ನವದೆಹಲಿ[ಜು.25]: ಕ್ರಿಕೆಟ್‌ ಮೈದಾನದಲ್ಲಿ ರನ್‌ ಹೊಳೆ ಹರಿಸುತ್ತಿರುವ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ, ಸಂಭಾವನೆ ಗಳಿಕೆಯಲ್ಲೂ ದಾಖಲೆಗಳ ಸೃಷ್ಟಿಸುತ್ತಿದ್ದು ಅವರು ಇನ್‌ಸ್ಟಾಗ್ರಾಂನಲ್ಲಿ ಮಾಡುವ ಪ್ರತಿ ಪೋಸ್ಟ್‌ಗೆ ಸುಮಾರು 1.35 ಕೋಟಿ ರುಪಾಯಿ ಲಭಿಸುತ್ತಿದೆಯಂತೆ.

ವಿಂಡೀಸ್ ಟೂರ್‌ನಿಂದ ವಿಶ್ರಾಂತಿ ಬಯಸಿದ್ದ ಕೊಹ್ಲಿ; ದಿಢೀರ್ ನಿರ್ಧಾರ ಬದಲು!

ಜನಪ್ರಿಯ ಜಾಲತಾಣವಾಗಿರುವ ಇನ್‌ಸ್ಟಾಗ್ರಾಂನಲ್ಲಿ ಅತಿಹೆಚ್ಚು ಆದಾಯ ಗಳಿಸುವ ಸೆಲಿಬ್ರಿಟಿಗಳ ಪಟ್ಟಿಯನ್ನು Hopperhq.com ಬುಧವಾರ ಪ್ರಕಟಿಸಿದೆ. ಒಟ್ಟಾರೆ ಪಟ್ಟಿಯಲ್ಲಿ ವಿರಾಟ್‌ 23ನೇ ಸ್ಥಾನ ಪಡೆದುಕೊಂಡಿದ್ದಾರೆ. ವಿರಾಟ್‌ ಹೊರತು ಪಡಿಸಿ ನಟಿ ಪ್ರಿಯಾಂಕ ಚೋಪ್ರಾ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, 19ನೇ ಸ್ಥಾನದಲ್ಲಿದ್ದಾರೆ. ಪ್ರಿಯಾಂಕರ ಪ್ರತಿ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ 1.86 ಕೋಟಿ ರುಪಾಯಿ ಲಭಿಸಲಿದೆ. ವಿರಾಟ್‌ ಹಾಗೂ ಪ್ರಿಯಾಂಕ ಹೊರತು ಪಡಿಸಿ ಇನ್ಯಾವ ಭಾರತೀಯರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.

"

ಇನ್ನು ಇನ್‌ಸ್ಟಾಗ್ರಾಂ ಅಗ್ರ 10 ಶ್ರೀಮಂತ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ 9ನೇ ಸ್ಥಾನ ಪಡೆದುಕೊಂಡಿದ್ದು, ಇದರೊಂದಿಗೆ ಅಗ್ರ 10ರೊಳಗೆ ಕಾಣಿಸಿಕೊಂಡ ಏಕೈಕ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಟೀಂ ಇಂಡಿಯಾ ನಾಯಕ ಪಾತ್ರರಾಗಿದ್ದಾರೆ. ಕೊಹ್ಲಿ ವಿವಿಧ ಬ್ರ್ಯಾಂಡ್‌ಗಳ ಪ್ರಚಾರ ಸಲುವಾಗಿ ಪ್ರಕಟಿಸುವ ಒಂದೊಂದು ಫೋಟೋಗಳಿಗೆ ಕೋಟಿಗಟ್ಟಲೇ ಸಂಭಾವನೆ ಪಡೆಯುತ್ತಿದ್ದಾರೆ.

ವಿಶ್ವ ಶ್ರೇಷ್ಠ ಫುಟ್ಬಾಲಿಗ ಪೋರ್ಚುಗಲ್‌ ತಂಡದ ಕ್ರಿಸ್ಟಿಯಾನೊ ರೊನಾಲ್ಡೊ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅಗ್ರ 10ರಲ್ಲಿ ಮೊದಲ ನಾಲ್ಕು ಸ್ಥಾನದಲ್ಲಿ ಫುಟ್ಬಾಲ್‌ ಆಟಗಾರರಿದ್ದಾರೆ. 2ನೇ ಸ್ಥಾನದಲ್ಲಿ ನೇಯ್ಮಾರ್‌, ಲಯೋನೆಲ್‌ ಮೆಸ್ಸಿ 3, ಡೇವಿಡ್‌ ಬೆಕ್ಹಾಮ್‌ 4ನೇ ಸ್ಥಾನ ಹೊಂದಿದ್ದಾರೆ. ಅಮೆರಿಕದ ಬಾಸ್ಕೆಟ್‌ಬಾಲ್‌ ಆಟಗಾರ ಲೆಬರಾನ್‌ ಜೇಮ್ಸ್‌ 5ನೇ ಸ್ಥಾನ ಪಡೆದಿದ್ದಾರೆ.