ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಜಯ ಸಾಧಿಸಿದರೂ, ನಾಯಕ ಸೂರ್ಯಕುಮಾರ್ ಯಾದವ್ ಅವರ ಫಾರ್ಮ್ ಚಿಂತೆಗೆ ಕಾರಣವಾಗಿದೆ. ಪಂದ್ಯದ ನಂತರ ತಮ್ಮ ಪ್ರದರ್ಶನದ ಬಗ್ಗೆ ಮಾತನಾಡಿದ ಸೂರ್ಯ, ತಾನು ಔಟ್ ಆಫ್ ಫಾರ್ಮ್ ಆಗಿಲ್ಲ  ಎಂದು ಹೇಳಿದ್ದಾರೆ.

ಧರ್ಮಶಾಲಾ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಆಲ್ರೌಂಡ್ ಪ್ರದರ್ಶನ ತೋರಿದ ಟೀಂ ಇಂಡಿಯಾ 7 ವಿಕೆಟ್ ಭರ್ಜರಿ ಜಯ ಸಾಧಿಸಿದೆ. ಇದರ ಹೊರತಾಗಿಯೂ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ಉಪನಾಯಕ ಶುಭ್‌ಮನ್ ಗಿಲ್ ಅವರ ಫಾರ್ಮ್‌, ತಂಡದ ತಲೆನೋವು ಹೆಚ್ಚುವಂತೆ ಮಾಡಿದೆ. ಟೀಂ ಇಂಡಿಯಾ ಅಭಿಮಾನಿಗಳು ಇದೀಗ ನಿರಂತರವಾಗಿ ಈ ಇಬ್ಬರು ಆಟಗಾರರನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾರಂಭಿಸಿದ್ದಾರೆ. ಇನ್ನು ಧರ್ಮಶಾಲಾದಲ್ಲಿ ಪಂದ್ಯ ಮುಕ್ತಾದ ಬಳಿಕ ಸೂರ್ಯಕುಮಾರ್ ಯಾದವ್, ತಮ್ಮ ಫಾರ್ಮ್ ಕುರಿತಂತೆ ಮನಬಿಚ್ಚಿ ಮಾತನಾಡಿದ್ದಾರೆ.

ತಮ್ಮ ಕೆಟ್ಟ ಫಾರ್ಮ್ ಬಗ್ಗೆ ಮಾತಾಡಿದ ಸೂರ್ಯಕುಮಾರ್ ಯಾದವ್

ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರ ಫಾರ್ಮ್‌ ಪ್ರತಿ ಪಂದ್ಯದಲ್ಲೂ ಕುಸಿಯುತ್ತಲೇ ಸಾಗುತ್ತಿದೆ. ದಕ್ಷಿಣ ಆಫ್ರಿಕಾ ಎದುರಿನ ಮೊದಲ ಮೂರು ಪಂದ್ಯಗಳಿಂದ ಸೂರ್ಯ ಕಲೆಹಾಕಿದ್ದು ಕೇವಲ 29 ರನ್‌ಗಳು ಮಾತ್ರ. ಈ ಕುರಿತಂತೆ ಧರ್ಮಶಾಲಾ ಟಿ20 ಪಂದ್ಯದ ಬಳಿಕ ಸೂರ್ಯಕುಮಾರ್ ಯಾದವ್ ಮನಬಿಚ್ಚಿ ಮಾತನಾಡಿದ್ದಾರೆ.

