದ್ದಾಗ ಲೆದರ್ ಬಾಲ್ ಎಂದರೆ ಹೇಗಿರುತ್ತದೆ ಎಂದು ಗೊತ್ತಿರಲಿಲ್ಲವಂತೆ..!
ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್'ಗೂ ಮುನ್ನ ಸ್ವತಃ ಉಮೇಶ್ ಯಾದವ್ ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. 'ನಾನು ಮೊದಲು ಟೆನಿಸ್ ಹಾಗೂ ರಬ್ಬರ್ ಬಾಲ್'ನಲ್ಲಿ ಕ್ರಿಕೆಟ್ ಆಡುತ್ತಿದ್ದೆನೇ ಹೊರತು, ಯಾವತ್ತೂ ಲೆದರ್ ಬಾಲ್'ನಲ್ಲಿ ಆಡಿರಲಿಲ್ಲ. ನಾನು 20 ವರ್ಷದವನಿದ್ದಾಗ ಮೊಟ್ಟಮೊದಲ ಬಾರಿಗೆ ಲೆದರ್ ಬಾಲ್'ನಲ್ಲಿ ಆಡಲು ಆರಂಭಿಸಿದೆ. ಆ ಬಾಲ್ ಮೇಲೆ ಹಿಡಿತ ಸಾಧಿಸಲು ಎರಡು ವರ್ಷ ಸಮಯ ತೆಗೆದುಕೊಂಡೆ ಎಂದು ಯಾದವ್ ಅನುಭವ ಹಂಚಿಕೊಂಡಿದ್ದಾರೆ.
ಎರಡು ವರ್ಷಗಳ ಅವಧಿಯಲ್ಲಿ ನನ್ನ ಕೋಚ್ ಸಹಾಯದಿಂದ ಚೆಂಡನ್ನು ಎಲ್ಲಿ ಪಿಚ್ ಮಾಡಬೇಕು, ಎಡಗೈ ಹಾಗೂ ಬಲಗೈ ಬ್ಯಾಟ್ಸ್'ಮನ್'ಗಳಿಗೆ ಯಾವ ಲೆಂಗ್ತ್'ನಲ್ಲಿ ಬೌಲಿಂಗ್ ಮಾಡಬೇಕು ಎನ್ನುವುದನ್ನು ಕಲಿತೆ ಎಂದು ನಾಗ್ಪುರ ಮೂಲದ ಯಾದವ್ ತಿಳಿಸಿದ್ದಾರೆ.
ಉಮೇಶ್ ಯಾದವ್ 2011ರಲ್ಲಿ ವೆಸ್ಟ್'ಇಂಡಿಸ್ ಎದುರು ಮೊದಲು ಟೆಸ್ಟ್ ಕ್ರಿಕೆಟ್'ಗೆ ಪಾದಾರ್ಪಣೆ ಮಾಡಿದ್ದರು. ಇದುವರೆಗೂ ಉಮೇಶ್ ಯಾದವ್ ಒಟ್ಟು 33 ಟೆಸ್ಟ್, 70 ಏಕದಿನ ಹಾಗೂ ಒಂದು ಟಿ20 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 92,98 ಹಾಗೂ 1 ವಿಕೆಟ್ ಪಡೆದಿದ್ದಾರೆ.
