ನವದೆಹಲಿ[ಮೇ.07]: ಭಾರತೀಯ ಸೇನೆಯಲ್ಲಿ ಗೌರವಾನ್ವಿತ ಲೆಫ್ಟಿನೆಂಟ್‌ ಕರ್ನಲ್‌ ಆಗಿರುವ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ, ಏಕದಿನ ವಿಶ್ವಕಪ್‌ನ ಮೊದಲ ಪಂದ್ಯದ ವೇಳೆ ಧರಿಸಿದ್ದ ಕೀಪಿಂಗ್‌ ಗ್ಲೌಸ್‌ ಮೇಲೆ ಭಾರತೀಯ ಪ್ಯಾರಾ ವಿಶೇಷ ಪಡೆಯ ಚಿಹ್ನೆಯಿರುವುದು ಕಂಡು ಬಂದಿತ್ತು. ಈ ಮೂಲಕ ಧೋನಿ ಸೇನೆ ಬಗ್ಗೆ ತಮಗಿರುವ ಗೌರವವನ್ನು ಪ್ರದರ್ಶಿಸಿದ್ದರು. ಆದರೀಗ ಈ ವಿಚಾರ ಭಾರೀ ವಿವಾದವನ್ನು ಸೃಷ್ಟಿಸಿದೆ. ಒಂದೆಡೆ ಐಸಿಸಿ ಸೇನಾ ಚಿಹ್ನೆ ತೆಗೆಯಲು ಮನವಿ ಮಾಡಿದ್ದರೆ, ಮತ್ತೊಂದೆಡೆ ಧೋನಿ 'ಬಲಿದಾನ್' ಚಿಹ್ನೆ ತೆಗೆಯಬಾರದೆಂದು ಬಹುದೊಡ್ಡ ಅಭಿಯಾನವೇ ಆರಂಭವಾಗಿದೆ.

ಧೋನಿಗೆ ಸಂಕಷ್ಟ-ಗ್ಲೌಸ್ ಮೇಲಿನ ಸೇನೆ ಚಿಹ್ನೆ ತೆಗೆಯಲು ಐಸಿಸಿ ಸೂಚನೆ!

ಧೋನಿಯ ಗ್ಲೌಸ್‌ ಮೇಲೆ ಪ್ಯಾರಾಚೂಟ್‌ ರೆಜಿಮೆಂಟ್‌ನ ‘ಬಲಿದಾನ್‌’ ಚಿಹ್ನೆ ಕ್ಯಾಮರಾ ಕಣ್ಣಿಗೆ ಬಿದ್ದ ಬೆನ್ನಲ್ಲೇ ಭಾರೀ ಸದ್ದು ಮಾಡಿದೆ. ಭಾರತೀಯರು ಧೋನಿ ಸೇನೆ ಮೇಲೆ ಹೊಂದಿರುವ ಅಭಿಮಾನಕ್ಕೆ ತಲೆ ಬಾಗಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಇತ್ತ ಈ ಚಿಹ್ನೆ ಪಾಕ್ ಸೇರಿದಂತೆ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಿರುವಾಗಲೇ ಐಸಿಸಿ ಸೇನಾ ಚಿಹ್ನೆಯನ್ನು ತೆಗೆಯುವಂತೆ ಧೋನಿಗೆ ತಿಳಿಸುವಂತೆ ಬಿಸಿಸಿಐಗೆ ಸೂಚಿಸಿದೆ. ಅಲ್ಲದೇ ಐಸಿಸಿಯ ಉಪಕರಣ ಮತ್ತು ಪೋಷಾಕು ನಿಯಮದ ಪ್ರಕಾರ ಅಂತಾರಾಷ್ಟ್ರೀಯ ಪಂದ್ಯಗಳ ವೇಳೆ ಯಾವುದೇ ರಾಜಕೀಯ, ಜಾತಿ ಇಲ್ಲವೇ ಜನಾಂಗೀಯ ಚಟುವಟಿಕೆಗಳಿಗೆ ಸಂಬಂಧಪಟ್ಟಸಂದೇಶಗಳನ್ನು ಪ್ರದರ್ಶನ ಮಾಡುವಂತ್ತಿಲ್ಲ ಎಂಬ ಕಾರಣವನ್ನೂ ನೀಡಿದೆ.

ಧೋನಿ ಗ್ಲೌಸ್‌ನಲ್ಲಿ ಸೇನೆ ಲಾಂಛನ-ಟ್ವಿಟರಿಗರಿಂದ ಸಲ್ಯೂಟ್!

ಆದರೀಗ ಈ ಬೆಳವಣಿಗೆಗಳ ಬೆನ್ನಲ್ಲೇ ಟ್ವಿಟರ್ ನಲ್ಲಿ #DhoniKeepTheGlove ಎಂಬ ಬೃಹತ್ ಅಭಿಯಾನ ಆರಂಭವಾಗಿದ್ದು, ಈ ಮೂಲಕ ಅಭಿಮಾನಿಗಳು ಗ್ಲೌಸ್ ನಿಂದ 'ಬಲಿದಾನ್' ಚಿಹ್ನೆ ತೆಗೆಯದಂತೆ ಧೋನಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ 2011ರ ವಿಶ್ವಕಪ್ ಪಂದ್ಯದ ವೇಳೆ ಪಾಕ್ ಆಟಗಾರರಿಗೆ ಮೈದಾನಲ್ಲೇ ನಮಾಜ್ ಮಾಡಿದ್ದು ಸರಿಯಾದರೆ ಧೋನಿ ಸೇನಾ ಚಿಹ್ನೆ ಯಾಕೆ ಧರಿಸಬಾರದು ಎಂದೂ ಪ್ರಶ್ನಿಸುತ್ತಿದ್ದಾರೆ. ಸದ್ಯ #DhoniKeepTheGlove ಎಂಬ ಹ್ಯಾಷ್ ಟ್ಯಾಗ್ ಟ್ವಿಟರ್ ನಲ್ಲಿ ಭಾರೀ ಟ್ರೆಂಡ್ ಆಗುತ್ತಿದ್ದು, ಯಾವುದೇ ಕಾರಣಕ್ಕೂ ಗ್ಲೌಸ್ ಮೇಲಿನ ಸೇನಾ ವಚಿಹ್ನೆ ತೆಗೆಯಬಾರದೆಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. 

ಪ್ಯಾರಾಚೂಟ್‌ ರೆಜಿಮೆಂಟ್‌ನ ‘ಬಲಿದಾನ್‌’ ಚಿಹ್ನೆ ಪ್ಯಾರಾಮಿಲಿಟೆರಿ ಕಮಾಂಡೋಗಳಿಗೆ ಧರಿಸಲು ಅನುಮತಿ ಇದೆ. 2011ರಲ್ಲಿ ಪ್ಯಾರಾಚೂಟ್‌ ರೆಜಿಮೆಂಟ್‌ ಸೇರಿದ್ದ ಧೋನಿ, 2015ರಲ್ಲಿ ಪ್ಯಾರಾ ಬ್ರಿಗೇಡ್‌ನಿಂದ ತರಬೇತಿ ಪಡೆದಿದ್ದರು. ಇನ್ನು ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಭಾರತೀಯ ಸೇನೆಯಲ್ಲಿ ಗೌರವಾನ್ವಿತ ಲೆಫ್ಟಿನೆಂಟ್‌ ಕರ್ನಲ್‌ ಆಗಿದ್ದಾರೆ ಎಂಬುವುದು ಉಲ್ಲೇಖನೀಯ.