ಕೋಲ್ಕತಾ(ಫೆ.01): ಟೆನಿಸ್‌ ವಿಶ್ವಕಪ್‌ ಎಂದೇ ಕರೆಸಿಕೊಳ್ಳುವ ಡೇವಿಸ್‌ ಕಪ್‌ನ ಮಾದರಿ ಬದಲಾಗಿದ್ದು, ಡೇವಿಸ್‌ ಕಪ್‌ ಅರ್ಹತಾ ಸುತ್ತು ಶುಕ್ರವಾರದಿಂದ ಆರಂಭಗೊಳ್ಳಲಿದೆ. ಇಲ್ಲಿನ ಕೋಲ್ಕತಾ ಸೌತ್‌ ಕ್ಲಬ್‌ (ಸಿಎಸ್‌ಸಿ)ನ ಹುಲ್ಲಿನ ಅಂಕಣದಲ್ಲಿ ಭಾರತ ತಂಡ ಬಲಿಷ್ಠ ಇಟಲಿ ವಿರುದ್ಧ ಸೆಣಸಲಿದ್ದು, ಗೆದ್ದರೆ ಡೇವಿಸ್‌ ಕಪ್‌ ಫೈನಲ್ಸ್‌ಗೆ ಪ್ರವೇಶ ಪಡೆಯಲಿದೆ.

ನೂತನ ಮಾದರಿಯ ಪ್ರಕಾರ, ನವೆಂಬರ್‌ನಲ್ಲಿ ಮ್ಯಾಡ್ರಿಡ್‌ನಲ್ಲಿ ನಡೆಯಲಿರುವ ಡೇವಿಸ್‌ ಕಪ್‌ ಫೈನಲ್‌ನಲ್ಲಿ 18 ತಂಡಗಳು ಪ್ರಶಸ್ತಿಗೆ ಸೆಣಸಲಿವೆ. ಈಗಾಗಲೇ 6 ತಂಡಗಳು ನೇರ ಪ್ರವೇಶ ಪಡೆದಿದ್ದು, ಇನ್ನುಳಿದ 12 ಸ್ಥಾನಗಳಿಗೆ 24 ತಂಡಗಳು ಅರ್ಹತಾ ಸುತ್ತಿನಲ್ಲಿ ಸೆಣಸಲಿವೆ.

ಪ್ರಜ್ನೇಶ್‌ ಗುಣೇಶ್ವರ್‌, ರಾಮ್‌ಕುಮಾರ್‌ ರಾಮನಾಥನ್‌, ರೋಹನ್‌ ಬೋಪಣ್ಣ ಹಾಗೂ ದಿವಿಜ್‌ ಶರಣ್‌ ಭಾರತ ಪರ ಕಣಕ್ಕಿಳಿಯಲಿದ್ದಾರೆ. 16 ವರ್ಷಗಳ ಬಳಿಕ ಇಲ್ಲಿ ಡೇವಿಸ್‌ ಕಪ್‌ ನಡೆಯಲಿದ್ದು, ಹುಲ್ಲಿನ ಅಂಕಣದಲ್ಲಿ ಪಂದ್ಯಗಳು ನಡೆಯುವ ಕಾರಣ ಭಾರತಕ್ಕೆ ಗೆಲುವು ಸಾಧಿಸುವ ಅತ್ಯುತ್ತಮ ಅವಕಾಶವಿದೆ.

ಹೊಸ ಮಾದರಿಯಲ್ಲಿ ಕೇವಲ 2 ದಿನಗಳು ಮಾತ್ರ ಪಂದ್ಯಗಳು ನಡೆಯಲಿವೆ. ಈ ಮೊದಲು ಶುಕ್ರವಾರ ಸಿಂಗಲ್ಸ್‌, ಶನಿವಾರ ಡಬಲ್ಸ್‌ ಹಾಗೂ ಭಾನುವಾರ ರಿವರ್ಸ್‌ ಸಿಂಗಲ್ಸ್‌ ಪಂದ್ಯಗಳು ನಡೆಯುತ್ತಿದ್ದವು. ಆದರೆ ಈಗ ಶುಕ್ರವಾರ ಸಿಂಗಲ್ಸ್‌, ಶನಿವಾರ ಡಬಲ್ಸ್‌ ಹಾಗೂ ರಿವರ್ಸ್‌ ಸಿಂಗಲ್ಸ್‌ ಪಂದ್ಯಗಳು ನಡೆಯಲಿವೆ. ಈ ಮೊದಲಿದ್ದಂತೆ ಬೆಸ್ಟ್‌ ಆಫ್‌ 5 ಸೆಟ್‌ಗಳ ಬದಲು, ಬೆಸ್ಟ್‌ ಆಫ್‌ 3 ಸೆಟ್‌ ಸ್ಪರ್ಧೆ ನಡೆಯಲಿದೆ. ಹೀಗಾಗಿ ಪಂದ್ಯಗಳು ಹೆಚ್ಚು ರೋಚಕವಾಗಿರಲಿವೆ.

