Commonwealth Games ಚಿನ್ನ ಗೆದ್ದ ಶರತ್ ಕಮಲ್, ಬೆಳ್ಳಿಗೆ ತೃಪ್ತಿಪಟ್ಟ ಭಾರತ ಹಾಕಿ ತಂಡ..!

* ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತದ ಅಭಿಯಾನ ಅಂತ್ಯ

*  ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ 22 ಚಿನ್ನ, 16 ಬೆಳ್ಳಿ ಹಾಗೂ 23 ಕಂಚಿನ ಪದಕ ಗೆದ್ದ ಭಾರತ

* ಪುರುಷರ ಟೇಬಲ್‌ ಟೆನಿಸ್‌ ಸಿಂಗಲ್ಸ್‌ನಲ್ಲಿ ಚಿನ್ನ ಗೆದ್ದ ಶರತ್ ಕಮಲ್

Commonwealth Games Sharath Kamal clinch gold Indian mens Hockey Team settle for Silver kvn

ಬರ್ಮಿಂಗ್‌ಹ್ಯಾಮ್‌(ಆ.08): ಕಾಮನ್‌ವೆಲ್ತ್‌ ಗೇಮ್ಸ್‌ ಕ್ರೀಡಾಕೂಟದ ಕೊನೆಯ ದಿನವೂ ಭಾರತದ ಕ್ರೀಡಾಪಟುಗಳ ಪದಕದ ಬೇಟೆ ಮುಂದುವರೆದಿದ್ದು, ಅನುಭವಿ ಟೇಬಲ್ ಟೆನಿಸ್ ಪಟು ಶರತ್ ಕಮಲ್‌ ಪುರುಷರ ಸಿಂಗಲ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ಹಾಕಿ ತಂಡವು ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು 7-0 ಅಂತರದ ಹೀನಾಯ ಸೋಲು ಕಾಣುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.

2018ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ತೃಪ್ತಿಪಟ್ಟುಕೊಂಡಿದ್ದ ಶರತ್ ಕಮಲ್, ಇದೀಗ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಇಂಗ್ಲೆಂಡ್‌ನ ಲಿಯಾಮ್ ಪಿಚ್‌ಪೋರ್ಡ್‌ ಎದುರು ಫೈನಲ್‌ ಪಂದ್ಯದಲ್ಲಿ 4-1 ಅಂತರದ ಗೆಲುವು ದಾಖಲಿಸುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಅಂದಹಾಗೆ ಇದು ಈ ಬಾರಿಯ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಶರತ್ ಕಮಲ್ ಜಯಿಸಿದ ಮೂರನೇ ಪದಕ ಎನಿಸಿಕೊಂಡಿತು. ಇದಷ್ಟೇ ಅಲ್ಲದೇ ಕಾಮನ್‌ವೆಲ್ತ್‌ ಗೇಮ್ಸ್‌ನ ವಿವಿಧ  ವಿಭಾಗಗಳಲ್ಲಿ ಒಟ್ಟಾರೆ 7ನೇ ಚಿನ್ನದ ಪದಕ ಗೆಲ್ಲುವಲ್ಲಿ ಶರತ್ ಕಮಲ್ ಯಶಸ್ವಿಯಾದರು. 

ಬೆಳ್ಳಿಗೆ ತೃಪ್ತಿಪಟ್ಟುಕೊಂಡ ಭಾರತ ಹಾಕಿ ತಂಡ

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ 6 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಆಸ್ಟ್ರೇಲಿಯಾ ತಂಡವು ಭಾರತ ಎದುರು ಅನಾಯಾಸವಾಗಿ ಗೆಲುವು ದಾಖಲಿಸುವ ಮೂಲಕ 7ನೇ ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಏಕಪಕ್ಷೀಯವಾಗಿ ನಡೆದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಭಾರತ 7-0 ಅಂತರದ ಹೀನಾಯ ಸೋಲು ಅನುಭವಿಸಿತು.

