ನವದೆಹಲಿ[ಏ.27]: ಮುಂದಿನ ತಿಂಗಳು ನಡೆಯಲಿರುವ ಮಹಿಳಾ ಐಪಿಎಲ್‌ ಪ್ರದರ್ಶನ ಪಂದ್ಯಗಳಲ್ಲಿ ಪಾಲ್ಗೊಳ್ಳದಂತೆ ಆಸ್ಪ್ರೇಲಿಯಾ ಆಟಗಾರ್ತಿಯರನ್ನು ಕ್ರಿಕೆಟ್‌ ಆಸ್ಪ್ರೇಲಿಯಾ ತಡೆದಿದೆ.

ಮುಂದಿನ ವರ್ಷ ನಡೆಯಬೇಕಿರುವ ದ್ವಿಪಕ್ಷೀಯ ಏಕದಿನ ಸರಣಿ ವಿಚಾರವಾಗಿ ಬಿಸಿಸಿಐ ಹಾಗೂ ಕ್ರಿಕೆಟ್‌ ಆಸ್ಪ್ರೇಲಿಯಾ ನಡುವೆ ಬಿಕ್ಕಟ್ಟು ಶುರುವಾಗಿದ್ದು, ಸರಣಿ ಮುಂದೂಡದಿದ್ದರೆ ಆಟಗಾರ್ತಿಯರನ್ನು ಐಪಿಎಲ್‌ಗೆ ಕಳುಹಿಸುವುದಿಲ್ಲ ಎಂದು ಕ್ರಿಕೆಟ್‌ ಆಸ್ಪ್ರೇಲಿಯಾ ಬ್ಲ್ಯಾಕ್‌ಮೇಲ್‌ ಮಾಡುತ್ತಿದೆ ಎಂದು ಬಿಸಿಸಿಐ ಅಚ್ಚರಿಕೆಯ ಹೇಳಿಕೆ ನೀಡಿದೆ. ಆಸ್ಪ್ರೇಲಿಯಾದ ಮೂವರು ಆಟಗಾರ್ತಿಯರು, ಮೆಗ್‌ ಲ್ಯಾನಿಂಗ್‌, ಎಲೈಸಿ ಪೆರ್ರಿ ಹಾಗೂ ಅಲೀಸಾ ಹೀಲಿ ಐಪಿಎಲ್‌ನಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಅವರನ್ನು ತಡೆಯಲಾಗಿದೆ. ಮೇ 6ರಿಂದ 11ರ ವರೆಗೂ ಜೈಪುರದಲ್ಲಿ ಪಂದ್ಯಗಳು ನಡೆಯಲಿವೆ.

ಇಲ್ಲಿದೆ ನೋಡಿ ವಿಶ್ವಕಪ್ ಟೂರ್ನಿಗೆ ರೆಡಿಯಾದ 10 ತಂಡಗಳ ಸಂಪೂರ್ಣ ಪಟ್ಟಿ

ಕ್ರಿಕೆಟ್‌ ಆಸ್ಪ್ರೇಲಿಯಾದ ಉನ್ನತ ಅಧಿಕಾರಿ ಬೆಲಿಂಡಾ ಕ್ಲಾರ್ಕ್, ಬಿಸಿಸಿಐಗೆ ಇ-ಮೇಲ್‌ ಬರೆದಿದ್ದು, ಅದರಲ್ಲಿ ಏಕದಿನ ಸರಣಿಯ ಬಿಕ್ಕಟ್ಟನ್ನು ಮೊದಲು ಬಗೆಹರಿಸುವಂತೆ ಹೇಳಲಾಗಿದೆ. ‘ಐಪಿಎಲ್‌ಗೆ ಆಟಗಾರ್ತಿಯರನ್ನು ಕಳುಹಿಸುವ ಬಿಸಿಸಿಐ ಆಹ್ವಾನವನ್ನು ಪರಿಗಣಿಸುತ್ತೇವೆ. ಆದರೆ ಮೊದಲು ಪುರುಷರ ಏಕದಿನ ಸರಣಿ ಆಯೋಜನೆ ಕುರಿತು ಶುರುವಾಗಿರುವ ಸಮಸ್ಯೆಯನ್ನು ಬಿಸಿಸಿಐ ಹಾಗೂ ಕ್ರಿಕೆಟ್‌ ಆಸ್ಪ್ರೇಲಿಯಾ ಸಿಇಒಗಳು ಬಗೆಹರಿಸಿಕೊಳ್ಳಬೇಕು. ಈ ಸಮಸ್ಯೆಯತ್ತ ಗಮನ ಹರಿಸುತ್ತೀರಿ ಎಂದು ಅರ್ಥ ಮಾಡಿಕೊಳ್ಳುತ್ತೇನೆ’ ಎಂದು ಬೆಲಿಂಡಾ ತಮ್ಮ ಇ-ಮೇಲ್‌ನಲ್ಲಿ ತಿಳಿಸಿದ್ದಾರೆ.

