ಬ್ಯಾಂಕಾಕ್‌[ಮಾ.04]: ಏಷ್ಯನ್‌ ಗೇಮ್ಸ್‌ಗೆ ಕ್ರಿಕೆಟ್‌ ಮರು ಸೇರ್ಪಡೆಗೊಂಡಿದೆ. 2022ರಲ್ಲಿ ಚೀನಾದ ಹಾಂಗ್ಝು ನಲ್ಲಿ ನಡೆಯಲಿರುವ ಏಷ್ಯಾಡ್‌ನಲ್ಲಿ ಕ್ರಿಕೆಟ್‌ ಸೇರ್ಪಡೆಗೊಳಿಸಲು ಏಷ್ಯಾ ಒಲಿಂಪಿಕ್ಸ್‌ ಸಮಿತಿ (ಒಸಿಎ) ತನ್ನ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಿದೆ.

ಏಷ್ಯಾಡ್ ಪದಕ ವಿಜೇತರಿಗೆ ಮೋದಿ ಅಭಿನಂದನೆ

2010 ಹಾಗೂ 2014ರ ಏಷ್ಯನ್‌ ಗೇಮ್ಸ್‌ನಲ್ಲಿ ಕ್ರಿಕೆಟ್‌ ಸ್ಪರ್ಧೆ ನಡೆದಿತ್ತು. ಆದರೆ ಭಾರತ ತಂಡ ಪಾಲ್ಗೊಂಡಿರಲಿಲ್ಲ. 2018ರ ಜಕಾರ್ತ ಗೇಮ್ಸ್‌ನಿಂದ ಕ್ರಿಕೆಟ್‌ ತೆಗೆದು ಹಾಕಲಾಗಿತ್ತು. ಬಿಡುವಿಲ್ಲದ ವೇಳಾಪಟ್ಟಿಯ ಕಾರಣ ನೀಡಿ ಬಿಸಿಸಿಐ, ಏಷ್ಯನ್‌ ಗೇಮ್ಸ್‌ಗೆ ಭಾರತ ಕ್ರಿಕೆಟ್‌ ತಂಡವನ್ನು ಕಳುಹಿಸಿರಲಿಲ್ಲ. 2010, 2014ರಲ್ಲಿ ಟಿ20 ಮಾದರಿಯನ್ನು ಅನುಸರಿಸಲಾಗಿತ್ತು. 2022ರಲ್ಲೂ ಟಿ20 ಪಂದ್ಯಗಳನ್ನೇ ನಡೆಸುವ ಸಾಧ್ಯತೆ ಇದೆ. 2010ರಲ್ಲಿ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ತಂಡಗಳು ಕ್ರಮವಾಗಿ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಚಿನ್ನ ಜಯಿಸಿದ್ದವು. 2014ರಲ್ಲಿ ಶ್ರೀಲಂಕಾ ಪುರುಷರ ತಂಡ ಚಿನ್ನ ಗೆದ್ದರೆ, ಮಹಿಳಾ ವಿಭಾಗದಲ್ಲಿ ಪಾಕಿಸ್ತಾನ ಚಿನ್ನ ಗಳಿಸಿತ್ತು.

ಬಿಸಿಸಿಐಗೆ ಐಸಿಸಿಯಿಂದ 150 ಕೋಟಿ ರುಪಾಯಿ ತೆರಿಗೆ ಹೊರೆ!

ಐಒಎ ಸ್ವಾಗತ: 2022ರ ಏಷ್ಯಾಡ್‌ಗೆ ಕ್ರಿಕೆಟ್‌ ಸೇರ್ಪಡೆಗೊಳಿಸಿರುವುದನ್ನು ಭಾರತೀಯ ಒಲಿಂಪಿಕ್ಸ್‌ ಸಮಿತಿ (ಐಒಎ) ಸ್ವಾಗತಿಸಿದೆ. ಭಾರತ ತಂಡವನ್ನು ಕೂಟದಲ್ಲಿ ಪಾಲ್ಗೊಳ್ಳಲು ಕಳುಹಿಸುವಂತೆ ಬಿಸಿಸಿಐಗೆ ಮನವಿ ಮಾಡಲು ಐಒಎ ನಿರ್ಧರಿಸಿದೆ. ‘ಏಷ್ಯಾಡ್‌ಗೆ ಭಾರತ ತಂಡವನ್ನು ಕಳುಹಿಸುವಂತೆ ಬಿಸಿಸಿಐಗೆ ಮನವಿ ಸಲ್ಲಿಸಲಿದ್ದೇವೆ. ಭಾರತ, ಪುರುಷ ಹಾಗೂ ಮಹಿಳಾ ವಿಭಾಗಗಳೆರಡರಲ್ಲೂ ಪದಕ ಗೆಲ್ಲುವ ಸಾಮರ್ಥ್ಯ ಹೊಂದಿದೆ. ಇದದಿಂದ ಭಾರತದ ಪದಕ ಸಂಖ್ಯೆ ಸಹ ಹೆಚ್ಚಲಿದೆ’ ಎಂದು ಐಒಸಿ ಪ್ರಧಾನ ಕಾರ್ಯದರ್ಶಿ ರಾಜೀವ್‌ ಮೆಹ್ತಾ ಹೇಳಿದ್ದಾರೆ.