ವಿಶಾಖಪಟ್ಟಣಂ[ಫೆ.24]: ಐಸಿಸಿ ಏಕದಿನ ವಿಶ್ವಕಪ್‌ಗೆ 3 ತಿಂಗಳು ಮಾತ್ರ ಬಾಕಿ ಇದ್ದು, ಭಾರತ ತಂಡ ಉಳಿದಿರುವ ಸಮಯದಲ್ಲಿ ತನ್ನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪಣತೊಟ್ಟಿದೆ. ಇಂದಿನಿಂದ ಆಸ್ಪ್ರೇಲಿಯಾ ವಿರುದ್ಧದ ಸರಣಿ ಆರಂಭಗೊಳ್ಳಲಿದ್ದು, ವಿಶಾಖಪಟ್ಟಣಂನಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದೆ. 2 ಟಿ20 ಹಾಗೂ 5 ಏಕದಿನ ಪಂದ್ಯಗಳು ನಡೆಯಲಿದ್ದು, ವಿಶ್ವಕಪ್‌ಗೂ ಮುನ್ನ ಕೊನೆ ಅಂತಾರಾಷ್ಟ್ರೀಯ ಸರಣಿ ಇದಾಗಿರುವ ಕಾರಣ ಕುತೂಹಲ ಹೆಚ್ಚಾಗಿದೆ.

ಆಸಿಸ್ ಸರಣಿಗೆ ಹೊಸ ಲುಕ್’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಟೀಂ ಇಂಡಿಯಾ ಕ್ರಿಕೆಟಿಗರು

ಕೇವಲ ಎರಡು ಸ್ಥಾನಗಳನ್ನು ಹೊರತುಪಡಿಸಿ ವಿಶ್ವಕಪ್‌ ತಂಡದ ಇನ್ನೆಲ್ಲಾ ಸ್ಥಾನಗಳು ಖಾತರಿಯಾಗಿವೆ. ನಾಯಕ ವಿರಾಟ್‌ ಕೊಹ್ಲಿ ಹಾಗೂ ಕೋಚ್‌ ರವಿಶಾಸ್ತ್ರಿ ಮೀಸಲು ಆರಂಭಿಕ ಹಾಗೂ 4ನೇ ವೇಗಿಯ ಸ್ಥಾನವನ್ನು ಯಾರಿಗೆ ನೀಡಬೇಕು ಎನ್ನುವುದನ್ನು ನಿರ್ಧರಿಸಲಿದ್ದಾರೆ.

3 ವಾರಗಳ ವಿಶ್ರಾಂತಿ ಬಳಿಕ ವಿರಾಟ್‌ ತಂಡಕ್ಕೆ ಮರಳಿದ್ದಾರೆ. ಯುವ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಹಾಗೂ ತಮಿಳುನಾಡು ಆಲ್ರೌಂಡರ್‌ ವಿಜಯ್‌ ಶಂಕರ್‌ ಮೇಲೆ ಕೊಹ್ಲಿ ಕಣ್ಣಿಟ್ಟಿದ್ದಾರೆ. ಈ ಇಬ್ಬರು ಆಟಗಾರರು ವಿಶ್ವಕಪ್‌ ತಂಡದಲ್ಲಿ ಸ್ಥಾನ ಗಿಟ್ಟಿಸುವ ವಿಶ್ವಾಸದಲ್ಲಿದ್ದಾರೆ. ಬೆನ್ನು ನೋವಿನ ಕಾರಣ, ಹಾರ್ದಿಕ್‌ ಪಾಂಡ್ಯ ಸರಣಿಯಿಂದ ಹೊರಬಿದ್ದಿರುವುದು ವಿಜಯ್‌ ಶಂಕರ್‌ ಪಾಲಿಗೆ ವರದಾನವಾಗಲಿದೆ. ತಮ್ಮ ಆಯ್ಕೆ ಸಮರ್ಥಿಸಿಕೊಳ್ಳಲು ಯುವ ಆಲ್ರೌಂಡರ್‌ಗಿದು ಅತ್ಯುತ್ತಮ ಅವಕಾಶವಾಗಿದೆ.

