ಚೆಸ್ ದಂತಕಥೆ ವಿಶ್ವನಾಥನ್ ಆನಂದ್‌ರನ್ನು ಹಿಂದಿಕ್ಕಿದ ಗುಕೇಶ್ ಭಾರತದ ನಂ.1!
ಶುಕ್ರವಾರ ಪ್ರಕಟಗೊಂಡ ನೂತನ ಪಟ್ಟಿಯಲ್ಲಿ ಭಾರತದ ಅತಿ ಕಿರಿಯ ಗ್ರ್ಯಾಂಡ್‌ಮಾಸ್ಟರ್, 17ರ ಡಿ.ಗುಕೇಶ್ ನಂ.1 ಸ್ಥಾನ ಅಲಂಕರಿಸಿದ್ದು, 1986ರ ಜುಲೈನಿಂದಲೂ ಅಗ್ರಸ್ಥಾನದಲ್ಲಿದ್ದ ಆನಂದ್ 2ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಚೆನ್ನೈ(ಸೆ.02): 5 ಬಾರಿ ವಿಶ್ವ ಚಾಂಪಿಯನ್, ದಿಗ್ಗಜ ಚೆಸ್ ಪಟು ವಿಶ್ವನಾಥನ್ ಆನಂದ್ 37 ವರ್ಷಗಳ ಬಳಿಕ ಇದೇ ಮೊದಲ ಬಾರಿ ಭಾರತದ ಚೆಸ್ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕಳೆದುಕೊಂಡಿದ್ದಾರೆ.
ಶುಕ್ರವಾರ ಪ್ರಕಟಗೊಂಡ ನೂತನ ಪಟ್ಟಿಯಲ್ಲಿ ಭಾರತದ ಅತಿ ಕಿರಿಯ ಗ್ರ್ಯಾಂಡ್‌ಮಾಸ್ಟರ್, 17ರ ಡಿ.ಗುಕೇಶ್ ನಂ.1 ಸ್ಥಾನ ಅಲಂಕರಿಸಿದ್ದು, 1986ರ ಜುಲೈನಿಂದಲೂ ಅಗ್ರಸ್ಥಾನದಲ್ಲಿದ್ದ ಆನಂದ್ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇತ್ತೀಚೆಗಷ್ಟೇ ಚೆಸ್ ವಿಶ್ವಕಪ್‌ನಲ್ಲಿ ರನ್ನರ್-ಅಪ್ ಆದ 18ರ ಆರ್.ಪ್ರಜ್ಞಾನಂದ 3ನೇ ಸ್ಥಾನದಲ್ಲಿದ್ದು, ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ವಿದಿತ್ ಗುಜರಾತಿ ಹಾಗೂ ಅರ್ಜುನ್ ಎರಿಗೈಸಿ ಕ್ರಮವಾಗಿ 4 ಹಾಗೂ 5ನೇ ಸ್ಥಾನದಲ್ಲಿದ್ದಾರೆ.
ಇದೇ ವೇಳೆ ವಿಶ್ವ ರ್‍ಯಾಂಕಿಂಗ್‌ನಲ್ಲಿ ಗುಕೇಶ್ 8ನೇ, ಆನಂದ್ 9ನೇ ಸ್ಥಾನದಲ್ಲಿದ್ದಾರೆ. ಪ್ರಜ್ಞಾನಂದ 19ನೇ ಸ್ಥಾನ ಪಡೆದುಕೊಂಡಿದ್ದು, ಚೆಸ್ ವಿಶ್ವಕಪ್ ವಿಜೇತ, ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
ಪ್ರಜ್ಞಾನಂದಗೆ ಅನುರಾಗ್ ಸನ್ಮಾನ
ಚೆಸ್ ವಿಶ್ವಕಪ್ ರನ್ನರ್-ಅಪ್ ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಪ್ರಜ್ಞಾನಂದರನ್ನು ಶುಕ್ರವಾರ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ನವದೆಹಲಿಯ ತಮ್ಮ ಕಚೇರಿಯಲ್ಲಿ ಸನ್ಮಾನಿಸಿದರು.