ವಿಶ್ವ ಟೆನಿಸ್‌ ಸಂಸ್ಥೆಯ ರಾರ‍ಯಂಕಿಂಗ್‌ನಲ್ಲಿ ಇಟಲಿ 10ನೇ ಸ್ಥಾನದಲ್ಲಿದ್ದರೆ, ಭಾರತ 19ನೇ ಸ್ಥಾನದಲ್ಲಿದೆ. ಜತೆಗೆ ಡೇವಿಸ್‌ ಕಪ್‌ನಲ್ಲಿ ಇಟಲಿ ತಂಡ ಭಾರತ ವಿರುದ್ಧ 4-1ರ ಗೆಲುವು-ಸೋಲಿನ ದಾಖಲೆ ಹೊಂದಿದೆ. ಆದರೆ ಕೋಲ್ಕತಾ, ಭಾರತದ ಅದೃಷ್ಟತಾಣವಾಗಿದ್ದು ಇಲ್ಲಿ ಭಾರತ 8-2ರ ಗೆಲುವು-ಸೋಲಿನ ದಾಖಲೆ ಹೊಂದಿದೆ. 1985ರ ವಿಶ್ವ ಗುಂಪು ಮೊದಲ ಸುತ್ತಿನ ಪಂದ್ಯದಲ್ಲಿ ಇಲ್ಲಿ ಭಾರತ, ಇಟಲಿ ವಿರುದ್ಧ ಜಯಿಸಿತ್ತು ಎನ್ನುವುದನ್ನು ಸ್ಮರಿಸಬಹುದಾಗಿದೆ.

ಪ್ರಜ್ನೇಶ್‌ ಮೇಲೆ ನಿರೀಕ್ಷೆ: ಶುಕ್ರವಾರ ನಡೆಯಲಿರುವ ಮೊದಲ ಸಿಂಗಲ್ಸ್‌ ಪಂದ್ಯದಲ್ಲಿ ರಾಮ್‌ಕುಮಾರ್‌, ಇಟಲಿಯ ಆ್ಯಂಡ್ರೆಸ್‌ ಸೆಪ್ಪಿ ವಿರುದ್ಧ ಸೆಣಸಲಿದ್ದಾರೆ. 2ನೇ ಸಿಂಗಲ್ಸ್‌ ಪಂದ್ಯದಲ್ಲಿ ವಿಶ್ವ ನಂ.102 ಪ್ರಜ್ನೇಶ್‌, ಮಾಟ್ಟೆಯೋ ಬೆರ್ರೆಟ್ಟಿನಿ ವಿರುದ್ಧ ಆಡಲಿದ್ದಾರೆ. ಡಬಲ್ಸ್‌ನಲ್ಲಿ ಬೋಪಣ್ಣ-ದಿವಿಜ್‌ ಜೋಡಿ ಸೆಚ್ಚಿನಾಟೋ-ಸಿಮೋನ್‌ ಬೊಲೆಲಿ ಜೋಡಿಯನ್ನು ಎದುರಿಸಲಿದೆ.

ಐಟಿಎಫ್‌ ರ‍್ಯಾಂಕಿಂಗ್‌

ಭಾರತ: 19

ಇಟಲಿ: 10

ಡೇವಿಸ್‌ ಕಪ್‌ನಲ್ಲಾಗಿರುವ ಪ್ರಮುಖ ಬದಲಾವಣೆ ಏನು?

* ವಿಶ್ವ ಗುಂಪಿನ ಟೂರ್ನಿ ಒಂದೇ ಕಡೆ ಒಂದು ವಾರ ನಡೆಯಲಿದೆ.

* ಪಂದ್ಯ 3 ದಿನಗಳ ಬದಲಿಗೆ 2 ದಿನ ನಡೆಯಲಿದೆ.

* ಬೆಸ್ಟ್‌ ಆಫ್‌ 5 ಬದಲಿಗೆ ಬೆಸ್ಟ್‌ ಆಫ್‌ 3 ಸೆಟ್‌ ಸ್ಪರ್ಧೆ.