ವಿಶ್ವಪ್ರಸಿದ್ಧ ಫುಟ್‌ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೋ ತಮ್ಮ ದೀರ್ಘಕಾಲದ ಗೆಳತಿ ಜಾರ್ಜಿನಾ ರೋಡ್ರಿಗಸ್ ಅವರನ್ನು ಗುಟ್ಟಾಗಿ ವಿವಾಹವಾಗಿದ್ದಾರೆ. ಪೋರ್ಚುಗಲ್‌ನಲ್ಲಿರುವ ತಮ್ಮ ₹270 ಕೋಟಿ ಮೌಲ್ಯದ ಹೊಸ ಐಷಾರಾಮಿ ವಿಲ್ಲಾದಲ್ಲಿ, ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ಈ ಖಾಸಗಿ ಸಮಾರಂಭ ನಡೆದಿದೆ.
ಬೆಂಗಳೂರು (ಆ.17): ವಿಶ್ವಪ್ರಸಿದ್ಧ ಫುಟ್‌ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೋ (Cristiano Ronaldo) ಹಾಗೂ ಅವರ ದೀರ್ಘಕಾಲದ ಗೆಳತಿ ಜಾರ್ಜಿನಾ ರೋಡ್ರಿಗಸ್ (Georgina Rodriguez) ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುಮಾರು 10 ವರ್ಷಗಳ ಸುದೀರ್ಘ ಪ್ರೇಮ ಜೀವನದ ನಂತರ ಈ ಜೋಡಿ ಅಚ್ಚರಿಯ ರೀತಿಯಲ್ಲಿ ಸರಳ ಹಾಗೂ ಅತ್ಯಂತ ಖಾಸಗಿಯಾಗಿ ಮದುವೆಯಾಗಿದ್ದಾರೆ. ಯಾವುದೇ ಐಷಾರಾಮಿ ಹೋಟೆಲ್ ಅಥವಾ ಅರಮನೆಯಲ್ಲಿ ಮದುವೆಯಾಗುವ ಬದಲಾಗಿ, ಪೋರ್ಚುಗಲ್‌ನಲ್ಲಿರುವ ತಮ್ಮದೇ ಆದ ಹೊಸ ಅಲ್ಟ್ರಾ-ಲಕ್ಸುರಿ ವಿಲ್ಲಾವನ್ನು ಈ ಶುಭ ಕಾರ್ಯಕ್ಕೆ ಆಯ್ಕೆ ಮಾಡಿಕೊಂಡಿರುವುದು ವಿಶೇಷ.
ರೊನಾಲ್ಡೋ ಮತ್ತು ಜಾರ್ಜಿನಾ ಆಗಸ್ಟ್ 11 ರಂದು ಅತ್ಯಂತ ಖಾಸಗಿ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆಗಸ್ಟ್ 11ರ ದಿನಾಂಕ ಈ ಜೋಡಿಗೆ ಅತ್ಯಂತ ವಿಶೇಷವಾಗಿದೆ, ಏಕೆಂದರೆ ಸರಿಯಾಗಿ 10 ವರ್ಷಗಳ ಹಿಂದೆ, ಅಂದರೆ 2016ರ ಆಗಸ್ಟ್ 11 ರಂದೇ ಇವರಿಬ್ಬರ ಮೊದಲ ಭೇಟಿಯಾಗಿತ್ತು. ಈ ಮದುವೆ ಸಮಾರಂಭವನ್ನು ಸಂಪೂರ್ಣ ರಹಸ್ಯವಾಗಿಡಲಾಗಿತ್ತು. ಕಾರ್ಯಕ್ರಮದಲ್ಲಿ ರೊನಾಲ್ಡೋ ದಂಪತಿಯ 5 ಮಕ್ಕಳು ಹಾಗೂ ಕೇವಲ 4 ಅತ್ಯಂತ ಆಪ್ತ ಸಾಕ್ಷಿಗಳು ಮಾತ್ರ ಉಪಸ್ಥಿತರಿದ್ದರು.