10ನೇ ಪ್ರೊ ಕಬಡ್ಡಿ ಲೀಗ್ ಹರಾಜು ಮುಂದೂಡಿಕೆ
ಮುಂಬೈ: ಸೆಪ್ಟೆಂಬರ್ 8 ಹಾಗೂ 9ಕ್ಕೆ ನಿಗದಿಯಾಗಿದ್ದ 10ನೇ ಆವೃತ್ತಿ ಪ್ರೊ ಕಬಡ್ಡಿ ಆಟಗಾರರ ಹರಾಜು ಪ್ರಕ್ರಿಯೆ ಮುಂದೂಡಿಕೆಯಾಗಿದೆ. ಈ ಬಗ್ಗೆ ಪ್ರೊ ಕಬಡ್ಡಿ ಆಯೋಜಕರಾದ ಮಶಾಲ್ ಸ್ಪೋರ್ಟ್ಸ್ ಮಾಹಿತಿ ನೀಡಿದ್ದು, ಭಾರತೀಯ ಅಮೆಚೂರ್ ಕಬಡ್ಡಿ ಒಕ್ಕೂಟ(ಎಕೆಎಫ್‌ಐ)ದ ಮನವಿ ಮೇರೆಗೆ ಹರಾಜು ಪ್ರಕ್ರಿಯೆ ಮುಂದೂಡಲಾಗಿದೆ ಎಂದಿದೆ. ಭಾರತದ ಆಟಗಾರರು ಏಷ್ಯನ್ ಗೇಮ್ಸ್‌ಗೆ ಸಿದ್ಧತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಹರಾಜನ್ನು ಮುಂದಕ್ಕೆ ಹಾಕುವಂತೆ ಪ್ರೊ ಕಬಡ್ಡಿ ಆಯೋಜಕರಿಗೆ ಎಕೆಎಫ್‌ಐ ಮನವಿ ಮಾಡಿತ್ತು. ಬದಲಿ ದಿನಾಂಕ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ. ಈ ಬಾರಿ ಟೂರ್ನಿಯನ್ನು ಡಿ.2ರಿಂದ ದೇಶದ 12 ನಗರಗಳಲ್ಲಿ ನಡೆಸುವುದಾಗಿ ಇತ್ತೀಚೆಗಷ್ಟೇ ಆಯೋಜಕರು ಘೋಷಿಸಿದ್ದರು.
US Open 2023: ಕಾರ್ಲೊಸ್ ಆಲ್ಕರಜ್ 3ನೇ ಸುತ್ತಿಗೆ ಲಗ್ಗೆ
ಹಾಕಿ ಫೈವ್ಸ್: ಸೆಮೀಸಲ್ಲಿ ಇಂದು ಭಾರತ-ಮಲೇಷ್ಯಾ
ಸಲಾಲ(ಒಮಾನ್): ಪುರುಷರ ಹಾಕಿ ಫೈವ್ಸ್ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಸೆಮಿಫೈನಲ್‌ನಲ್ಲಿ ಶನಿವಾರ ಮಲೇಷ್ಯಾ ವಿರುದ್ಧ ಸೆಣಸಾಡಲಿದೆ. ಎಲೈಟ್ ಗುಂಪಿನಲ್ಲಿದ್ದ ಭಾರತ 5 ಪಂದ್ಯಗಳಲ್ಲಿ 4ರಲ್ಲಿ ಜಯಗಳಿಸಿ 12 ಅಂಕದೊಂದಿಗೆ 2ನೇ ಸ್ಥಾನಿಯಾಗಿ ಸೆಮೀಸ್‌ಗೇರಿದೆ. ಅತ್ತ ಗುಂಪಿನಲ್ಲಿ 3ನೇ ಸ್ಥಾನಿಯಾಗಿದ್ದ ಮಲೇಷ್ಯಾ, ಕ್ರಾಸ್ ಓವರ್ ಪಂದ್ಯದಲ್ಲಿ ಶುಕ್ರವಾರ ಇರಾನ್ ವಿರುದ್ಧ 6-1 ಗೋಲುಗಳಿಂದ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿತು. ಮತ್ತೊಂದು ಸೆಮಿಫೈನಲ್‌ನಲ್ಲಿ ಶನಿವಾರ ಪಾಕಿಸ್ತಾನ ಹಾಗೂ ಒಮಾನ್ ತಂಡಗಳು ಸೆಣಸಾಡಲಿವೆ. ಶನಿವಾರವೇ ಫೈನಲ್ ಪಂದ್ಯ ನಿಗದಿಯಾಗಿದೆ.
'ನೀವು ನಮ್ಮ ದೇಶದ ಹೆಮ್ಮೆ': ಚೆಸ್ ವೀರ ಪ್ರಜ್ಞಾನಂದನನ್ನು ಆತ್ಮೀಯವಾಗಿ ಸ್ವಾಗತಿಸಿದ ಇಂಡಿಗೋ ಸಿಬ್ಬಂದಿ..!
ಸುನಿಲ್ ಚೆಟ್ರಿ ದಂಪತಿಗೆ ಗಂಡು ಮಗು ಜನನ
ಬೆಂಗಳೂರು: ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಅವರ ಪತ್ನಿ ಸೋನಮ್ ಭಟ್ಟಾಚಾರ್ಯ ಗುರುವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 2 ತಿಂಗಳ ಹಿಂದೆ ಇಂಟರ್‌ಕಾಂಟಿನೆಂಟಲ್ ಫುಟ್ಬಾಲ್ ಟೂರ್ನಿಯ ವಾನವಾಟು ವಿರುದ್ಧದ ಪಂದ್ಯದಲ್ಲಿ ಗೋಲು ಬಾರಿಸಿ ಸಂಭ್ರಮಾಚರಣೆ ನಡೆಸುವ ವೇಳೆ ಚೆಟ್ರಿ, ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ವಿಶೇಷ ರೀತಿಯಲ್ಲಿ ಸೂಚಿಸಿದ್ದರು.