ವಿಶ್ವಕ್ರಿಕೆಟ್'ನಲ್ಲೊಂದು ಅಪರೂಪದ ಸಂಗತಿ; ಚಂದ್ರಪಾಲ್'ಗಳ ದಾಖಲೆ; ಒಂದೇ ಮ್ಯಾಚ್'ನಲ್ಲಿ ಅಪ್ಪ-ಮಗನ ಬ್ಯಾಟಿಂಗ್ ಝಲಕ್..!
ಜಮೈಕಾ: ವೆಸ್ಟ್‌ಇಂಡೀಸ್'ನ ದೇಶಿಯ ಕ್ರಿಕೆಟ್ ಪಂದ್ಯಾವಳಿ ಮೊನ್ನೆ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಜಮೈಕಾ ವಿರುದ್ಧದ ಪಂದ್ಯದಲ್ಲಿ ಗಯಾನ ಪರ ಅಪ್ಪ-ಮಗನ ಬ್ಯಾಟಿಂಗ್ ಮೋಡಿ ಎಲ್ಲರ ಗಮನ ಸೆಳೆಯಿತು. ಎರಡನೇ ದಿನದಾಟದಲ್ಲಿ ಶಿವನಾರಾಯಣ್ ಚಂದ್ರಪಾಲ್ (57) ಹಾಗೂ ತ್ಯಾಗನಾರಾಯಣ್ ಚಂದ್ರಪಾಲ್ (58) ತಲಾ ಅರ್ಧಶತಕ ಬಾರಿಸಿ ಮಿಂಚಿದರು. ಇವರಿಬ್ಬರ ಅರ್ಧಶತಕದ ನೆರವಿನಿಂದ ಗಯಾನಾ ತಂಡ 88.3 ಓವರ್‌ಗಳಲ್ಲಿ 262ರನ್ ಗಳಿಸಿತು. ಅಪ್ಪ-ಮಗ ನಡುವೆ 38 ರನ್ ಜೊತೆಯಾಟದಲ್ಲೂ ಭಾಗಿಯಾದರು. ಅಲ್ಲದೇ ಎದುರಾಳಿ ಜಮೈಕಾ ತಂಡದ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 7ರನ್‌ಗಳ ಮುನ್ನಡೆ ಸಾಧಿಸಿತು.
ಆರಂಭಿಕ ಆಟಗಾರರಾಗಿರುವ 20 ವರ್ಷ ವಯಸ್ಸಿನ ತ್ಯಾಗನಾರಾಯಣ್ 2013ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್'ಗೆ ಪದಾರ್ಪಣೆ ಮಾಡಿದ್ದಾರೆ. ತಂದೆ ಶಿವನಾರಾಯಣ್ ಹಾಗೆ ತ್ಯಾಗನಾರಾಯಣ್ ಕೂಡ ಎಡಗೈ ಬ್ಯಾಟ್ಸ್‌ಮನ್ ಆಗಿದ್ದು ವಿಂಡೀಸ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಶಿವನಾರಾಯಣ್ ಮತ್ತು ತ್ಯಾಗನಾರಾಯಣ್ ಇಬ್ಬರೂ ಒಟ್ಟಿಗೆ ಆಡಿದ್ದು ಇದೇ ಮೊದಲಲ್ಲ. ಸ್ಥಳೀಯ ಕ್ರಿಕೆಟ್ ಟೂರ್ನಿಯಲ್ಲಿ ಇಬ್ಬರೂ ಒಟ್ಟಿಗೆ ಆಡಿ 256 ರನ್'ಗಳ ಜೊತೆಯಾಟದಲ್ಲಿ ಭಾಗಿಯಾಗಿದ್ದುಂಟು. ಆದರೆ, ಸ್ಪರ್ಧಾತ್ಮಕ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಆಡಿ ತಲಾ ಅರ್ಧಶತಕಗಳನ್ನು ಸಿಡಿಸಿದ್ದು ಇದೇ ಮೊದಲಿರಬೇಕು.
43 ವರ್ಷದ ಚಂದ್ರಪಾಲ್ 1994ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್'ಗೆ ಪದಾರ್ಪಣೆ ಮಾಡಿದ್ದರು. ಅವರ ಮಗ ತ್ಯಾಗನಾರಾಯಣ್ ಹುಟ್ಟಿದ್ದು 1996ರಲ್ಲಿ. ಚಂದ್ರಪಾಲ್ 2015ರಲ್ಲಿ ನಿವೃತ್ತಿ ಪಡೆದರೆ, ಮಗ ಅಂತಾರಾಷ್ಟ್ರೀಯ ಕ್ರಿಕೆಟ್'ಗೆ ಪದಾರ್ಪಣೆ ಮಾಡುವ ಸನ್ನಾಹದಲ್ಲಿದ್ದಾರೆ.
(epaper.kannadaprabha.in)
