ನವದೆಹಲಿ(ಫೆ.13): ದೆಹಲಿ ಹಿರಿಯರ ಕ್ರಿಕೆಟ್‌ ತಂಡದ ಆಯ್ಕೆಗಾರ ಅಮಿತ್‌ ಭಂಡಾರಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಅನುಜ್‌ ದೇಢಾ ಎಂಬ ಯುವ ಕ್ರಿಕೆಟಿಗನ ಮೇಲೆ ಆಜೀವ ನಿಷೇಧ ಹೇರುವುದಾಗಿ ದೆಹಲಿ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷ ರಜತ್‌ ಶರ್ಮಾ ಹೇಳಿದ್ದಾರೆ. ಬುಧವಾರ ಕೆಲ ಪ್ರಮುಖ ಮಾಜಿ ಆಟಗಾರರು, ಎಲ್ಲಾ ವಯೋಮಿತಿಯ ಆಯ್ಕೆ ಸಮಿತಿ ಸದಸ್ಯರು, ಆಡಳಿತಗಾರರ ಸಭೆ ಕರೆದಿದ್ದು ಅಧಿಕೃತವಾಗಿ ಘೋಷಿಸಲಿದ್ದೇವೆ ಎಂದು ರಜತ್‌ ತಿಳಿಸಿದ್ದಾರೆ.

ಇದನ್ನೂ ಓದಿ: 2021ರ ಏಕದಿನ ವಿಶ್ವಕಪ್‌: ಭಾರತಕ್ಕಿಲ್ಲ ನೇರ ಪ್ರವೇಶ?

ಸೋಮವಾರ ಸಯ್ಯದ್‌ ಮುಷ್ತಾಕ್‌ ಅಲಿ ಸಂಭಾವ್ಯ ತಂಡದ ಅಭ್ಯಾಸ ಪಂದ್ಯದ ವೇಳೆ ಅನುಜ್‌, 15 ಸಹಚರರೊಂದಿಗೆ ಸ್ಟೀಫನ್ಸ್‌ ಮೈದಾನಕ್ಕೆ ನುಗ್ಗಿ ಭಂಡಾರಿ ಮೇಲೆ ಹಾಕಿ ಸ್ಟಿಕ್‌, ಕ್ರಿಕೆಟ್‌ ಬ್ಯಾಟ್‌, ಕಬ್ಬಿಣದ ರಾಡ್‌ಗಳಿಂದ ಹಲ್ಲೆ ನಡೆಸಿದ್ದರು. ರಾಜ್ಯ ಅಂಡರ್‌-23 ತಂಡಕ್ಕೆ ಆಯ್ಕೆ ಮಾಡಲಿಲ್ಲ ಎನ್ನುವ ಸಿಟ್ಟಿಗೆ ಅನುಜ್‌ ಹಲ್ಲೆ ನಡೆಸಿದ್ದಾಗಿ ಭಂಡಾರಿ ಪೊಲೀಸರಿಗೆ ಹೇಳಿಕೆ ನೀಡಿದ್ದರು. ಅಮಿತ್‌ ದೂರು ನೀಡಿದ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಅನುಜ್‌ನನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ: ಪ್ರೊ ಕಬಡ್ಡಿ v/s ನ್ಯೂ ಕಬಡ್ಡಿ- ಗೊಂದಲದಲ್ಲಿ ಆಟಗಾರರು!

ಭಂಡಾರಿ ತಲೆ ಹಾಗೂ ಕಿವಿಗೆ ಗಂಭೀರ ಗಾಯಗಳಾಗಿದೆ. ಸದ್ಯ ಸಂತ ಪರಮಾನಂದ ಆಸ್ಪತ್ರೆಯಲ್ಲಿ ಭಂಡಾರಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ. ಟೀಂ ಇಂಡಿಯಾ ಕ್ರಿಕೆಟಿಗ ಗೌತಮ್ ಗಂಭೀರ್ ಸೇರಿದಂತೆ ಹಲವು ಕ್ರಿಕೆಟಿಗರು ಘಟನೆಯನ್ನ ಖಂಡಿಸಿದ್ದಾರೆ.