ಪಾಕ್ ವಿರುದ್ಧ ವಿಶ್ವಕಪ್: ಕೊನೆಗೂ ತುಟಿಬಿಚ್ಚಿದ ವಿರಾಟ್ ಕೊಹ್ಲಿ

ನ್ಯೂಜಿಲೆಂಡ್‌ನಲ್ಲಿ ತಮ್ಮ ಬ್ಯಾಟಿಂಗ್‌ ಸಾಮರ್ಥ್ಯ ಸಾಬೀತು ಪಡಿಸಿದ್ದ ವಿಜಯ್‌ ಶಂಕರ್‌, ತಾವೊಬ್ಬ ಪರಿಣಾಮಕಾರಿ ಬೌಲರ್‌ ಕೂಡ ಹೌದು ಎನ್ನುವುದನ್ನು ಪ್ರದರ್ಶಿಸಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ವಿಶ್ವಕಪ್‌ ತಂಡದಲ್ಲಿ ಬುಮ್ರಾ, ಭುವನೇಶ್ವರ್‌, ಶಮಿ, ಹಾರ್ದಿಕ್‌ ಪಾಂಡ್ಯ ಜತೆ ವಿಜಯ್‌ ಶಂಕರ್‌ ಸಹ ಬೌಲಿಂಗ್‌ನಲ್ಲಿ ನೆರವು ನೀಡಿದರೆ ಭಾರತ ತಂಡದ ಬಲ ಹೆಚ್ಚಲಿದೆ.

ಮತ್ತೊಂದೆಡೆ ರಿಷಭ್‌ ಪಂತ್‌ಗೂ ಸಹ ಇದು ಸುವರ್ಣಾವಕಾಶವಾಗಿದೆ. ಮೀಸಲು ವಿಕೆಟ್‌ ಕೀಪರ್‌ ಮಾತ್ರವಲ್ಲದೆ ಮೀಸಲು ಆರಂಭಿಕನ ಸ್ಥಾನವನ್ನು ಪಂತ್‌ ತಮ್ಮದಾಗಿಸಿಕೊಳ್ಳಬಹುದು. ಮಧ್ಯಮ ಕ್ರಮಾಂಕದಲ್ಲೂ ಆಡುವ ಸಾಮರ್ಥ್ಯ ಹೊಂದಿರುವ ದೆಹಲಿ ಆಟಗಾರ, ಆಕ್ರಮಣಕಾರಿ ಆಟದ ಜತೆ ಸ್ವಲ್ಪ ತಾಳ್ಮೆ ಸಹ ಪ್ರದರ್ಶಿಸಬೇಕಿದೆ.

ಭಾರತದ ನಂ.1 ವೇಗಿ ಜಸ್ಪ್ರೀತ್‌ ಬುಮ್ರಾ ವಿಶ್ರಾಂತಿ ಬಳಿಕ ತಂಡಕ್ಕೆ ಮರಳಿದ್ದು, ಬೌಲಿಂಗ್‌ ವಿಭಾಗವನ್ನು ಮುನ್ನಡೆಸಲಿದ್ದಾರೆ. ವಿಶ್ವಕಪ್‌ ತಂಡದಲ್ಲಿ 4ನೇ ವೇಗಿ ಸ್ಥಾನವನ್ನು ಪಡೆಯಲು ಸಿದ್ಧಾರ್ಥ್ ಕೌಲ್‌, ಉಮೇಶ್‌ ಯಾದವ್‌ ಸಹ ಪೈಪೋಟಿಯಲ್ಲಿದ್ದಾರೆ.

ಪಂಜಾಬ್‌ನ ಯುವ ಲೆಗ್‌ ಸ್ಪಿನ್ನರ್‌ ಮಯಾಂಕ್‌ ಮರ್ಕಂಡೆ ತಂಡ ಕೂಡಿಕೊಂಡಿದ್ದರೂ, ಯಜುವೇಂದ್ರ ಚಹಲ್‌ ಹಾಗೂ ಕೃನಾಲ್‌ ಪಾಂಡ್ಯರನ್ನು ಸ್ಪಿನ್ನರ್‌ಗಳಾಗಿ ಬಳಸಿಕೊಳ್ಳಲು ಕೊಹ್ಲಿ ನಿರ್ಧರಿಸುವುದು ಬಹುತೇಕ ಖಚಿತ.