Commonwealth Games: ಬ್ಯಾಡ್ಮಿಂಟನ್ ಡಬಲ್ಸ್‌ನಲ್ಲಿ ಚಿನ್ನ ಗೆದ್ದು ಬೀಗಿದ ಚಿರಾಗ್- ಸಾತ್ವಿಕ್ ಸಾಯಿರಾಜ್

ಚಿನ್ನದ ಪದಕಕ್ಕಾಗಿ ನಡೆದ ಕಾದಾಟದಲ್ಲಿ ಆಸ್ಟ್ರೇಲಿಯಾ ತಂಡವು ಆರಂಭದಿಂದಲೇ ಆಕ್ರಮಣಕಾರಿಯಾಟವಾಡುವ ಮೂಲಕ ಭಾರತದ ಮೇಲೆ ಒತ್ತಡ ಹೇರಿತು. ಮೊದಲ ಕ್ವಾರ್ಟರ್‌ನಲ್ಲಿ ಆಸ್ಟ್ರೇಲಿಯಾ 2 ಗೋಲು ಬಾರಿಸುವ ಮೂಲಕ 2-0 ಮುನ್ನಡೆ ಸಾಧಿಸಿತು. ಇನ್ನು ಎರಡನೇ ಕ್ವಾರ್ಟರ್ ಅಂತ್ಯಕ್ಕೆ ಈ ಅಂತರವನ್ನು ಆಸ್ಟ್ರೇಲಿಯಾ 5-0ಗೆ ಹೆಚ್ಚಿಸಿಕೊಂಡಿತು. ಮೂರನೇ ಕ್ವಾರ್ಟರ್‌ನಲ್ಲಿ ಆಸ್ಟ್ರೇಲಿಯಾ ಅಂತರವನ್ನು 7-0 ಗೆ ಹೆಚ್ಚಿಸಿಕೊಂಡಿತು. ಭಾರತ ತಂಡವು ಕೊನೆಯ ಕ್ವಾರ್ಟರ್‌ನಲ್ಲಿ ಸಹ ಗೋಲು ಬಾರಿಸಲು ಹರಸಾಹಸ ಪಟ್ಟಿತಾದರೂ, ಆಸ್ಟ್ರೇಲಿಯಾ ಇದಕ್ಕೆ ಅವಕಾಶ ಮಾಡಿಕೊಡಲಿಲ್ಲ.

ಇದರೊಂದಿಗೆ ಭಾರತ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ 22 ಚಿನ್ನ, 16 ಬೆಳ್ಳಿ ಹಾಗೂ 23 ಕಂಚಿನ ಪದಕಗಳೊಂದಿಗೆ ಒಟ್ಟು 61 ಪದಕಗಳ ಸಹಿತ ಪದಕ ಪಟ್ಟಿಯಲ್ಲಿ 4ನೇ ಸ್ಥಾನದೊಂದಿಗೆ ತನ್ನ ಅಭಿಯಾನವನ್ನು ಮುಗಿಸಿದೆ. ಇನ್ನು ಆಸ್ಟ್ರೇಲಿಯಾ 67 ಚಿನ್ನ, 57 ಬೆಳ್ಳಿ, 54 ಕಂಚಿನ ಪದಕ ಸಹಿತ ಮೊದಲ ಸ್ಥಾನ ಪಡೆದರೇ, ಇಂಗ್ಲೆಂಡ್‌ 173 ಪದಕಗಳೊಂದಿಗೆ ಎರಡನೇ ಸ್ಥಾನ ಹಾಗೂ ಕೆನಡಾ 26 ಚಿನ್ನ, 32 ಬೆಳ್ಳಿ ಹಾಗೂ  34 ಕಂಚು ಸಹಿತ ಒಟ್ಟು 92 ಪದಕಗಳೊಂದಿಗೆ ಮೂರನೇ ಸ್ಥಾನ ಪಡೆದಿದೆ.

Latest Videos
Follow Us:
Download App:
  • android
  • ios