ನವದೆಹಲಿಯಲ್ಲಿ ನಡೆಯಲಿರುವ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ ವೇಳೆ ಮಂಗಗಳ ಕಾಟವನ್ನು ತಡೆಯಲು, ಲಂಗೂರ್‌ಗಳಂತೆ ಶಬ್ದ ಮಾಡುವ ಜನರನ್ನು ನೇಮಿಸಲಾಗಿದೆ. ಲಂಗೂರ್‌ಗಳ ಶಬ್ದಕ್ಕೆ ಮಂಗಗಳು ಹೆದರಿ ಓಡಿಹೋಗುವುದರಿಂದ, ಕ್ರೀಡಾಕೂಟವನ್ನು ಸುಗಮವಾಗಿ ನಡೆಸಲು ಈ ವಿಶಿಷ್ಟ ಕ್ರಮವನ್ನು ಕೈಗೊಳ್ಳಲಾಗಿದೆ.

ನವದೆಹಲಿ (ಆ.11): ಪ್ರತಿಷ್ಠಿತ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ ಮುಂದಿನ ವಾರ ನವದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಕೂಟ ಆ.17ರಿಂದ 23ರ ವರೆಗೆ ನಡೆಯಲಿದ್ದು, 55 ದೇಶಗಳ 380ಕ್ಕೂ ಹೆಚ್ಚು ಶಟ್ಲರ್‌ಗಳು ಪಾಲ್ಗೊಳ್ಳಲಿದ್ದಾರೆ. ಆದರೆ ಈ ಕೂಟದ ವೇಳೆ ಆಟ ಮತ್ತು ಅಭಿಮಾನಿಗಳ ಜೈಕಾರದ ಜೊತೆಗೆ ಮತ್ತೊಂದು ಶಬ್ಧ ಕೇಳಿಬರಲಿದೆ. ಅದು ಲಂಗೂರ್‌(ಕಪ್ಪು ಮುಖ ಹಾಗೂ ಉದ್ದ ಬಾಲವಿರುವ ಒಂದು ಪ್ರಕಾರದ ದೊಡ್ಡ ಕೋತಿ)ಗಳನ್ನು ಅನುಕರಿಸುವ ಮನುಷ್ಯರ ಶಬ್ಧ.

ನವದೆಹಲಿಯಲ್ಲಿ ಮಂಗಗಳ ಕಾಟ ಹೆಚ್ಚಾಗಿದೆ. ಕ್ರೀಡೆ ಮಾತ್ರವಲ್ಲದೇ ಅಧಿವೇಶನ, ಜಾಗತಿಕ ಮಟ್ಟದ ಸಭೆ, ಸಮಾರಂಭವೇಳೆಯೂ ಮಂಗಗಳ ಕಾಟ ಎದುರಾಗುತ್ತದೆ. ಆದರೆ ಮಂಗಗಳು ಲಂಗೂರ್‌ಗಳನ್ನು ಕಂಡರೆ ಹೆದರಿ ಓಡುತ್ತವೆ. ಮಂಗಗಳಿಗೆ ಹೋಲಿಸಿದರೆ ಲಂಗೂರ್‌ಗಳು ಗಾತ್ರದಲ್ಲಿ ದೊಡ್ಡದು. ಹೀಗಾಗಿಯೇ ಈ ಬಾರಿ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ ವೇಳೆ ಮಂಗಗಳನ್ನು ಓಡಿಸಲು ಲಂಗೂರ್‌ ಬದಲು ಲಂಗೂರ್‌ ರೀತಿ ಶಬ್ಧ ಮಾಡುವ ವ್ಯಕ್ತಿಗಳನ್ನು ನೇಮಿಸಲಾಗಿದೆ. ಅವರು ಕೂಟದ ವೇಳೆ ಕ್ರೀಡಾಂಗಣದ ಹೊರಗೆ ಹಾಗೂ ಒಳಭಾಗದಲ್ಲಿ ಇರಲಿದ್ದು, ಮಂಗಗಳನ್ನು ಕಂಡರೆ ಲಂಗೂರ್‌ ರೀತಿ ಶಬ್ಧ ಮಾಡಿ ಅವುಗಳನ್ನು ಓಡಿಸಲಿದ್ದಾರೆ.

