ಯಾವುದೇ ಒತ್ತಡವಿಲ್ಲದೇ ಆಡಿ ಗೆದ್ದು ಬನ್ನಿ; ಕಾಮನ್‌ವೆಲ್ತ್ ಗೇಮ್ಸ್ ಅಥ್ಲೀಟ್‌ಗಳಿಗೆ ಮೋದಿ ಶುಭಹಾರೈಕೆ
* ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಭಾರತೀಯ ಅಥ್ಲೀಟ್‌ಗಳ ಜತೆ ನರೇಂದ್ರ ಮೋದಿ ಮಾತುಕತೆ
* ನಿಮ್ಮ ಶಕ್ತಿ-ಸಾಮರ್ಥ್ಯಕ್ಕೆ ತಕ್ಕಂತೆ ಚೆನ್ನಾಗಿ ಆಡಿ ಎಂದ ಪ್ರಧಾನಿ ನರೇಂದ್ರ ಮೋದಿ
* ಜುಲೈ 28ರಿಂದ ಆರಂಭವಾಗಲಿರುವ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟ
ನವದೆಹಲಿ(ಜು.20): ಬರ್ಮಿಂಗ್‌ಹ್ಯಾಮ್‌ನಲ್ಲಿ ಇದೇ ಜುಲೈ 28ರಿಂದ ಆರಂಭವಾಗಲಿರುವ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟಕ್ಕೆ ಇಡೀ ಭಾರತ ತಂಡ ಸಜ್ಜಾಗಿದ್ದು, ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿರುವ ಅಥ್ಲೀಟ್‌ಗಳ ಜತೆ ಇಂದು ಪ್ರಧಾನಿ ನರೇಂದ್ರ ಮೋದಿ ಮನಬಿಚ್ಚಿ ಮಾತನಾಡಿದ್ದಾರೆ. ನಿಮ್ಮ ಶಕ್ತಿ-ಸಾಮರ್ಥ್ಯಕ್ಕೆ ತಕ್ಕಂತೆ ಚೆನ್ನಾಗಿ ಆಡಿ, ಆದರೆ ಯಾವುದೇ ಒತ್ತಡಕ್ಕೆ ಒಳಗಾಗದಿರಿ. ಒಳ್ಳೆಯ ರೀತಿಯಲ್ಲಿ ಆಡಿ ಬನ್ನಿ ಎಂದು ಪ್ರಧಾನಿ ನರೇಂದ್ರ ಮೋದಿ 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪಾಲ್ಗೊಂಡಿರುವ ಭಾರತ ತಂಡಕ್ಕೆ ಶುಭ ಹಾರೈಸಿದ್ದಾರೆ.
ವರ್ಚುವಲ್ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಅವರು, ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ನಾವು ಪ್ರಾಬಲ್ಯ ಹೊಂದಿರುವ ಶೂಟಿಂಗ್ಸ್ ಗೇಮ್ಸ್ ಇಲ್ಲದೇ ಇರುವ ಹೊರತಾಗಿಯೂ ನಾವು ಹಿಂದೆಂದಿಗಿಂತಲೂ ಬಲಿಷ್ಠ ತಂಡವನ್ನು ಹೊಂದಿದ್ದೇವೆ. ಕಳೆದ ಆವೃತ್ತಿಯ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ನಾವು ತೋರಿದ್ದಕ್ಕಿಂತ ಉತ್ತಮ ಪ್ರದರ್ಶನವನ್ನು ಈ ಬಾರಿ ತೋರುವ ವಿಶ್ವಾಸವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸ್ಪರ್ಧೆಯಲ್ಲಿ ಯಾವುದೇ ತಪ್ಪುಗಳನ್ನು ಮಾಡಬೇಡಿ. ಯಾಕೆಂದರೇ ಇದು ವಿಶ್ವದರ್ಜೆಯ ಕ್ರೀಡಾಕೂಟವಾಗಿದೆ. ನಮ್ಮ ಕ್ರೀಡಾಪಟುಗಳು ಕೂಡಾ ವಿಶ್ವದರ್ಜೆಯ ಈ ಕ್ರೀಡಾಕೂಟಕ್ಕೆ ಸಕಲ ರೀತಿಯಲ್ಲೂ ಸಜ್ಜಾಗಿದ್ದಾರೆನ್ನುವ ವಿಶ್ವಾಸವಿದೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ವ್ಯವಸ್ಥಾಪಕ ಕಾರ್ಯದರ್ಶಿ ರಾಜೀವ್ ಮೆಹ್ತಾ ಹೇಳಿದ್ದಾರೆ.
ಈಗಾಗಲೇ ಬಹುತೇಕ ಅಥ್ಲೀಟ್‌ಗಳು ಬರ್ಮಿಂಗ್‌ಹ್ಯಾಮ್ ತಲುಪಿದ್ದಾರೆ. ಜುಲೈ 23ಕ್ಕೆ ಕ್ರೀಡಾ ಗ್ರಾಮಕ್ಕೆ ಕ್ರೀಡಾಪಟುಗಳಿಗೆ ಪ್ರವೇಶ ಸಿಗಲಿದೆ. ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟವು ಜುಲೈ 28ರಿಂದ ಆಗಸ್ಟ್ 08ರವರೆಗೆ ನಡೆಯಲಿದೆ. ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟಕ್ಕೆ ಈಗಾಗಲೇ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ 322 ಮಂದಿಯನ್ನೊಳಗೊಂಡ ಭಾರತ ತಂಡವನ್ನು ಈಗಾಗಲೇ ಹೆಸರಿಸಿದೆ. ಇದರಲ್ಲಿ 215 ಅಥ್ಲೀಟ್‌ಗಳು ಹಾಗೂ 107 ಸಹಾಯಕ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಒಳಗೊಂಡಿದೆ.
ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಈ ಬಾರಿ ಅಥ್ಲೀಟ್‌ಗಳು 5 ವಿವಿಧ ಕ್ರೀಡಾಗ್ರಾಮಗಳಲ್ಲಿ ಉಳಿದುಕೊಳ್ಳಲಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಮಹಿಳಾ ಕ್ರಿಕೆಟ್ ಟೂರ್ನಿಯು ನಡೆಯಲಿದ್ದು, ಮಹಿಳಾ ಕ್ರಿಕೆಟ್ ತಂಡವು ಉಳಿದುಕೊಳ್ಳಲು ಬರ್ಮಿಂಗ್‌ಹ್ಯಾಮ್ ಸಿಟಿ ಸೆಂಟರ್‌ನಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ.
Commonwealth Games ಭಾರತೀಯ ಅಥ್ಲೀಟ್‌ಗಳ ಜತೆ ಪ್ರಧಾನಿ ಮೋದಿ ಸಂವಾದಕ್ಕೆ ಡೇಟ್ ಫಿಕ್ಸ್
2018ರಲ್ಲಿ ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತವು 66 ಪದಕಗಳನ್ನು ಗೆಲ್ಲುವ ಮೂಲಕ ಮೂರನೇ ಸ್ಥಾನವನ್ನು ಪಡೆದುಕೊಂಡಿತ್ತು. ಇನ್ನು ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಿದ್ದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಕಳೆದ ಆವೃತ್ತಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನಗಳನ್ನು ಪಡೆದುಕೊಂಡಿತ್ತು.