ಸಿಡ್ನಿ[ಏ.15]: ಹಾಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಗೆ 15 ಆಟಗಾರರನ್ನೊಳಗೊಂಡ ಬಲಿಷ್ಠ ತಂಡವನ್ನು ಪ್ರಕಟಿಸಿದ್ದು, ನಿಷೇಧಕ್ಕೆ ಗುರಿಯಾಗಿದ್ದ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ತಂಡ ಕೂಡಿಕೊಂಡಿದ್ದು, ಆ್ಯರೋನ್ ಫಿಂಚ್ ತಂಡವನ್ನು ಮುನ್ನಡೆಸಲಿದ್ದಾರೆ.

ಟ್ರಾವೆಲ್ ಹ್ಯಾನ್ಸ್ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯು ಅಳೆದು ತೂಗಿ ತಂಡವನ್ನು ಪ್ರಕಟ ಮಾಡಿದೆ. ಬಾಲ್ ಟ್ಯಾಂಪರಿಂಗ್ ಮಾಡಿ 12 ತಿಂಗಳು ನಿಷೇಧಕ್ಕೆ ಗುರಿಯಾಗಿದ್ದ ಮಾಜಿ ನಾಯಕ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಅಲೆಕ್ಸ್ ಕೆರ್ರಿ ಆಸಿಸ್ ತಂಡದ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಇನ್ನು ಜೋಸ್ ಹ್ಯಾಜಲ್’ವುಡ್ ಹಾಗೂ ಪೀಟರ್ ಹ್ಯಾಂಡ್ಸ್’ಕಂಬ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ.

ಏಕದಿನ ವಿಶ್ವಕಪ್ ಟೂರ್ನಿಗೆ ಬಲಿಷ್ಠ ತಂಡ ಪ್ರಕಟಿಸಿದ ನ್ಯೂಜಿಲೆಂಡ್

ಬ್ಯಾಟಿಂಗ್ ವಿಭಾಗದಲ್ಲಿ ಅನುಭವಿ ಫಿಂಚ್, ಉಸ್ಮಾನ್ ಖವಾಜ, ಡೇವಿಡ್ ವಾರ್ನರ್, ಶಾನ್ ಮಾರ್ಶ್, ಸ್ಟೀವ್ ಸ್ಮಿತ್ ಜವಾಬ್ದಾರಿ ಹೊರಲಿದ್ದಾರೆ. ಇನ್ನು ಆಲ್ರೌಂಡರ್ ವಿಭಾಗದಲ್ಲಿ ಮಾರ್ಕಸ್ ಸ್ಟೋಯ್ನಿಸ್, ಗ್ಲೇನ್ ಮ್ಯಾಕ್ಸ್’ವೆಲ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಸ್ಟಾರ್ಕ್, ರಿಚರ್ಡ್’ಸನ್, ಬೆಹ್ರನ್’ಡ್ರಾಪ್, ಕೌಲ್ಡರ್ ನೈಲ್, ಕಮ್ಮಿನ್ಸ್, ಲಯನ್ ಹಾಗೂ ಜಂಪಾ ಸ್ಥಾನ ಪಡೆದಿದ್ದಾರೆ.

5 ಬಾರಿ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿರುವ ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್’ನಲ್ಲಿ ನಡೆಯಲಿರುವ 12ನೇ ಆವೃತ್ತಿಯ ವಿಶ್ವಕಪ್ ಟೂರ್ನಿಯಲ್ಲಿ 6ನೇ ಬಾರಿಗೆ ಕಪ್ ಎತ್ತಿಹಿಡಿಯುವ ನಿರೀಕ್ಷೆಯಲ್ಲಿದೆ. ಕಾಂಗರೂ ಪಡೆಯು ಜೂನ್ 01ರಂದು ಆಫ್ಘಾನಿಸ್ತಾನದ ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. 

ಆಸ್ಟ್ರೇಲಿಯಾ ತಂಡ ಹೀಗಿದೆ: 

ಆ್ಯರೋನ್ ಫಿಂಚ್[ನಾಯಕ], ಉಸ್ಮಾನ್ ಖವಾಜ, ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಶಾನ್ ಮಾರ್ಶ್, ಗ್ಲೇನ್ ಮ್ಯಾಕ್ಸ್’ವೆಲ್, ಮಾರ್ಕಸ್ ಸ್ಟೋಯ್ನಿಸ್, ಅಲೆಕ್ಸ್ ಕೆರ್ರಿ, ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಜೇ ರಿಚರ್ಡ್’ಸನ್, ನಾಥನ್ ಕೌಲ್ಡರ್’ನೀಲ್, ಜೇಸನ್ ಬೆಹ್ರನ್’ಡ್ರಾಪ್, ನೇಥನ್ ಲಯನ್, ಆ್ಯಡಂ ಜಂಪಾ.