ಒತ್ತಡದಲ್ಲಿ ಆಸ್ಪ್ರೇಲಿಯಾ: ಸ್ಟೀವ್‌ ಸ್ಮಿತ್‌ ಹಾಗೂ ಡೇವಿಡ್‌ ವಾರ್ನರ್‌ ಇಲ್ಲದೆ ಆಸ್ಪ್ರೇಲಿಯಾ ತಂಡ ಸಮಸ್ಯೆಯ ಸಾಗರದಲ್ಲಿ ಮುಳುಗಿದೆ. ಮುಂಚೂಣಿ ವೇಗಿ ಮಿಚೆಲ್‌ ಸ್ಟಾರ್ಕ್ ಕೂಡ ಪದೇ ಪದೇ ಗಾಯಾಳುವಾಗುತ್ತಿದ್ದಾರೆ. ವಿಶ್ವಕಪ್‌ ಮುಂದಿಟ್ಟುಕೊಂಡು ವಿಶ್ವ ಚಾಂಪಿಯನ್‌ ಆಸ್ಪ್ರೇಲಿಯಾ ಲಯಕ್ಕೆ ಮರಳಲು ಪರದಾಡುತ್ತಿದೆ. ಆ್ಯರೋನ್‌ ಫಿಂಚ್‌ ತಂಡವನ್ನು ಮುನ್ನಡೆಸಲಿದ್ದು, ಬಿಗ್‌ಬ್ಯಾಶ್‌ ಲೀಗ್‌ನಲ್ಲಿ ಆಡಿದ 6 ಆಟಗಾರರು ತಂಡದಲ್ಲಿದ್ದಾರೆ. ಅನನುಭವಿ ಬೌಲಿಂಗ್‌ ಪಡೆ ಕಾಂಗರೂಗಳಿಗೆ ಕಂಟಕವಾಗಬಹುದು.

ತಂಡಗಳ ವಿವರ

ಭಾರತ: ವಿರಾಟ್‌ ಕೊಹ್ಲಿ(ನಾಯಕ), ರೋಹಿತ್‌ ಶರ್ಮಾ, ಕೆ.ಎಲ್‌.ರಾಹುಲ್‌, ಶಿಖರ್‌ ಧವನ್‌, ರಿಷಭ್‌ ಪಂತ್‌, ದಿನೇಶ್‌ ಕಾರ್ತಿಕ್‌, ಎಂ.ಎಸ್‌.ಧೋನಿ, ಕೃನಾಲ್‌ ಪಾಂಡ್ಯ, ವಿಜಯ್‌ ಶಂಕರ್‌, ಯುಜುವೇಂದ್ರ ಚಹಲ್‌, ಜಸ್ಪ್ರೀತ್‌ ಬುಮ್ರಾ, ಉಮೇಶ್‌ ಯಾದವ್‌, ಸಿದ್ಧಾಥ್‌ರ್‍ ಕೌಲ್‌, ಮಯಾಂಕ್‌ ಮರ್ಕಂಡೆ.

ಆಸ್ಪ್ರೇಲಿಯಾ: ಆ್ಯರೋನ್‌ ಫಿಂಚ್‌ (ನಾಯಕ), ಡಾರ್ಚಿ ಶಾರ್ಟ್‌, ಅಲೆಕ್ಸ್‌ ಕಾರ್ರಿ, ಪೀಟರ್‌ ಹ್ಯಾಂಡ್ಸ್‌ಕಂಬ್‌, ಉಸ್ಮಾನ್‌ ಖವಾಜ, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮಾರ್ಕಸ್‌ ಸ್ಟೋಯ್ನಿಸ್‌, ಪ್ಯಾಟ್‌ ಕಮಿನ್ಸ್‌, ಜೇಸನ್‌ ಬೆರ್ಹೆನ್‌ಡೊಫ್‌ರ್‍, ನೇಥನ್‌ ಕೌಲ್ಟರ್‌ ನೈಲ್‌, ಕೇನ್‌ ರಿಚರ್ಡ್‌ಸನ್‌, ಆ್ಯಸ್ಟನ್‌ ಟರ್ನರ್‌, ಜಾಯಿ ರಿಚರ್ಡ್‌ಸನ್‌, ಆ್ಯಡಂ ಜಂಪಾ.

ಪಂದ್ಯ ಆರಂಭ: ಸಂಜೆ 7ಕ್ಕೆ, 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್