ಸದ್ಯ ಬಿಸಿಸಿಐ ‘ಎ’ ದರ್ಜೆ ಆಟಗಾರರಿಗೆ ವಾರ್ಷಿಕ ₹2 ಕೋಟಿ, ‘ಬಿ’ ದರ್ಜೆ ಆಟಗಾರರಿಗೆ ₹1 ಕೋಟಿ ಹಾಗೂ ‘ಸಿ’ ದರ್ಜೆ ಆಟಗಾರರಿಗೆ ₹50 ಲಕ್ಷ ವೇತನ ನೀಡುತ್ತಿದೆ. ಈ ಮೊತ್ತ ಗಣನೀಯ ಪ್ರಮಾಣದಲ್ಲಿ ಏರಿಕೆ ಮಾಡಲಾಗುವುದು ಎಂದು ಆಡಳಿತ ಸಮಿತಿ ಮುಖ್ಯಸ್ಥ ವಿನೋದ್ ರಾಯ್ ಹೇಳಿದ್ದಾರೆ.

ನವದೆಹಲಿ(ಡಿ.01): ಭಾರತ ಕ್ರಿಕೆಟ್ ತಂಡದ ಆಟಗಾರರ ವೇತನ ಹೆಚ್ಚಳದ ಬೇಡಿಕೆಗೆ ಸುಪ್ರೀಂ ಕೋರ್ಟ್ ನೇಮಿತ ಬಿಸಿಸಿಐ ಆಡಳಿತ ಸಮಿತಿ ಸಮ್ಮತಿ ಸೂಚಿಸಿದೆ. ವಿರಾಟ್ ಕೊಹ್ಲಿ, ಎಂ.ಎಸ್.ಧೋನಿ ಹಾಗೂ ಕೋಚ್ ರವಿಶಾಸ್ತ್ರಿ ಗುರುವಾರ ಇಲ್ಲಿ ಬಿಸಿಸಿಐ ಆಡಳಿತ ಸಮಿತಿ ಮುಖ್ಯಸ್ಥ ವಿನೋದ್ ರಾಯ್, ಡಯಾನ ಎಡುಲ್ಜಿ ಹಾಗೂ ಸಿಇಒ ರಾಹುಲ್ ಜೊಹ್ರಿಯನ್ನು ಭೇಟಿ ಮಾಡಿದರು.

ಸದ್ಯ ಬಿಸಿಸಿಐ ‘ಎ’ ದರ್ಜೆ ಆಟಗಾರರಿಗೆ ವಾರ್ಷಿಕ ₹2 ಕೋಟಿ, ‘ಬಿ’ ದರ್ಜೆ ಆಟಗಾರರಿಗೆ ₹1 ಕೋಟಿ ಹಾಗೂ ‘ಸಿ’ ದರ್ಜೆ ಆಟಗಾರರಿಗೆ ₹50 ಲಕ್ಷ ವೇತನ ನೀಡುತ್ತಿದೆ. ಈ ಮೊತ್ತ ಗಣನೀಯ ಪ್ರಮಾಣದಲ್ಲಿ ಏರಿಕೆ ಮಾಡಲಾಗುವುದು ಎಂದು ಆಡಳಿತ ಸಮಿತಿ ಮುಖ್ಯಸ್ಥ ವಿನೋದ್ ರಾಯ್ ಹೇಳಿದ್ದಾರೆ. ಆದರೆ ವೇತನವನ್ನು ಎಷ್ಟು ಹೆಚ್ಚಿಸಲಾಗುವುದು ಎಂದು ನಿರ್ದಿಷ್ಟವಾಗಿ ತಿಳಿಸಿಲ್ಲ.

ಇದೇ ವೇಳೆ ಇಕ್ಕಟ್ಟಿನ ವೇಳಾಪಟ್ಟಿಯ ಕುರಿತು ಸಹ ಚರ್ಚೆ ನಡೆದಿದ್ದು, ಭಾರತ ತಂಡ ಒಂದು ವರ್ಷದಲ್ಲಿ ಆಡುವ ದಿನಗಳ ಸಂಖ್ಯೆಯನ್ನು ಕಡಿತಗೊಳಿಸಲು ಆಡಳಿತ ಸಮಿತಿ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ. ಇನ್ನು ವಿದೇಶ ಪ್ರವಾಸಗಳಿಗೆ 2 ವಾರಗಳ ಕಾಲ ಮುಂಚಿತವಾಗಿಯೇ ತೆರಳಲು ಸಹ ಕ್ರಿಕೆಟ್ ಮಂಡಳಿ ಅನುಮತಿ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.