ನಾನು ನೆಟ್ಸ್‌ನಲ್ಲಿ ಚೆನ್ನಾಗಿಯೇ ಬ್ಯಾಟ್ ಮಾಡುತ್ತಿದ್ದೇನೆ. ನನ್ನ ಸಾಮರ್ಥ್ಯಕ್ಕೆ ತಕ್ಕಂತ ಪ್ರದರ್ಶನ ನೀಡಲು ಪ್ರಯತ್ನಿಸುತ್ತಿದ್ದೇನೆ. ಮ್ಯಾಚ್ ಇದ್ದಾಗ ರನ್ ಗಳಿಸಲೇಬೇಕು. ಸರಿಯಾದ ಸಮಯದಲ್ಲಿ ಖಂಡಿತವಾಗಿಯೂ ರನ್ ಗಳಿಸುತ್ತೇನೆ. ನಾನು ರನ್ ಗಳಿಸಲು ಪ್ರಯತ್ನಿಸುತ್ತಿದ್ದೇನೆ. ಹಾಗಂತ ನಾನು ಔಟ್ ಆಫ್ ಫಾರ್ಮ್ ಆಗಿಲ್ಲ. ಆದರೆ ರನ್ ಗಳಿಸಲು ಪದೇ ಪದೇ ವಿಫಲವಾಗುತ್ತಿದ್ದೇನೆ. ನಾವು ಇಂದಿನ ಗೆಲುವನ್ನು ಸೆಲಿಬ್ರೇಟ್ ಮಾಡುತ್ತೇವೆ. ಇದಾದ ಬಳಿಕ ಲಖನೌದಲ್ಲಿ ನಡೆಯಲಿರುವ ಪಂದ್ಯದ ಬಗ್ಗೆ ಸಿದ್ದತೆ ಹಾಗೂ ರಣತಂತ್ರ ಹೆಣೆಯುತ್ತೇವೆ' ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

ಭರ್ಜರಿ ಕಮ್‌ಬ್ಯಾಕ್ ಮಾಡಿದ ಭಾರತ:

ಮುಲ್ಲಾನ್‌ಪುರದಲ್ಲಿ ನಡೆದ ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 51 ರನ್ ಅಂತರದ ಆಘಾತಕಾರಿ ಸೋಲು ಅನುಭವಿಸಿತ್ತು. ಹೀಗಾಗಿ ಮೂರನೇ ಪಂದ್ಯದಲ್ಲಿ ಭಾರತ ತಂಡವು ಕಮ್‌ಬ್ಯಾಕ್ ಮಾಡಲೇಬೇಕಾದ ಒತ್ತಡಕ್ಕೆ ಸಿಲುಕಿತ್ತು. ಮೂರನೇ ಪಂದ್ಯದಲ್ಲಿ ಮೊದಲು ಬೌಲರ್‌ಗಳು ಹಾಗೂ ಆ ಬಳಿಕ ಬ್ಯಾಟರ್‌ಗಳು ಅದ್ಭುತ ಪ್ರದರ್ಶನ ತೋರುವ ಮೂಲಕ ಭಾರತ ಸುಲಭವಾಗಿ ಗೆಲುವಿನ ನಗೆ ಬೀರಿತು.

ಮೊದಲು ಬೌಲಿಂಗ್ ಮಾಡಿದ ಟೀಂ ಇಂಡಿಯಾ, ಹರಿಣಗಳ ಪಡೆಯನ್ನು ಕೇವಲ 117 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಯಿತು. ಭಾರತ ಪರ ಅರ್ಶ್‌ದೀಪ್‌, ಹರ್ಷಿತ್‌, ಕುಲ್ದೀಪ್‌, ವರುಣ್‌ಗೆ ತಲಾ 2, ಹಾರ್ದಿಕ್‌, ದುಬೆಗೆ ತಲಾ 1 ವಿಕೆಟ್‌ ತಮ್ಮ ಬುಟ್ಟಿಗೆ ಹಾಕಿಕೊಂಡರು. ಇನ್ನು ಸಾಧಾರಣ ಗುರಿ ಬೆನ್ನತ್ತಿದ ಭಾರತಕ್ಕೆ ಅಭಿಷೇಕ್‌ ಶರ್ಮಾ ಸ್ಫೋಟಕ ಆರಂಭ ಒದಗಿಸಿದರು. 18 ಎಸೆತದಲ್ಲಿ 35 ರನ್‌ ಸಿಡಿಸಿದರು. ಗಿಲ್‌ 28 ಎಸೆತದಲ್ಲಿ 28, ತಿಲಕ್‌ ಔಟಾಗದೆ 24, ಸೂರ್ಯ 12, ದುಬೆ ಔಟಾಗದೆ 10 ರನ್‌ ಗಳಿಸಿ ತಂಡವನ್ನು ಜಯದ ದಡ ಸೇರಿಸಿದರು.