ಕ್ರಿಕೆಟ್‌ ಆಸ್ಪ್ರೇಲಿಯಾದ ಈ ನಡೆಯನ್ನು ಬಿಸಿಸಿಐ ತೀವ್ರವಾಗಿ ಟೀಕಿಸಿದೆ. ‘ಬೆಲಿಂಡಾ ಇ-ಮೇಲ್‌ನಲ್ಲಿರುವ ಅಂಶಗಳನ್ನು ಗಮನಿಸಿದರೆ, ಕ್ರಿಕೆಟ್‌ ಆಸ್ಪ್ರೇಲಿಯಾ ಬ್ಲ್ಯಾಕ್‌ಮೇಲ್‌ ತಂತ್ರವನ್ನು ಬಳಸುತ್ತಿದೆ ಎನ್ನುವುದು ಅರ್ಥವಾಗುತ್ತದೆ. ಮಹಿಳಾ ಆಟಗಾರ್ತಿಯರನ್ನು ಐಪಿಎಲ್‌ಗೆ ಕಳುಹಿಸುವುದಕ್ಕೂ ಪುರುಷರ ಸರಣಿಗೂ ಏನು ಸಂಬಂಧ’ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಕಿಡಿಕಾರಿದ್ದಾರೆ. ಆಟಗಾರ್ತಿಯರನ್ನು ಕಳುಹಿಸಿಕೊಡಿ ಎಂದು ಬಿಸಿಸಿಐ ಏ.4ಕ್ಕೆ ಇ-ಮೇಲೆ ಕಳುಹಿಸಿತ್ತು. ಬೆಲಿಂಡಾ ಏ.5ಕ್ಕೆ ಪ್ರತಿಕ್ರಿಯಿಸಿದ್ದಾರೆ. ಆ ಬಳಿಕ ಕ್ರಿಕೆಟ್‌ ಆಸ್ಪ್ರೇಲಿಯಾ, ಬಿಸಿಸಿಐ ಅನ್ನು ಮತ್ತೆ ಸಂಪರ್ಕಿಸಿಲ್ಲ. ಹೀಗಾಗಿ ಬಿಸಿಸಿಐ, ಮಹಿಳಾ ಐಪಿಎಲ್‌ ಪ್ರದರ್ಶನ ಪಂದ್ಯಗಳಿಗೆ ಆಸ್ಪ್ರೇಲಿಯಾ ಆಟಗಾರ್ತಿಯರನ್ನು ಬಿಟ್ಟು ತಂಡ ಪ್ರಕಟಿಸಿದೆ.

ಏನಿದು ಏಕದಿನ ಸರಣಿ ಬಿಕ್ಕಟ್ಟು?

2020ರಲ್ಲಿ ಭಾರತ ಹಾಗೂ ಆಸ್ಪ್ರೇಲಿಯಾ ನಡುವೆ ದ್ವಿಪಕ್ಷೀಯ ಏಕದಿನ ಸರಣಿ ನಡೆಯಬೇಕಿದೆ. ಈ ಸರಣಿಯನ್ನು ವರ್ಷದ ಮಧ್ಯದಲ್ಲಿ ಆಯೋಜಿಸಲು ಕ್ರಿಕೆಟ್‌ ಆಸ್ಪ್ರೇಲಿಯಾ ಚಿಂತನೆ ನಡೆಸಿತ್ತು. ಆದರೆ ಬಿಸಿಸಿಐ, ವರ್ಷದ ಆರಂಭದಲ್ಲೇ ಭಾರತ ಪ್ರವಾಸ ಕೈಗೊಳ್ಳುವಂತೆ ಕ್ರಿಕೆಟ್‌ ಆಸ್ಪ್ರೇಲಿಯಾ ಮೇಲೆ ಒತ್ತಡ ಹೇರಿದೆ. ವರ್ಷದ ಆರಂಭದಲ್ಲಿ ಆಸ್ಪ್ರೇಲಿಯಾ, ನ್ಯೂಜಿಲೆಂಡ್‌ ತಂಡಕ್ಕೆ ಆತಿಥ್ಯ ವಹಿಸಬೇಕಿದೆ. ನ್ಯೂಜಿಲೆಂಡ್‌ ಕ್ರಿಕೆಟ್‌ ಮಂಡಳಿ ಸರಣಿ ಮುಂದೂಡಲು ಒಪ್ಪಿಗೆ ಸೂಚಿಸಿದೆಯಾದರೂ, ಕ್ರಿಕೆಟ್‌ ಆಸ್ಪ್ರೇಲಿಯಾ ಬೇಸಿಗೆ ರಜೆ ವೇಳೆಯೇ ಸರಣಿ ಆಯೋಜನೆ ಮಾಡಬೇಕು ಎಂದು ಪಟ್ಟು ಹಿಡಿದಿದೆ. ಆದರೆ ಭಾರತ ಪ್ರವಾಸ ಕೈಗೊಳ್ಳದಿದ್ದರೆ ಕೋಟ್ಯಂತರ ರುಪಾಯಿ ನಷ್ಟವಾಗಲಿದೆ ಎಂದು ಬಿಸಿಸಿಐ ಎಚ್ಚರಿಸಿರುವ ಕಾರಣ, ಈ ಅವಕಾಶವನ್ನೂ ಕಳೆದುಕೊಳ್ಳಲು ಆಸ್ಪ್ರೇಲಿಯಾ ಸಿದ್ಧವಿಲ್ಲ.