ಮೆಲ್ಬರ್ನ್‌[ಏ.30]: 2020ರಲ್ಲಿ ಭಾರತ-ಆಸ್ಪ್ರೇಲಿಯಾ ನಡುವೆ ನಡೆಯಬೇಕಿರುವ ದ್ವಿಪಕ್ಷೀಯ ಏಕದಿನ ಸರಣಿ ವಿಚಾರವಾಗಿ ನಡೆಯುತ್ತಿರುವ ಹಗ್ಗಜಗ್ಗಾಟದಲ್ಲಿ ಬಿಸಿಸಿಐ ಮೇಲುಗೈ ಸಾಧಿಸಿದೆ. 

ಬಿಸಿಸಿಐ ಅನ್ನು ಎದುರು ಹಾಕಿಕೊಂಡರೆ ಪ್ರಸಾರ ಹಕ್ಕು, ಜಾಹೀರಾತುಗಳ ಸಮಸ್ಯೆ ಎದುರಾಗಲಿದೆ. ಇದರಿಂದಾಗಿ ಕೋಟ್ಯಂತರ ರುಪಾಯಿ ನಷ್ಟವಾಗಲಿದೆ ಎನ್ನುವುದನ್ನು ಅರಿತ ಕ್ರಿಕೆಟ್‌ ಆಸ್ಪ್ರೇಲಿಯಾ ಉನ್ನತ ಅಧಿಕಾರಿಗಳು, ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಗೆ ಹೆದರಿ ಮುಂದಿನ ತಿಂಗಳು ಸಂಧಾನಕ್ಕಾಗಿ ಭಾರತಕ್ಕೆ ಆಗಮಿಸಲಿದ್ದಾರೆ. ಕ್ರಿಕೆಟ್‌ ಆಸ್ಪ್ರೇಲಿಯಾ ಮುಖ್ಯಸ್ಥ ಎರ್ಲ್ ಎಡಿಂಗ್ಸ್‌ ಹಾಗೂ ಸಿಇಒ ಕೆವಿನ್‌ ರಾಬರ್ಟ್ಸ್ ಮುಂಬೈನಲ್ಲಿ ಬಿಸಿಸಿಐ ಅಧಿಕಾರಿಗಳನ್ನು ಭೇಟಿ ಮಾಡಿ, ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲಿದ್ದಾರೆ ಎಂದು ಆಸ್ಪ್ರೇಲಿಯಾದ ಪ್ರತಿಷ್ಠಿತ ದಿನಪತ್ರಿಕೆಯೊಂದು ವರದಿ ಮಾಡಿದೆ.

ಬಿಸಿಸಿಐಗೆ ಕ್ರಿಕೆಟ್‌ ಆಸ್ಪ್ರೇಲಿಯಾ ಬ್ಲ್ಯಾಕ್‌ಮೇಲ್‌!

2020ರ ಜನವರಿಯಲ್ಲಿ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲು ಭಾರತ ಪ್ರವಾಸ ಕೈಗೊಳ್ಳುವಂತೆ ಬಿಸಿಸಿಐ, ಕ್ರಿಕೆಟ್‌ ಆಸ್ಪ್ರೇಲಿಯಾಗೆ ಕೇಳಿಕೊಂಡಿತ್ತು. ಆದರೆ ಕ್ರಿಕೆಟ್‌ ಆಸ್ಪ್ರೇಲಿಯಾ, ಆ ಸಮಯದಲ್ಲಿ ನ್ಯೂಜಿಲೆಂಡ್‌ ಜತೆ ತವರಿನಲ್ಲಿ ಸರಣಿ ಆಯೋಜಿಸಲು ಯೋಜನೆ ರೂಪಿಸಿರುವುದಾಗಿ ಹೇಳಿತ್ತು. ಬಳಿಕ ಮಹಿಳಾ ಐಪಿಎಲ್‌ಗೆ ತನ್ನ ಆಟಗಾರ್ತಿಯರನ್ನು ಕಳುಹಿಸಬೇಕಾದರೆ ಏಕದಿನ ಸರಣಿ ಬಿಕ್ಕಟ್ಟನ್ನು ಮೊದಲು ಪರಿಹರಿಸಬೇಕಾಗಿ ಇ-ಮೇಲ್‌ ಮೂಲಕ ‘ಬ್ಲ್ಯಾಕ್‌ಮೇಲ್‌’ ಮಾಡಿತ್ತು. ಕ್ರಿಕೆಟ್‌ ಆಸ್ಪ್ರೇಲಿಯಾದ ಒತ್ತಡಕ್ಕೆ ಮಣಿಯದ ಬಿಸಿಸಿಐ, ಸರಣಿ ಆಡಲು ಭಾರತಕ್ಕೆ ಬರದಿದ್ದರೆ ಕೋಟ್ಯಂತರ ರುಪಾಯಿ ನಷ್ಟ ಅನುಭವಿಸುತ್ತೀರಿ ಎಂದು ಎಚ್ಚರಿಸಿದ ಬಳಿಕ ಕ್ರಿಕೆಟ್‌ ಆಸ್ಪ್ರೇಲಿಯಾ ಸಂಧಾನಕ್ಕೆ ಮುಂದಾಗಿದೆ.

ಕ್ರಿಕೆಟ್‌ ಆಸ್ಪ್ರೇಲಿಯಾ ಎಡವಟ್ಟು: ಆಟಗಾರ್ತಿರಿಗೆ 21 ಲಕ್ಷ ರುಪಾಯಿ ನಷ್ಟ!

ಮಹಿಳಾ ಐಪಿಎಲ್‌ ಪ್ರದರ್ಶನ ಪಂದ್ಯಗಳಿಗೆ ತನ್ನ ಆಟಗಾರ್ತಿಯರನ್ನು ಕಳುಹಿಸದೆ ಕ್ರಿಕೆಟ್‌ ಆಸ್ಪ್ರೇಲಿಯಾ ಎಡವಟ್ಟು ಮಾಡಿದೆ. ಎಲೈಸಿ ಪೆರ್ರಿ, ಮೆಗ್‌ ಲ್ಯಾನಿಂಗ್‌, ಅಲಿಸಾ ಹೀಲಿಯನ್ನು ಭಾರತಕ್ಕೆ ಪ್ರಯಾಣಿಸದಂತೆ ಕ್ರಿಕೆಟ್‌ ಆಸ್ಪ್ರೇಲಿಯಾ ತಡೆದಿತ್ತು. ಈ ಮೂವರಿಗೆ 3ರಿಂದ 4 ಪಂದ್ಯಗಳನ್ನು ಆಡಲು ತಲಾ 21 ಲಕ್ಷ ರುಪಾಯಿ ಸಂಭಾವನೆ ನೀಡುವುದಾಗಿ ಬಿಸಿಸಿಐ ಪ್ರಸ್ತಾಪಿಸಿತ್ತು. ಆದರೆ ಸಂವಹನ ಕೊರತೆಯಿಂದಾಗಿ ಆಸೀಸ್‌ ಆಟಗಾರ್ತಿಯರ ಹೆಸರನ್ನು ಕೈಬಿಟ್ಟು ಬಿಸಿಸಿಐ ತಂಡ ಪ್ರಕಟಿಸಿತು.