₹270 ಕೋಟಿಗೂ ಅಧಿಕ ಮೌಲ್ಯದ ಭವ್ಯ ನಿವಾಸ!
ಪೋರ್ಚುಗಲ್‌ನ 'ಕಾಸ್ಕೈಸ್' (Cascais) ನಗರದಲ್ಲಿರುವ ಕ್ರಿಸ್ಟಿಯಾನೋ ರೊನಾಲ್ಡೋ ಅವರ ಈ ಭವ್ಯ ಬಂಗಲೆಯು ಇಡೀ ಪೋರ್ಚುಗಲ್ ದೇಶದಲ್ಲೇ ಅತ್ಯಂತ ದುಬಾರಿ ಮನೆ ಎಂದು ಪರಿಗಣಿಸಲ್ಪಟ್ಟಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ಆಸ್ತಿಯ ಒಟ್ಟು ಮೌಲ್ಯ ಬರೋಬ್ಬರಿ ₹270 ಕೋಟಿಗೂ (270 Crores) ಅಧಿಕ. ಈ ಬಂಗಲೆಯು ಸುಮಾರು 12,000 ಚದರ ಮೀಟರ್ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ.
ಸುಸಜ್ಜಿತ ಬಂಗಲೆಯಲ್ಲೇನಿದೆ?
ರೊನಾಲ್ಡೋ ಅವರ ಈ ಕನಸಿನ ಅರಮನೆಯಲ್ಲಿ ಆಧುನಿಕ ಜೀವನಶೈಲಿಗೆ ಬೇಕಾದ ಪ್ರತಿಯೊಂದು ಸೌಲಭ್ಯವೂ ಇದೆ. ಬಂಗಲೆಯಲ್ಲಿ ಎರಡು ಬೃಹತ್ ಈಜುಗೊಳಗಳು (Swimming Pools), ಅತ್ಯಾಧುನಿಕ ಜಿಮ್ (Gym), ಪ್ರೈವೇಟ್ ಸ್ಪಾ (Spa) ಮತ್ತು ಇನ್-ಹೌಸ್ ಸ್ಕ್ರೀನಿಂಗ್ ರೂಮ್ (ಚಿತ್ರಮಂದಿರ) ವ್ಯವಸ್ಥೆಯಿದೆ. ಈ ದಂಪತಿಯ ಮಾಸ್ಟರ್ ಬೆಡ್‌ರೂಮ್ ಒಂದೇ ಬರೋಬ್ಬರಿ 300 ಚದರ ಮೀಟರ್ ವಿಸ್ತೀರ್ಣದಲ್ಲಿ ವಿನ್ಯಾಸಗೊಳಿಸಲಾಗಿದೆ. ಮನೆಯ ಇಂಟೀರಿಯರ್ ಅನ್ನು ವಿಶ್ವದ ಅತ್ಯುತ್ತಮ ವಸ್ತುಗಳು ಮತ್ತು ಕಸ್ಟಮ್-ಡಿಸೈನ್ ಪೀಠೋಪಕರಣಗಳಿಂದ ಅಲಂಕರಿಸಲಾಗಿದೆ. ಈ ಐಷಾರಾಮಿ ಬಂಗಲೆಯ ಕೆಳಭಾಗದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಸೂಪರ್‌ಕಾರ್‌ಗಳಿಂದ ತುಂಬಿದ ಬೃಹತ್ ಗ್ಯಾರೇಜ್ ಇದೆ. ಮನೆಯ ಸುತ್ತಲೂ ಹರಡಿರುವ ಸುಂದರ ಲ್ಯಾಂಡ್‌ಸ್ಕೇಪ್ ಗಾರ್ಡನ್‌ಗಳು ಮತ್ತು ಎತ್ತರದ ಗೋಡೆಗಳು ಈ ಮನೆಗೆ ಸಂಪೂರ್ಣ ಖಾಸಗಿತನವನ್ನು (Privacy) ನೀಡುತ್ತವೆ.


