ಪುಣೆ[ಮೇ.05]: ಐಪಿಎಲ್‌'ನ ಬದ್ಧವೈರಿಗಳಾದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಈ ಆವೃತ್ತಿಯಲ್ಲಿ 2ನೇ ಬಾರಿಗೆ ಮುಖಾಮುಖಿಯಾಗುತ್ತಿವೆ.  ಇಲ್ಲಿನ ಎಂಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೆಣಸಲಿರುವ ತಂಡಗಳು, ಜಯದ ಮೇಲೆ ಕಣ್ಣಿಟ್ಟಿವೆ. ಕಳೆದ ಪಂದ್ಯದಲ್ಲಿ ಮುಂಬೈ ವಿರುದ್ಧ 14 ರನ್ ಗೆಲುವು ಸಾಧಿಸಿ, ಅಂಕಪಟ್ಟಿಯಲ್ಲಿ ಮೇಲೇರಿರುವ ಆರ್‌ಸಿಬಿ, ಪ್ಲೇ-ಆಫ್'ಗೇರಬೇಕಿದ್ದರೆ ಸೋಲು ತನ್ನತ್ತ ಸುಳಿಯುದಂತೆ ಎಚ್ಚರ ವಹಿಸಬೇಕಿದೆ. ಮತ್ತೊಂದೆಡೆ ಕಳೆದ 3 ಪಂದ್ಯಗಳಲ್ಲಿ 2ರಲ್ಲಿ ಸೋತಿರುವ ಚೆನ್ನೈ, ತನ್ನ ಲೆಕ್ಕಾಚಾರ ಸರಿ ಮಾಡಿಕೊಳ್ಳುವ ಒತ್ತಡಕ್ಕೆ ಸಿಲುಕಿದೆ. 
ನಿರಾಯಾಸವಾಗಿ ಅಗ್ರಸ್ಥಾನದಲ್ಲಿ ಕುಳಿತಿದ್ದ ಚೆನ್ನೈ, ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಸೋಲುಂಡಿದ್ದರಿಂದ 2ನೇ ಸ್ಥಾನಕ್ಕೆ ಕುಸಿದಿದೆ. ಆರ್‌'ಸಿಬಿಯನ್ನು ಹಣಿದು ಮತ್ತೆ ಅಗ್ರಸ್ಥಾನಕ್ಕೇರುವುದು ಎಂ.ಎಸ್.ಧೋನಿ ತಂಡದ ಮುಂದಿರುವ ಸವಾಲು. 8 ಪಂದ್ಯಗಳಲ್ಲಿ ಕೇವಲ 3ರಲ್ಲಿ ಗೆದ್ದು, 5ರಲ್ಲಿ ಸೋತಿರುವ ಆರ್‌'ಸಿಬಿ, ಒಂದೊಮ್ಮೆ ಈ ಪಂದ್ಯವನ್ನು ಸೋತರೆ ಪ್ಲೇ-ಆಫ್ ಹಾದಿ ಮತ್ತಷ್ಟು ಕಠಿಣಗೊಳ್ಳಲಿದೆ. ಆಗ ಇನ್ನುಳಿದ ಐದೂ ಪಂದ್ಯಗಳನ್ನು ತಂಡ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಲಿದೆ.
ಎಬಿಡಿ ವಾಪಸ್, ಹೆಚ್ಚಿದ ಆತ್ಮವಿಶ್ವಾಸ: ಜ್ವರದಿಂದಾಗಿ ಕಳೆದೆರಡು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ಎಬಿ ಡಿವಿಲಿಯರ್ಸ್‌, ಇಂದಿನ ಪಂದ್ಯದಲ್ಲಿ ಆಡಲು ಫಿಟ್ ಇದ್ದಾರೆ ಎಂದು ತಂಡದ ಪ್ರಧಾನ ಕೋಚ್ ಡೇನಿಯಲ್ ವೆಟ್ಟೋರಿ ಶುಕ್ರವಾರ ತಿಳಿಸಿದರು. ಎಬಿಡಿ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿದ್ದು, ಅವರ ಲಭ್ಯತೆ ಆರ್‌’ಸಿಬಿಯ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ವೈಯಕ್ತಿಕ ಕಾರಣಗಳಿಂದಾಗಿ ದಕ್ಷಿಣ ಆಫ್ರಿಕಾಕ್ಕೆ ತೆರಳಿರುವ ಕ್ವಿಂಟನ್ ಡಿ ಕಾಕ್ ಈ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಹೀಗಾಗಿ, ತಂಡದ ಆಯ್ಕೆಯಲ್ಲಿ ಹೆಚ್ಚಿನ ಗೊಂದಲ ಉಂಟಾಗುವುದಿಲ್ಲ ಎಂದು ಕೋಚ್ ವೆಟ್ಟೋರಿ ಹೇಳಿದ್ದಾರೆ. ಪಾರ್ಥೀವ್ ಪಟೇಲ್ ವಿಕೆಟ್
ಕೀಪರ್ ಸ್ಥಾನದಲ್ಲಿ ಆಡುವ ಸಂಭವವಿದೆ.
