ಏಕದಿನ ವಿಶ್ವಕಪ್ ಟೂರ್ನಿಗೆ ಬಲಿಷ್ಠ ತಂಡ ಪ್ರಕಟಿಸಿದ ನ್ಯೂಜಿಲೆಂಡ್
ಹಾಲಿ ಏಕದಿನ ವಿಶ್ವಕಪ್ ರನ್ನರ್’ಅಪ್ ನ್ಯೂಜಿಲೆಂಡ್ ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಗೆ 15 ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಲಾಗಿದೆ. ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ನೀವೇ ನೋಡಿ...
ವೆಲ್ಲಿಂಗ್ಟನ್[ಏ.03]: ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಗೆ 15 ಆಟಗಾರರನ್ನೊಳಗೊಂಡ ಬಲಿಷ್ಠ ತಂಡವನ್ನು ಪ್ರಕಟಿಸಿದ್ದು, ಕೇನ್ ವಿಲಿಯಮ್ಸನ್ ತಂಡವನ್ನು ಮುನ್ನಡೆಸಲಿದ್ದಾರೆ.
2015ರಲ್ಲಿ ನಡೆದ ವಿಶ್ವಕಪ್’ನಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಕಿವೀಸ್ ಪಡೆ, ಈ ಬಾರಿ ಶತಾಯಗತಾಯ ಕಪ್ ಗೆಲ್ಲುವ ನಿಟ್ಟಿನಲ್ಲಿ ಸಮತೋಲಿತ ತಂಡವನ್ನು ಪ್ರಕಟಿಸಿದ್ದು, ಅನುಭವಿ ಬ್ಯಾಟ್ಸ್’ಮನ್’ಗಳಾದ ರಾಸ್ ಟೇಲರ್ ಹಾಗೂ ಮಾರ್ಟಿನ್ ಗಪ್ಟಿಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಟಾಮ್ ಲಾಥಮ್ ಜತೆಗೆ ಹೆಚ್ಚುವರಿ ವಿಕೆಟ್ ಕೀಪರ್ ಆಗಿ ಟಾಮ್ ಬ್ಲಂಡೆಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ನಾಯಕ ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ ನಾಲ್ಕನೇ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದು, ದೇಶಕ್ಕೆ ಚೊಚ್ಚಲ ವಿಶ್ವಕಪ್ ಜಯಿಸುವ ವಿಶ್ವಾಸದಲ್ಲಿದ್ದಾರೆ. ವಿಲಿಯಮ್ಸನ್, ಟೇಲರ್ ಹಾಗೂ ಗಪ್ಟಿಲ್ ಈ ಮೂವರು ಕ್ರಿಕೆಟಿಗರು 526 ಬಾರಿ ಕಿವೀಸ್ ತಂಡವನ್ನು ಪ್ರತಿನಿಧಿಸಿದ್ದಾರೆ.
ಇನ್ನು ಬಲಿಷ್ಠ ಬೌಲಿಂಗ್ ಲೈನ್ ಅಪ್ ಹೊಂದಿರುವ ನ್ಯೂಜಿಲೆಂಡ್ ತಂಡದ ವೇಗದ ಬೌಲಿಂಗ್ ಸಾಮರ್ಥ್ಯವನ್ನು ಟಿಮ್ ಸೌಥಿ ಮುನ್ನಡೆಸಲಿದ್ದು, ಇವರಿಗೆ ಟ್ರೆಂಟ್ ಬೌಲ್ಟ್, ಲೂಕಿ ಫರ್ಗ್ಯುಸನ್ ಹಾಗೂ ಮ್ಯಾಟ್ ಹೆನ್ರಿ ಸಾಥ್ ನೀಡಲಿದ್ದಾರೆ. ಇನ್ನು ಜಿಮ್ಮಿ ನೀಶಮ್ ಹಾಗೂ ಕಾಲಿನ್ ಡಿ ಗ್ರ್ಯಾಂಡ್’ಹೋಮ್ ಆಲ್ರೌಂಡರ್ ಆಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಮಿಚೆಲ್ ಸ್ಯಾಂಟ್ನರ್ ಸ್ಪಿನ್ನರ್ ವಿಭಾಗದ ನೇತೃತ್ವ ವಹಿಸಲಿದ್ದು, ಇಶ್ ಸೋಧಿ, ಟೋಡ್ ಆಶ್ಲೆ ಕೂಡಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ವಿಶ್ವಕಪ್ 2019: ಇಲ್ಲಿದೆ ಟೀಂ ಇಂಡಿಯಾ 15 ಸದಸ್ಯರ ಸಂಭಾವ್ಯ ತಂಡ!
ನ್ಯೂಜಿಲೆಂಡ್ ತಂಡವು ಜೂನ್ 01ರಂದು ಕಾರ್ಡಿಪ್’ನಲ್ಲಿ ಶ್ರೀಲಂಕಾ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
ನ್ಯೂಜಿಲೆಂಡ್ ತಂಡ ಹೀಗಿದೆ:
ಕೇನ್ ವಿಲಿಯಮ್ಸನ್[ನಾಯಕ], ಟಾಮ್ ಬ್ಲಂಡೆಲ್, ಟ್ರೆಂಟ್ ಬೌಲ್ಟ್, ಕಾಲಿನ್ ಡಿ ಗ್ರ್ಯಾಂಡ್’ಹೋಮ್, ಲೂಕಿ ಫರ್ಗ್ಯುಸನ್, ಮಾರ್ಟಿನ್ ಗಪ್ಟಿಲ್, ಮ್ಯಾಟ್ ಹೆನ್ರಿ, ಟಾಮ್ ಲಾಥಮ್, ಕಾಲಿನ್ ಮನ್ರೋ, ಜಿಮ್ಮಿ ನೀಶಮ್, ಹೆನ್ರಿ ನಿಕೋಲಸ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ರಾಸ್ ಟೇಲರ್.