‘ಮಂಗಗಳಿಗಿಂತ ಲಂಗೂರ್‌ಗಳ ದೇಹ ಗಾತ್ರ ದೊಡ್ಡದು. ಹೀಗಾಗಿಯೇ ಲಂಗೂರ್‌ಗಳನ್ನು ಕಂಡರೆ ಮಂಗಗಳು ಹೆದರಿ ಓಡುತ್ತವೆ. ಲಂಗೂರ್‌ಗಳ ಶಬ್ಧ ಕೇಳಿದರೂ ಮಂಗಗಳು ಹೆದರುತ್ತವೆ. ನಾವು ಈಗಾಗಲೇ ದಕ್ಷಿಣ ಮತ್ತು ಉತ್ತರ ಬ್ಲಾಕ್‌ಗಳಲ್ಲಿ ಈ ರೀತಿ ಮಾಡಿದ್ದೇವೆ. ನಮ್ಮ ಶಬ್ಧ ಕೇಳಿ ಮಂಗಗಳು ಓಡಿವೆ’ ಎಂದು ಲಂಗೂರ್‌ ರೀತಿ ಶಬ್ಧ ಮಾಡಲು ನೇಮಿಸಲ್ಪಟ್ಟಿರುವ ಮೂವರ ಪೈಕಿ ಒಬ್ಬರಾದ ಝಫರ್‌ ಎಂಬವರು ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗೆ ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ವೇಳೆ ಮಂಗಗಳು ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದವು. ಇದರಿಂದ ಪ್ರೇಕ್ಷಕರಿಗೆ ಮಾತ್ರವಲ್ಲದೇ ಆಟಗಾರರಿಗೂ ತೊಂದರೆ ಉಂಟಾಗಿವೆ. ಆದರೆ ವಿಶ್ವ ಚಾಂಪಿಯನ್‌ಶಿಪ್‌ ವೇಳೆ ಮಂಗಗಳ ಸಮಸ್ಯೆ ಎದುರಾಗದಂತೆ ಆಯೋಜಕರು ವಿಶೇಷ ದಾರಿ ಕಂಡುಕೊಂಡಿದ್ದಾರೆ.

ಹಿಂದೆಯೂ ಲಂಗೂರ್‌ ಕಟೌಟ್‌, ಶಬ್ಧ ಬಳಕೆ!

ಡೆಲ್ಲಿಯಲ್ಲಿ ಈ ಹಿಂದೆಯೂ ಮಂಗಗಳನ್ನು ಓಡಿಸಲು ಲಂಗೂರ್‌ಗಳ ಕಟೌಟ್‌, ಶಬ್ಧ ಬಳಕೆ ಮಾಡಲಾಗಿದೆ. 2023ರಲ್ಲಿ ಜಿ20 ಸಮ್ಮಿಟ್‌ ವೇಳೆ ಲಂಗೂರ್‌ ರೀತಿ ಶಬ್ಧ ಮಾಡಲು 40 ಜನರನ್ನು ನೇಮಿಸಲಾಗಿತ್ತು. ನೂರಾರು ಕಡೆಗಳಲ್ಲಿ ಲಂಗೂರ್‌ಗಳ ಕಟೌಟ್‌ಗಳನ್ನು ಹಾಕಲಾಗಿತ್ತು. ಕಳೆದ ಜನವರಿಯಲ್ಲಿ ಡೆಲ್ಲಿಯಲ್ಲಿ ವಿಧಾನಸಭೆ ಅಧಿವೇಶನ ಸಂದರ್ಭದಲ್ಲೂ ಲಂಗೂರ್‌ ರೀತಿ ಶಬ್ಧ ಮಾಡಲು ಕೆಲವರನ್ನು ನೇಮಿಸಲಾಗಿತ್ತು.