ಲಯ ಉಳಿಸಿಕೊಳ್ಳುತ್ತಾರಾ ಬೌಲರ್ಸ್‌?: ವಾಟ್ಸನ್, ಡುಪ್ಲೆಸಿ, ರೈನಾ, ರಾಯುಡು, ಧೋನಿ, ಬ್ರಾವೋರಂತಹ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಚೆನ್ನೈ ತಂಡವನ್ನು ಕಟ್ಟಿಹಾಕಬೇಕಿದ್ದರೆ, ಆರ್‌'ಸಿಬಿ ಬೌಲರ್‌’ಗಳು ಹೆಚ್ಚುವರಿ ಪರಿಶ್ರಮ ವಹಿಸಬೇಕಿದೆ. ಟಿಮ್ ಸೌಥಿ ಡೆತ್ ಓವರ್‌ಗಳಲ್ಲಿ ಸೊಗಸಾದ ಬೌಲಿಂಗ್ ಪ್ರದರ್ಶನ ತೋರಿದ್ದರು, ಅವರಿಗೆ ಉಮೇಶ್ ಯಾದವ್ ಹಾಗೂ ಮೊಹಮದ್ ಸಿರಾಜ್‌’ರಿಂದ ಬೆಂಬಲ ದೊರೆಯಬೇಕಿದೆ. ಪ್ರಮುಖ ಬೌಲರ್‌ಗಳಾದ ಉಮೇಶ್ ಹಾಗೂ ಯಜುವೇಂದ್ರ ಚಹಲ್‌’ರ ಸ್ಪೆಲ್’ಗಳನ್ನು ಕೊಹ್ಲಿ ಮುಂಚಿತವಾಗಿಯೇ ಮುಕ್ತಾಯಗೊಳಿಸುತ್ತಿದ್ದಾರೆ. ಕೊಹ್ಲಿ ನಾಯಕತ್ವದ ಬಗ್ಗೆ ಕೆಲ ಪ್ರಶ್ನೆಗಳು ಹುಟ್ಟಿಕೊಂಡಿದ್ದು, ಅದಕ್ಕೆ ತಕ್ಕ ಉತ್ತರ ನೀಡುವುದು ಅವರ ಮುಂದಿರುವ ಸವಾಲು.
ಸುಧಾರಿಸಬೇಕಿದೆ ಚೆನ್ನೈ ಬೌಲಿಂಗ್: ಸಂಘಟಿತ ಪ್ರದರ್ಶನದಿಂದ ಲೀಗ್ ಆರಂಭದಲ್ಲಿ ರೋಚಕ ಗೆಲುವುಗಳನ್ನು ಕಾಣುತ್ತಾ ಬಂದ ಚೆನ್ನೈ, ನಿರ್ಣಾಯಕ ಹಂತದಲ್ಲಿ ದೊಡ್ಡ ಸಮಸ್ಯೆಯೊಂದಿಗೆ ಸಿಲುಕಿದೆ. ತಂಡದ ಬ್ಯಾಟ್ಸಮನ್‌’ಗಳ ಅಮೋಘ ಲಯದಲ್ಲಿದ್ದರೂ, ಬೌಲರ್‌ಗಳ ಅಸ್ಥಿರ ಪ್ರದರ್ಶನ ಧೋನಿಗೆ ತಲೆ ನೋವು ತಂದಿದೆ. ಲುಂಗಿ ಎನ್‌’ಗಿಡಿ, ಕೆ.ಎಂ.ಆಸಿಫ್, ಹರ್ಭಜನ್ ಸಿಂಗ್, ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ ಹಾಗೂ ಕರ್ಣ್ ಶರ್ಮಾ ಮೇಲೆ ಒತ್ತಡ ಹೆಚ್ಚಾಗಿದೆ. ಕಳೆದ ಪಂದ್ಯದಲ್ಲಿ ಜಡೇಜಾರಂತಹ ಶ್ರೇಷ್ಠ ಫೀಲ್ಡರ್ ಎರಡು ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ಸಹ ತಂಡಕ್ಕೆ ಹಿನ್ನಡೆ ಉಂಟು ಮಾಡಿತ್ತು.